Select Your Language

Notifications

webdunia
webdunia
webdunia
webdunia

ನೀ ರಾಣಿ ನಾ ಮಹಾರಾಣಿ; ಮಾಡಬಾರದ-ನೋಡಬಾರದ ಚಿತ್ರ!

ನೀ ರಾಣಿ ನಾ ಮಹಾರಾಣಿ; ಮಾಡಬಾರದ-ನೋಡಬಾರದ ಚಿತ್ರ!
PR
ಚಿತ್ರ: ಪೂಜಾ ಗಾಂಧಿ, ಅಕ್ಷಯ್ ಎಸ್., ಅಕ್ಷಯ್ ಆರ್., ರಮೇಶ್ ಭಟ್, ಹರೀಶ್ ರಾಯ್, ಬ್ಯಾಂಕ್ ಜನಾರ್ದನ್.
ಸಂಗೀತ: ವಿನಯ ಚಂದ್ರ
ನಿರ್ದೇಶನ: ಬಿ. ರಾಮಮೂರ್ತಿ
ನಿರ್ಮಾಪಕ: ಸತ್ಯನಾರಾಯಣ

ಮಾಲಾಶ್ರೀಯನ್ನು ನಾಯಕಿಯನ್ನಾಗಿಸಿ ರಿಮೇಕನ್ನೇ ಅಲ್ಲಲ್ಲಿ ಬದಲಿಸಿ 'ರಾಣಿ ಮಹಾರಾಣಿ'ಯಲ್ಲಿ ಯಶಸ್ವಿಯಾಗಿದ್ದ ನಿರ್ದೇಶಕ ಬಿ. ರಾಮಮೂರ್ತಿಯವರು 'ನೀ ರಾಣಿ ನಾ ಮಹಾರಾಣಿ'ಯಲ್ಲಿ ಸಂಪೂರ್ಣವಾಗಿ ಎಡವಿದ್ದಾರೆ. ಏನೋ ಮಾಡಲು ಹೋಗಿ ಏನೋ ಆಗಿದೆ ಎಂಬಂತೆ ನೋಡಬಾರದ ಚಿತ್ರವಾಗಿ ಇದು ಹೊರ ಹೊಮ್ಮಿದೆ.

ಮಾಲಾಶ್ರೀ ಜೀವ ತುಂಬಿದ್ದ ದ್ವಿ ಪಾತ್ರಗಳನ್ನು ಪೂಜಾ ಗಾಂಧಿಯವರ ಕೈಯಲ್ಲಿ ಮಾಡಿಸಿ ನಗೆಪಾಟಲು ಸೃಷ್ಟಿಸಲಾಗಿದೆ. ಯಾವ ಹಂತದಲ್ಲೂ ಮಾಲಾಶ್ರೀಯವರನ್ನು ಸರಿಗಟ್ಟುವ ಕನಿಷ್ಠ ಯತ್ನವನ್ನೂ ಪೂಜಾ ಮಾಡುವುದಿಲ್ಲ. ಉಳಿದ ಪಾತ್ರಗಳ ಕುರಿತು ಮಾತನಾಡದೇ ಸುಮ್ಮನಿರುವಷ್ಟು ಕೆಟ್ಟದಾಗಿ ಚಿತ್ರ ಮೂಡಿ ಬಂದಿದೆ.

ಹಿಂದಿಯ 'ಸೀತಾ ಔರ್ ಗೀತಾ' ಮತ್ತು 'ರಾಮ್ ಔರ್ ಶ್ಯಾಮ್' ಮುಂತಾದ ಚಿತ್ರಗಳನ್ನು ಮಗ್ಗಿಗೆ ಹಾಕಿ ಮಾಡಿದ್ದ ಚಿತ್ರ ಎರಡು ದಶಕಗಳ ಹಿಂದೆ ಮಾಲಾಶ್ರೀಗೆ ಹೊಸ ಇಮೇಜನ್ನೇ ಕೊಟ್ಟಿತ್ತು. ಅದನ್ನು ಸಾಕಷ್ಟು ಬದಲಾವಣೆ ಮಾಡಿರುವ ನಿರ್ದೇಶಕರು, ಎಲ್ಲೂ ಸಲ್ಲದಂತೆ ಮಾಡಿದ್ದಾರೆ.

ರಾಣಿ (ಪೂಜಾ ಗಾಂಧಿ) ಹಳ್ಳಿಯವಳು. ಗಂಡುಬೀರಿ, ಹಠಮಾರಿ. ಯಾರ ಮಾತನ್ನೂ ಕಿವಿಗೆ ಹಾಕಿಕೊಳ್ಳದಿರುವ ಸುಂದರಿ. ಪೂಜಾ (ಪೂಜಾ ಗಾಂಧಿ) ಚಿತ್ರನಟಿ. ಸಿನಿಮಾವೊಂದರ ಚಿತ್ರೀಕರಣಕ್ಕೆಂದು ಹಳ್ಳಿಗೆ ಬಂದಾಗ ತದ್ರೂಪಿಗಳು ಅದಲು ಬದಲಾಗುತ್ತಾರೆ. ನಂತರ ಇಲ್ಲಿ ಅವರ ಬಾಯ್ ಫ್ರೆಂಡ್‌ಗಳ ಪ್ರವೇಶವಾಗುತ್ತದೆ. ಈ ನಡುವೆ ಏನು ನಡೆಯುತ್ತದೆ ಎನ್ನುವುದೇ ಚಿತ್ರದ ಕಥೆ.

ಯಾವ ದೃಶ್ಯವೂ ಅನಿರೀಕ್ಷಿತವೆನಿಸುವುದಿಲ್ಲ. ಸಂಭಾಷಣೆ ಮತ್ತು ತೆರೆಯ ಮೇಲಿನ ಸಂಗತಿಗಳು ಚಿತ್ರವನ್ನು ನೋಡಿಸುವಲ್ಲಿ ವಿಫಲವಾಗುತ್ತವೆ. ಇಬ್ಬಿಬ್ಬರು ಅಕ್ಷಯರು ಇಲ್ಲಿ ವೇಸ್ಟ್. ರಮೇಶ್ ಭಟ್, ಪ್ರಮೀಳಾ ಜೋಷಾಯ್, ಸುಂದರ್ ರಾಜ್ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ.

ವಿನಯ್ ಚಂದ್ರ ಸಂಗೀತದಲ್ಲಿ ಎರಡು ಹಾಡುಗಳು ಕುಣಿಸುತ್ತವೆ. ಭರವಸೆ ಮೂಡಿಸುವ ಹೊಸಬನಾಗಿ ಅವರಿಲ್ಲಿ ಗಮನ ಸೆಳೆಯುತ್ತಾರೆ.

ನಿಮ್ಮ ಸಮಯ, ಹಣ ಮತ್ತು ನಿದ್ದೆಯನ್ನು ಹಾಳು ಮಾಡಲೇಬೇಕೆಂದಿದ್ದರೆ ಚಿತ್ರಮಂದಿರದತ್ತ ಹೆಜ್ಜೆ ಹಾಕಿ.

Share this Story:

Follow Webdunia kannada