Select Your Language

Notifications

webdunia
webdunia
webdunia
webdunia

ನಿರೀಕ್ಷೆ ಹುಸಿಗೊಳಿಸಿದ ನಂಯಜಮಾನ್ರು

ಟಿಎಸ್ನಾಗಾಭರಣ
ರವಿಪ್ರಕಾಶ್ ರ

ಕೆಲ ನಿರ್ದೇಶಕರ ಚಿತ್ರಗಳೆಂದರೆ ಅಲ್ಲಿ ಸಮಾಜಕ್ಕೆ ಏನಾದರೂ ಒಂದು ಸಂದೇಶವಿರುತ್ತದೆ. ಜವಾಬ್ದಾರಿಯುತವಾಗಿ ಚಿತ್ರ ನಿರ್ದೇಶಿಸುತ್ತಾರೆ. ನಿರ್ದೇಶಕ ಟಿ.ಎಸ್.ನಾಗಭರಣ್ ಅವರ ಬಗ್ಗೆಯೂ ಪ್ರೇಕ್ಷಕರಿಗೆ ಇದೇ ಭಾವನೆ ಇದೆ. ಆದರೆ ಈ ವಾರ ಬಿಡುಗಡೆಯಾದ ನಂಯಜಮಾನ್ರು ಚಿತ್ರವನ್ನು ನೋಡಿದಾಗ ನಾಗಾಭರಣ ಅವರು ಯಾಕೋ ತಮ್ಮ ಜವಾಬ್ದಾರಿ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ.

MOKSHENDRA
ಒಂದು ಗಟ್ಟಿತನವಿಲ್ಲದ ಕಥೆಯಲ್ಲಿ ಚಿತ್ರವಿಡೀ ಸಾಗುತ್ತದೆ. ಎಲ್ಲೂ ಮನಸಿಗೆ ನಾಟುವ ಸಂಭಾಷಣೆಗಳಾಗಲಿ, ದೃಶ್ಯಗಳಾಗಲಿ ಕಾಣಸಿಗುವುದಿಲ್ಲ. ಚಿತ್ರದ ಕೆಲವು ದೃಶ್ಯಗಳನ್ನು ನೋಡುತ್ತಿದ್ದಂತೆ ಆಪ್ತಮಿತ್ರ ಚಿತ್ರದ ಕಥೆ ನೆನಪಾಗುತ್ತದೆ. ಅಲ್ಲಿ ಸೌಂದರ್ಯ ನಾಗವಲ್ಲಿಯಾದರೆ ಇಲ್ಲಿ ವಿಷ್ಣುವರ್ಧನ್ ಸಾಕು ಮಗಳು ನವ್ಯಾ ನಾಯರ್ ಊರ್ಮಿಳಾ ಆಗಿ ಬದಲಾಗುತ್ತಾಳೆ. ಮಾನಸಿಕ ಅಸ್ವಸ್ಥತೆಯ ಕುರಿತೇ ಇಲ್ಲೂ ಕಥೆ ಹೆಣೆಯಲಾಗಿದೆ.

ಹೊಸ ವೀಣೆಯಿಂದ ಹಳೇ ಸ್ವರ ನುಡಿಸಿದ ಹಾಗೆ ಕೆಲವೊಮ್ಮೆ ಚಿತ್ರದ ಕಥೆ ಸೋತರೂ ತಾಂತ್ರಿಕತೆಯಿಂದಾಗಿಯೋ, ನಿರ್ದೇಶಕನ ಕಸರತ್ತಿನಿಂದಾಗಿಯೋ ಚಿತ್ರ ಮೇಲೆ ಬೀಳುತ್ತದೆ. ಆದರೆ, ನಂಯಜಮಾನ್ರು ಯಾಕೋ ಎರಡರಲ್ಲೂ ಸೋತುಬಿಟ್ಟಂತೆ ಕಾಣುತ್ತಿದೆ. ಚಿತ್ರ ನಿಧಾನ ಗತಿಯಿಂದ ಸಾಗುತ್ತದೆ. ಚಿತ್ರದಲ್ಲಿ ವಿಷ್ಣುವರ್ಧನ್ ಕುಟುಂಬ ಪ್ರವಾಸ ಹೋಗಿರುವಾಗ ಬಸ್ ಪ್ರಪಾತಕ್ಕೆ ಬೀಳುತ್ತದೆ. ಆ ದೃಶ್ಯವನ್ನು ಸೂಕ್ಷ್ಮವಾಗಿ ಗಮನಿಸಿದರೆ ಬಸ್ಸಿನೊಳಗೆ ಗೊಂಬೆಗಳನ್ನು ಕೂರಿಸಿರುವುದನ್ನು ಪ್ರೇಕ್ಷಕರು ಕಾಣಬಹುದು. ಇದಕ್ಕೆ ಕಾರಣ ಕಳಪೆ ಎಡಿಟಿಂಗ್. ಚಿತ್ರದಲ್ಲಿ ಹಾಡುಗಳು ಕೂಡಾ ಹೆಚ್ಚು ಹಿತಕರವೆನಿಸುವುದಿಲ್ಲ.

28 ವರ್ಷಗಳ ಬಳಿಕ ಜತೆಯಾದ ನಾಗಾಭರಣ ಹಾಗೂ ವಿಷ್ಣುವರ್ಧನ್ ಅವರ ಬಗ್ಗೆ ಅಭಿಮಾನಿಗಳು ಭಾರೀ ನಿರೀಕ್ಷೆಯಿಂದಿದ್ದರು. ಆದರೆ ಪ್ರೇಕ್ಷಕರ ನೀರೀಕ್ಷೆ ಹುಸಿಯಾಗಿದೆ. ನಿರೀಕ್ಷಿತ ಮಟ್ಟದಲ್ಲಿ ಚಿತ್ರ ಮೂಡಿಬಂದಿಲ್ಲ. ಚಿತ್ರದಲ್ಲಿ ವಿಷ್ಣುವರ್ಧನ್ ಎಂದಿನ ಅಭಿನಯ ನೀಡಿದ್ದಾರೆ. ನವ್ಯಾ ನಾಯರ್ ಅಭಿನಯ ಇಷ್ಟವಾಗುತ್ತದೆ. ಉಳಿದಂತೆ ವಿಜಯ್‌ರಾಘವೇಂದ್ರ, ಅನಂತನಾಗ್ ಅಭಿನಯ ಎಂದಿನಂತೆ ಮನಸ್ಸಿಗೆ ಮುದ ನೀಡುತ್ತದೆ.

Share this Story:

Follow Webdunia kannada