ನಕ್ಕು ನಗಿಸುವ 'ಹೋರಿ'ಗೆ ಸ್ಪೆಷಲ್ ಎಫೆಕ್ಟ್ ಮರಿಟೈಗರ್!
ತಂದೆಯಂತೆಯೇ ತಾನೊಬ್ಬ ಪ್ರತಿಭಾವಂತ ನಟನಾಗಬಲ್ಲೆ ಎಂಬುದನ್ನು 'ಹೋರಿ' ಮೂಲಕ ತೋರಿಸುವ ಪ್ರಯತ್ನದಲ್ಲಿ ವಿನೋದ್ ಪ್ರಭಾಕರ್ ಸಾಕಷ್ಟು ಯಶಸ್ವಿಯಾಗಿದ್ದಾರೆ. 2002ರ ಮಳಯಾಲಂ ಸೂಪರ್ ಹಿಟ್ 'ಮೀಸೆ ಮಾದವನ್' ಚಿತ್ರವನ್ನು ರಿಮೇಕ್ ಮಾಡಿದ್ದರೂ, 'ಹೋರಿ'ಯಲ್ಲಿ ಕೆಲವೊಂದು ಹೊಡೆದಾಟದ ಸೀನ್‌ಗಳಲ್ಲಿ ಸೃಜನಶೀಲತೆಯನ್ನು ಬಳಸಿಕೊಳ್ಳುವ ಮೂಲಕ ಕನ್ನಡ ಚಿತ್ರರಂಗದ ಪ್ರತಿಭಾವಂತರು ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಆದರೂ ಚಿತ್ರದಲ್ಲಿ ದೊಡ್ಡಣ್ಣನ ನಟನೆ ಸ್ವಲ್ಪ ಅತಿರೇಕ ಎನಿಸುವುದು ಸುಳ್ಳಲ್ಲ.ಹಾಸ್ಯ ಪ್ರಧಾನ ಚಿತ್ರಕ್ಕೆ ವಿನೋದನ ಮೈಕಟ್ಟಿಗೆ ತಕ್ಕಂತೆ ಸಾಹಸ ಸನ್ನಿವೇಶಗಳನ್ನು ಸೇರಿಕೊಳ್ಳಲಾಗಿದೆ. ಸಾಹಸದೊಂದಿಗೆ ಹಾಸ್ಯವನ್ನೂ ಅಚ್ಚುಕಟ್ಟಾಗಿ ಮಾಡುವ ಮೂಲಕ ಚಿತ್ರದ ಯಶಸ್ಸಿನ ಸೂತ್ರದಾರನಾಗಿದ್ದಾರೆ ವಿನೋದ್ ಪ್ರಭಾಕರ್. ಚಾಣಾಕ್ಷ ಕೃಷ್ಣ ಕಳ್ಳತನದಲ್ಲಿ ನಿಸ್ಸೀಮ. ಜತೆಗೆ ಆತನಿಗಿರುವ ಧನಾತ್ಮಕ ಚಿಂತನೆ ಮತ್ತು ಹಾಸ್ಯ ಮನೋಭಾವ ಕೃಷ್ಣನನ್ನು ಸೆರೆಹಿಡಿಯುವ ಪೊಲೀಸನ ಪುತ್ರಿ ರಾಧೆಗೆ ಹಿಡಿಸಿಬಿಡುತ್ತದೆ. ಇನ್ನೇನು ಮಾಡುವುದು ಚಾಣಾಕ್ಷ ಕಳ್ಳ ಕೃಷ್ಣ ಎರಡನ್ನೂ ನಿಭಾಯಿಸುವುದರಲ್ಲಿ ತನ್ನ ಸ್ವಂತ ಬುದ್ಧಿ ಉಪಯೋಗಿಸುತ್ತಾನೆ. ಹಾಗಂತ ಪೊಲೀಸನ ಮಗಳೇನು ದಡ್ಡಿಯಲ್ಲ. ಈ ವಿಚಾರ ತಿಳಿದ ಪೊಲೀಸ್ ಪೇದೆ ತನ್ನ ಮಗಳನ್ನು ಶ್ರೀಮಂತನಿಗೆ ವಿವಾಹ ಮಾಡಿಕೊಡಲು ಎಲ್ಲಾ ಸಿದ್ಧತೆ ನಡೆಸುತ್ತಾನೆ. ಹರೆಯದ ಯುವತಿ ರಾಧೆಯ ತಂದೆಯೇನು ಬುದ್ಧಿವಂತಿಕೆಯಲ್ಲಿ ಕಡಿಮೆಯಿರುವವನೇನಲ್ಲ. ಈತನೂ ಮಾಡಬಾರದ ಕಸರತ್ತು ನಡೆಸಿ ಮನೆಯವರ ಒಪ್ಪಿಗೆ ಇಲ್ಲದಿದ್ದರೂ ಯುವತಿಯನ್ನು ಎಗರಿಸಿ ಪ್ರೇಮ ವಿವಾಹವಾಗಿರುತ್ತಾನೆ. ಇದೇ ಚಾಣಾಕ್ಷತನವನ್ನು ನಾನೇಕೆ ಉಪಯೋಗಿಸಬಾರದೆಂದು ಯೋಚಿಸುವ ಕಳ್ಳ ಕೃಷ್ಣ, ಪೊಲೀಸನ ಉಪಾಯವನ್ನೆಲ್ಲಾ ಆತನಿಗೇ ತಿರುಗಿಸಿ ಪ್ರಯೋಗಿಸುತ್ತಾನೆ. ಬಿಟ್ಟುಕೊಡಲಾಗದ ಪ್ರೀತಿ ಪೊಲೀಸನ ಮನೆಯ ಮೂಲ ದಾಖಲೆಗಳನ್ನೇ ಕದ್ದು ಅಡ ಇಡುವಂತೆ ಮಾಡುತ್ತದೆ. ತನ್ನ ಸಣ್ಣ ವಯಸ್ಸಿನಲ್ಲೇ ಕ್ರೂರ ಬಡ್ಡಿಗಾರನ ಬಳಿ ಮನೆಯನ್ನು ಅಡ ಇಟ್ಟು ಬಿಡಿಸಿಕೊಳ್ಳಲಾಗದ ಪರಿಸ್ಥಿತಿ ಕೃಷ್ಣನದು. ಈ ಕಾರಣಕ್ಕೆ ಬಡ್ಡಿಯವನ ಮಗಳಿಗೂ ಕೃಷ್ಣನಿಗೂ ಕಲಹಗಳು ಏರ್ಪಡುತ್ತಿರುತ್ತದೆ. ಹೀಗೆ ತನ್ನ ಮನೆ ಪರಿಸ್ಥಿತಿ, ಬಡತನ, ಕಳ್ಳತನ, ಪ್ರೀತಿ ಎಲ್ಲನ್ನೂ ಸುಧಾರಿಸಿಕೊಂಡು ಹೋಗುತ್ತಾನೆ ಚಾಣಾಕ್ಷ ಕೃಷ್ಣ (ವಿನೋದ್ ಪ್ರಭಾಕರ್). ಇನ್ನು ಗೌರಿ ಮಂಜಲ್, ರಮನೀತ್ ಚೌಧರಿ ಪಾತ್ರವನ್ನು ಕಷ್ಟದಲ್ಲಿ ಮೆಚ್ಚಬೇಕಷ್ಟೆ. ಮೂಲ ಚಿತ್ರ 'ಮೀಸೆ ಮಾದವನ್' ನೋಡದವರಿಗೆ ದೊಡ್ಢಣ್ಣನ ಪಾತ್ರ ಇಷ್ಟವಾದೀತು. ಆದಿ ಲೋಕೇಶ್, ಸುರೇಶ್ ಚಂದ್ರನ್, ಬ್ರಹ್ಮಾವರ್ ಅಭಿನಯ ಚಿತ್ರಕ್ಕೊಪ್ಪುವಂತದ್ದು. ರಿಮೇಕ್ ಚಿತ್ರವಾದರೂ ನಿರ್ದೇಶಕ ನಾಗೇಂದ್ರ ಮಾಗಡಿ ಅವರು ಅದನ್ನು ಉಪಯೋಗಿಸಿಕೊಂಡ ರೀತಿ ಅವರ ಪ್ರತಿಭೆಗೆ ಹಿಡಿದ ಕನ್ನಡಿ. ಚಿತ್ರದ ಸನ್ನಿವೇಶಗಳಿಗೆ ಸೂಕ್ತ ಸಂಗೀತ ನೀಡಿರುವ ರೇಣು ಕುಮಾರ್, ಗೀತೆಗಳಿಗೆ ಅಷ್ಟೊಂದು ಶ್ರದ್ದೆ ಕೊಟ್ಟಂತೆ ಕಾಣುವುದಿಲ್ಲ.