ದೇವ್ರಾಣೆ ಚಿತ್ರವಿಮರ್ಶೆ: ಚಿಟ್ಟೆಸ್ವಾಮಿಗಳ ಬಗೆಬಗೆಯ ಬಣ್ಣ
ಚಿತ್ರ: ದೇವ್ರಾಣೆತಾರಾಗಣ: ರವಿಶಂಕರ್ ಗೌಡ, ನೀತು, ತಬಲಾ ನಾಣಿ, ರಾಜು ತಾಳಿಕೋಟೆ, ಬುಲೆಟ್ ಪ್ರಕಾಶ್ನಿರ್ದೇಶನ: ಲಕ್ಕಿ ಶಂಕರ್ಸಂಗೀತ: ಲಯಾ ಕೋಕಿಲಾಕುಡಿತದಿಂದ ಆಗುವ ಪರಿಣಾಮಗಳನ್ನು ಸರಿಯಾಗಿಯೇ ಮನದಟ್ಟು ಮಾಡಿ '90'ಯಲ್ಲಿ ಗೆದ್ದ ಲಕ್ಕಿ ಶಂಕರ್ ಈ ಬಾರಿ ಡೋಂಗಿ ಸ್ವಾಮಿಗಳು ಹೇಗೆ ಹುಟ್ಟಿಕೊಳ್ಳುತ್ತಾರೆ, ಹೇಗೆ ಅವರು ಜನರಿಗೆ ಮಂಕುಬೂದಿ ಎರಚುತ್ತಾರೆ ಎಂಬುದನ್ನು ಮನೋಜ್ಞವಾಗಿ ತೋರಿಸಿದ್ದಾರೆ. ಅದಕ್ಕೊಂದು ತಾರ್ಕಿಕ ಅಂತ್ಯವನ್ನು ಕೊಡಲೂ ಯತ್ನಿಸಿದ್ದಾರೆ.'
ದೇವ್ರಾಣೆ' ಒಂದು ಸಾಮಾಜಿಕ ಪ್ರಜ್ಞೆಯ ಸಿನಿಮಾ. ಹಲವರ ಮುಖವಾಡಗಳನ್ನು ಕಳಚುತ್ತಾ, ಯಾರು ಹೇಗಿರುತ್ತಾರೆ ಎಂಬುದನ್ನು ಪ್ರತಿ ಸನ್ನಿವೇಶದಲ್ಲೂ ಬಿಚ್ಚಿಡುವ ಯತ್ನ ಮಾಡುತ್ತಾರೆ ನಿರ್ದೇಶಕರು. ಜನರಲ್ಲಿ ಇರುವ ಭಕ್ತಿಯೊಳಗಿನ ಮೌಢ್ಯವನ್ನು ನಿವಾರಿಸುವ ಕೆಲಸಕ್ಕೂ ಕೈ ಹಾಕಿದ್ದಾರೆ. ಇಂತಹ ಕಪಟ ಸ್ವಾಮಿಗಳು ಮೆರೆದಾಡುವಲ್ಲಿ ಸಮಾಜದ ಪಾತ್ರವೂ ದೊಡ್ಡದಿದೆ ಎಂದು ಚಿತ್ರ ಸಾರಿ ಸಾರಿ ಹೇಳುತ್ತದೆ.ಇಲ್ಲಿ ಚಿಟ್ಟೆಸ್ವಾಮಿ (ರವಿಶಂಕರ್ ಗೌಡ) ಹೇಗೋ ಸ್ವಾಮೀಜಿ ಎಂಬ ಪಟ್ಟಕ್ಕೆ ಏರಿದವನು. ಏನೂ ಅಲ್ಲದ ಚಿಟ್ಟೆಸ್ವಾಮಿಗೆ ಮೂರ್ತರೂಪ ಕೊಟ್ಟವರು ಜನರು. ಮುಗ್ಧತೆ ಬಳಸಿ ಮೋಸ ಮಾಡಿದವನು ಸ್ವಾಮಿ. ವಂಚಕ ಸ್ವಾಮಿ ಸಮಾಜದಲ್ಲಿ ಹೇಗೆ ಮೇಲೇರುತ್ತಾನೆ ಎಂಬುದನ್ನು ವಿಡಂಬನಾತ್ಮಕವಾಗಿ ಹೇಳಿರುವ ಶಂಕರ್ ಕೆಲವು ಕಡೆ ಮಠ ಖ್ಯಾತಿಯ ಗುರುಪ್ರಸಾದ್‌ರನ್ನು ನೆನಪಿಸುತ್ತಾರೆ.ನಿರ್ದೇಶಕರು ಕೈಗೆತ್ತಿಕೊಂಡಿರುವ ವಿಷಯ ಗಂಭೀರವಾದರೂ, ಅದರಲ್ಲಿ ಹಾಸ್ಯವೇ ವಿಜೃಂಭಿಸಿದೆ. ಗಂಭೀರವಾಗಿಯೇ ಸಾಗಿದರೆ ಸಮಸ್ಯೆ ಎದುರಾಗಬಹುದು ಎಂಬ ಕಾರಣಕ್ಕೆ ಈ ಹಾದಿಯನ್ನು ನಿರ್ದೇಶಕರು ಆಯ್ದುಕೊಂಡಿರಬಹುದು. ಮಾರ್ಕೆಟಿಂಗ್ ದೃಷ್ಟಿಯಿಂದಲೂ ಗಂಭೀರ ವಿಷಯಕ್ಕಿಂತ ಹಾಸ್ಯವೇ ಮೇಲು ಎಂಬುದು ಅವರ ನಿರ್ಧಾರವಾಗಿರಬಹುದು.ಇಷ್ಟಾದರೂ ಹಲವು ಕಡೆ ಸೆನ್ಸಾರ್ ಮಾತುಗಳಿಗೆ ಕತ್ತರಿಯಾಡಿಸಿದೆ. ವಿವಾದ ಆಗಬಹುದಾದ ಸಂಭಾಷಣೆಗಳು ಪ್ರೇಕ್ಷಕರಿಗೆ ಕೇಳದಂತೆ ಮಾಡಲಾಗಿದೆ. ಆದರೆ ಕೇಳುವ ಸಂಭಾಷಣೆಗಳೇ ಇಡೀ ಚಿತ್ರದ ಜೀವಾಳ. ಹಲವು ಕಡೆ ಕಣ್ತೆರೆಸುವ ಯತ್ನಗಳು ಸಂಭಾಷಣೆಗಳಲ್ಲಿ ಹೊರ ಬಂದಿವೆ. ಹಲವು ಕಡೆ ಮಾತುಗಳು ನಮ್ಮ ಸುತ್ತಮುತ್ತಲಿರುವ ಡೋಂಗಿಗಳನ್ನು ನೆನಪಿಸುತ್ತವೆ.ಚಿತ್ರಕಥೆ ಮತ್ತು ನಿರೂಪನೆಯಲ್ಲಿ ನಿರ್ದೇಶಕರು ಗೆಲ್ಲುತ್ತಾರೆ. ಅವರ ಪಾತ್ರಗಳ ಆಯ್ಕೆಯೂ ಸಮರ್ಪಕ. ಸ್ವಾಮೀಜಿಯಾಗಿ ರವಿಶಂಕರ್ ಗೌಡ ಓವರ್ ಆಕ್ಟಿಂಗ್ ಎನಿಸಿದರೂ, ಆ ಪಾತ್ರಕ್ಕೆ ಅವರೇ ಸೂಕ್ತರೆನಿಸುತ್ತಾರೆ. ತಬಲಾ ನಾಣಿ, ಸಾಧು ಕೋಕಿಲಾ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ. ನೀತು ಸಿಕ್ಕಿದ ಅವಕಾಶ ಚೆನ್ನಾಗಿ ಬಳಸಿಕೊಂಡಿದ್ದಾರೆ.ಮೈ ನೇಮ್ ಈಸ್ ಚಿಟ್ಟೆಸ್ವಾಮಿ ಈಗಾಗಲೇ ಜನಪ್ರಿಯವಾಗಿರುವ ಹಾಡು. ಲಯಾ ಕೋಕಿಲಾ ಸಂಗೀತದ ಈ ಹಾಡನ್ನು ಬಿಟ್ಟರೆ ಉಳಿದವು ಕೇಳುವಂತಂತಿಲ್ಲ. ಆದರೆ ಎಲ್ಲೋ ಕೇಳಿದಂತಿವೆ.