ದೇವ್ ಚಿತ್ರವಿಮರ್ಶೆ, ಹೊರಗೆ ಬಣ್ಣ, ಒಳಗೆ ಸುಣ್ಣ
ಚಿತ್ರ: ದೇವ್ ಸನ್ ಆಫ್ ಮುದ್ದೇಗೌಡತಾರಾಗಣ: ದಿಗಂತ್, ಚಾರ್ಮಿ ಕೌರ್, ಇಂದ್ರಜಿತ್ ಲಂಕೇಶ್, ನತಾಲಿಯಾ ಕೌರ್ನಿರ್ದೇಶನ: ಇಂದ್ರಜಿತ್ ಲಂಕೇಶ್ಸಂಗೀತ: ಜೆಸ್ಸಿ ಗಿಫ್ಟ್ ಒಂದು ಸಿನಿಮಾ ಮಾಡುವಾಗ, ಅದರಲ್ಲೂ ತಾನು ಸ್ಟಾರ್ ಮೇಕರ್ ಎಂದು ಕರೆಸಿಕೊಳ್ಳುವ ನಿರ್ದೇಶಕ ಬರೀ ಸ್ಟೈಲ್‌ಗೆ ಒತ್ತು ಕೊಟ್ಟರೆ ಸಾಕೇ? ಕಥೆಯನ್ನು ಯಾಕೆ ನಿರ್ಲಕ್ಷಿಸುತ್ತಾರೆ? ಇದು ಇಂದ್ರಜಿತ್ ಲಂಕೇಶ್‌ಗೆ ಹೊಸ ಪ್ರಶ್ನೆಯೇನಲ್ಲ. ಹೆಚ್ಚು ಕಡಿಮೆ ಅವರ ಬಹುತೇಕ ಚಿತ್ರಗಳ ಕಥೆಯೂ ಇಷ್ಟೇ.ಈ ಬಾರಿಯೂ ಅದರಿಂದ ಹೊರತಾಗಿಲ್ಲ ನಿರ್ದೇಶಕರು. ಸಾಕಷ್ಟು ಪ್ರಚಾರ ಗಿಟ್ಟಿಸಿಕೊಂಡರೂ, 'ದೇವ್ ಸನ್ ಆಫ್ ಮುದ್ದೇಗೌಡ' ಚಿತ್ರವನ್ನು ಕನಿಷ್ಠ ಸಹ್ಯವಾಗಿಸುವಲ್ಲೂ ಇಂದ್ರಜಿತ್ ಯಶಸ್ವಿಯಾಗಿಲ್ಲ.ಮುದ್ದೇಗೌಡ (ಅನಂತ್ ನಾಗ್) ಕಷ್ಟದಲ್ಲೇ ಬೆಳೆದು ಚಿನ್ನದ ಚಮಚವನ್ನು ತಾನೇ ಬಾಯಲ್ಲಿ ಇಟ್ಟುಕೊಂಡವನು. ಆತನ ಪುತ್ರ ದೇವ್‌ಗೆ (ದಿಗಂತ್) ಇದ್ಯಾವ ಕಷ್ಟವೂ ಗೊತ್ತಿಲ್ಲ. ಗೊತ್ತಾಗೋದು ಬೇಡ, ಆದರೆ ಜವಾಬ್ದಾರಿ ಗೊತ್ತಾಗಬೇಕು ಅನ್ನೋದು ಮುದ್ದೇಗೌಡರ ಬಯಕೆ. ಅವರದ್ದು ಮಹತ್ವಾಕಾಂಕ್ಷೆ, ತಾನು ಬೆಳೆದು ಬಂದ ದಾರಿಯಲ್ಲಿ ಸಾಗುವ ಅಗತ್ಯವಿಲ್ಲದೇ ಇದ್ದರೂ, ಬೆಳೆದಂತೆ ಬೆಳೆಯಬೇಕು ಅನ್ನೋದು ಆಸೆ.ಇದಕ್ಕೆ ದೇವ್ ಸ್ಪಂದಿಸುವುದಿಲ್ಲ. ಆತನಿಗೆ ಓದಿನಲ್ಲಿ ಆಸಕ್ತಿಯೇ ಇಲ್ಲ. ಅಪ್ಪನ ಕಂಪನಿಯೆಂದರೆ ಅಸಡ್ಡೆ. ಹಾಗೆಂದು ಸೋಮಾರಿಯಲ್ಲ. ಆತನ ಗುರಿಯೇ ಬೇರೆ. ಯಾವತ್ತಿದ್ದರೂ ತಾನು ಹೀರೋ ಮೆಟೀರಿಯಲ್ ಅನ್ನೋದು ದೇವ್ ಗಟ್ಟಿ ನಿರೀಕ್ಷೆ. ಪರೀಕ್ಷೆಯೆನ್ನುವುದು ಅವನಿಗೆ ಪರೀಕ್ಷೆಯೇ ಅಲ್ಲ. ಫೇಲಾಗುತ್ತಾನೆ. ಅಪ್ಪ-ಮಗನ ನಡುವೆ ಸಂಘರ್ಷ ಉಂಟಾಗುತ್ತದೆ. ಮನೆಯಿಂದ ಹೊರಗೆ ಹೋಗುತ್ತಾನೆ. ಆಗ ಸಿಕ್ಕವಳೇ ಕಾವ್ಯ.
ದೇವ್ ಬದುಕಲ್ಲಿ ಕಾವ್ಯ ಹೊಸ ಕಾವ್ಯ ಬರೆಯುತ್ತಾಳೆ. ಬೀದಿಗೆ ಬಂದವನು ಆಕೆಯ ಮನೆ ಸೇರುತ್ತಾನೆ. ಆಕೆಯನ್ನು ನೋಡಿ ಬದಲಾಗುತ್ತಾನೆ. ಜವಾಬ್ದಾರಿ ಅರಿತುಕೊಳ್ಳುತ್ತಾನೆ. ಕೊನೆಗೆ ಅಂದುಕೊಂಡಂತೆ ಹೀರೋ ಕೂಡ ಆಗುತ್ತಾನೆ. ಅಪ್ಪನ ಮುಂದೆ ಬಂದು ಮೊದಲ ಸಂಪಾದನೆಯ ದುಡ್ಡನ್ನು ಹರವುತ್ತಾನೆ.ಮುದ್ದೇಗೌಡರ ಮುಂದೆ ಮಗ ಗೆಲ್ಲುತ್ತಾನೆ. ದೇವ್ ಮುಂದೆ ಆತನ ಅಪ್ಪ ಸೋಲುತ್ತಾರೆ!ಕಥೆಯೇ ಮೈನಸ್ ಪಾಯಿಂಟ್, ಚಿತ್ರಕಥೆ ಬಿಗಿಯಾಗಿಲ್ಲ, ಸಂಭಾಷಣೆಯಲ್ಲಿ ಚುರುಕು ಬೇಕಾಗಿತ್ತು ಅನ್ನೋ ದೂರುಗಳ ನಡುವೆ ಇಂದ್ರಜಿತ್ ಲಂಕೇಶ್‌ರನ್ನು ಹೊಗಳಲು ಕಾರಣಗಳಿವೆ. ಬೇರೆ ಯಾವುದೇ ನಿರ್ದೇಶಕರಿಗೆ ಸಾಧ್ಯವಿಲ್ಲದ ರೀತಿಯಲ್ಲಿ ಚಿತ್ರವನ್ನು ಸ್ಟೈಲಿಶ್ ಆಗಿ ಪ್ರೆಸೆಂಟ್ ಮಾಡಿದ್ದಾರೆ. ಪ್ರತಿ ಫ್ರೇಮೂ ಶ್ರೀಮಂತವಾಗಿದೆ. ನಾಯಕ-ನಾಯಕಿಯರನ್ನು ತುಂಬಾ ಚೆನ್ನಾಗಿ ತೋರಿಸಿದ್ದಾರೆ.ತಾಂತ್ರಿಕವಾಗಿ ಸಿನಿಮಾ ಅದ್ಭುತವಾಗಿದೆ. ದಿಗಂತ್ ತುಂಬಾ ಮುದ್ದಾಗಿ ಕಾಣುತ್ತಾರೆ. ಕೆಲವು ಕಡೆ ಆಲಸಿಯಂತೆ ಕಂಡರೂ, ಪಾತ್ರಕ್ಕೆ ಮೋಸ ಮಾಡಿದಂತಿಲ್ಲ. ನಾಯಕಿ ಚಾರ್ಮಿ ಓಕೆ. ಅನಂತ್ ನಾಗ್ ಎಂದಿನಂತೆ ಸಾದಾ ಸೀದಾ. ರಾಜು ತಾಳಿಕೋಟೆ, ತಬಲಾ ನಾಣಿ, ಸ್ವಯಂವರ ಚಂದ್ರು ಆಗಾಗ ಬಂದು ನಗಿಸುತ್ತಾರೆ.ಇಂದ್ರಜಿತ್ ಲಂಕೇಶ್ ಸ್ಟೈಲಿಶ್ ಸಿನಿಮಾ ಮಾಡೋದು ಓಕೆ, ಆದ್ರೆ ಕಥೆ-ಚಿತ್ರಕಥೆ ಸರಿಯಿರೋದಿಲ್ಲ ಯಾಕೆ?