‘ಗಜ’ ಚಿತ್ರದ ಭರ್ಜರಿ ಯಶಸ್ಸಿನ ನಂತರ ದರ್ಶನ್ ಅಭಿನಯದ ‘ಇಂದ್ರ’ ಚಿತ್ರ ತೆರೆಕಂಡಿದೆ. ಇದು ದರ್ಶನ್ ಅಭಿಮಾನಿಗಳಿಗೆ ಹೇಳಿಮಾಡಿಸಿದಂತಿದೆ. ಇಲ್ಲಿ ದರ್ಶನ್, ಪೂಜಾರಿ, ಸಾಫ್ಟ್‌ವೇರ್ ಎಂಜಿನಿಯರ್, ಮೀನು ಹಿಡಿಯುವವ.. ಹೀಗೆ ಬೇರೆ ಬೇರೆ ಪಾತ್ರಗಳಲ್ಲಿನ ಅಭಿನಯ ಚೆನ್ನಾಗಿದೆ. ಪ್ರತಿಯೊಂದು ಪಾತ್ರದಲ್ಲೂ ದರ್ಶನ್ ಲುಕ್ ಡಿಫರೆಂಟ್ ಆಗಿದೆ.
ತನ್ನ ಅಣ್ಣ -ಅತ್ತಿಗೆಯನ್ನು ಸಾಯಿಸಿದವರ ವಿರುದ್ಧ ನಾಯಕ ಸೇಡು ತೀರಿಸಿಕೊಳ್ಳುವ ಒಂದು ಸಾಮಾನ್ಯ ಚಿತ್ರಕಥೆಯನ್ನಿಟ್ಟುಕೊಂಡು ನಿರ್ದೇಶಕ ವಾಸು ಚಿತ್ರ ಮಾಡಿದ್ದಾರೆ. ಚಿತ್ರದ ಮೊದಲಾರ್ಧ ನಿರಾಳತೆಯಿಂದ ಸಾಗುತ್ತದೆ. ಆದರೆ ನಂತರದ ಕೆಲವೊಂದು ದೃಶ್ಯಗಳು ಅರ್ಥಹೀನವಾಗಿ ಕಾಣುತ್ತವೆ. ಮಂಗಳೂರು ಕನ್ನಡ ಮಾತನಾಡಲು ಹೋಗಿ ದರ್ಶನ್ ಎಡವಿದ್ದಾರೆ.
ಕೋರ್ಟಿನಲ್ಲಿ ಹತ್ತು ವರ್ಷ ಜೈಲು ಶಿಕ್ಷೆಗೆ ಒಳಗಾದ ರೌಡಿಗಳಾದ ಆನಂದ ರಾಜ್ ಹಾಗೂ ಹರೀಶ್ ರೈಗೆ ಪೊಲೀಸರು ರಕ್ಷಣೆ ನೀಡುತ್ತಾರೆ. ಜೊತೆಗೆ ಇವರ ರಕ್ಷಣೆಗಾಗಿ ಮುಂಬೈಯಿಂದ ಸಿಬಿಐ ಬರುತ್ತದೆ. ಕೋರ್ಟ್ ಆದೇಶದ ನಂತರ ಇದೆಲ್ಲಾ ಸಾಧ್ಯವೇ? ಇಂತಹ ಕೆಲವು ಬಾಲಿಶವಾದ ದೃಶ್ಯಗಳ ಮೂಲಕ ಪ್ರೇಕ್ಷಕನ ಕಿವಿಗೆ ಹೂ ಇಡುವ ಪ್ರಯತ್ನ ಮಾಡಿದ್ದಾರೆ. ಚಿತ್ರದಲ್ಲಿ ದರ್ಶನ್ ಅಭಿನಯವನ್ನು ಮೆಚ್ಚಬಹುದು.
ಬೋಲ್ಡ್ ನಟಿಯೆಂದು ಖ್ಯಾತಿ ಪಡೆದ ನಮಿತಾ ಇಲ್ಲಿ ಗ್ಲಾಮರ್ ಪ್ರದರ್ಶನದಲ್ಲಿ ತಮ್ಮ ಸಮಯ ವ್ಯಯಿಸಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ. ಆಕ್ಷನ್ ಪಾತ್ರಕ್ಕೆ ಬೇಕಾದ ಕ್ಯಾಮರಾ ಚಾಕಚಕ್ಯತೆ ಚಿತ್ರದಲ್ಲಿದೆ. ಹೆಲಿಕಾಪ್ಟರ್ ಅನ್ನು ನಾಯಕ ಚೇಸ್ ಮಾಡಿ ಕೆಡಹುವ ದೃಶ್ಯ ಸಾಹಸ ಪ್ರಿಯರಿಗೆ ಇಷ್ಟವಾಗಬಹುದು. ಹರಿಕೃಷ್ಣ ಅವರ ಸಂಗೀತವನ್ನು ಕೇಳಿದರೆ ಗಜ ಚಿತ್ರದ ಬೀಟುಗಳು ನೆನಪಾಗುತ್ತವೆ. ಇಲ್ಲಿಯೂ ಕುಳಿತಲ್ಲೇ ಕಾಲು ಕುಣಿದಾಡಿಸುವ ಸಂಗೀತ ನೀಡಿದ್ದಾರೆ. ಒಟ್ಟಾರೆ ಚಿತ್ರದ ಬಗ್ಗೆ ಹೇಳುವುದಾದರೆ ಒಮ್ಮೆ ನೋಡಬಹುದು.