ಚಿತ್ರ: ದಂಡುಪಾಳ್ಯ
ತಾರಾಗಣ: ಪೂಜಾ ಗಾಂಧಿ, ಮಕರಂದ್ ದೇಶಪಾಂಡೆ, ಕರಿಸುಬ್ಬು, ರಘು ಮುಖರ್ಜಿ, ರವಿಶಂಕರ್
ನಿರ್ದೇಶನ: ಶ್ರೀನಿವಾಸ ರಾಜು
ಸಂಗೀತ: ಅರ್ಜುನ್ ಜನ್ಯ
ಒಂದೊಳ್ಳೆ ಅವಕಾಶವನ್ನು ನಿರ್ದೇಶಕ ಶ್ರೀನಿವಾಸ ರಾಜು ಮಿಸ್ ಮಾಡಿಕೊಂಡಿದ್ದಾರೆ!ಹೇಳಿ ಕೇಳಿ 'ದಂಡುಪಾಳ್ಯ' ನೈಜ ಘಟನೆಯನ್ನು ಆಧರಿಸಿದ ಚಿತ್ರ. ಅಂದ ಮೇಲೆ ಇದರ ಸಂವಿಧಾನ ಕೊಲೆ, ಅತ್ಯಾಚಾರ, ದರೋಡೆಯೇ ಆಗಿರುತ್ತದೆ. ಇದು ನಿರೀಕ್ಷಿತವೇ. ಆದರೆ ಅದನ್ನೆಲ್ಲ ಸಾಂಕೇತಿಕವಾಗಿ ತೋರಿಸಿ, ಇಡೀ ಚಿತ್ರವನ್ನು ಇನ್ನೊಂದು 'ಸೈನೈಡ್' ಮಾಡುವ ಅವಕಾಶ ಅವರ ಕೈಯಲ್ಲಿತ್ತು. ಇಡೀ ಹತ್ಯಾ ಸರಣಿಯ ಇನ್ನೊಂದು ಮುಖವನ್ನು ತೋರಿಸುವ ಯತ್ನ ಮಾಡಬಹುದಿತ್ತು.ಇಲ್ಲಿ ನಡೆಯುವುದು ಸಾಲು ಸಾಲು ಭೀಕರ ಕೊಲೆಗಳು, ಅತ್ಯಾಚಾರಗಳು, ದರೋಡೆ. ಇವೆಲ್ಲವನ್ನೂ ಎಷ್ಟು ವೈಭವೀಕರಿಸಲು ಸಾಧ್ಯವಿದೆಯೋ, ಅಷ್ಟೊಂದು ವೈಭವೀಕರಿಸಿದ್ದಾರೆ ನಿರ್ದೇಶಕರು. ಇವೆಲ್ಲದವರ ಜತೆಗೆ ಕಥೆಗೆ ಒಂದಿಷ್ಟು ಮೇಕಪ್ ಮಾಡಿದ್ದಿದ್ದರೆ, ಚಿತ್ರಕಥೆಯನ್ನು ಆಸಕ್ತಿ ಉಳಿಸುವಂತೆ ಬರೆದಿದ್ದರೆ, ಒಂದು ವರ್ಗದವರಿಗಾದರೂ ನೋಡುವಂತಿರುತ್ತಿತ್ತು.ಹಾಗೆ ನೋಡಿದರೆ ನಿರ್ದೇಶಕ ಶ್ರೀನಿವಾಸ ರಾಜು ಅವರ ಉದ್ದೇಶವೇ ಮನರಂಜನೆ! ಅವರ ಪಾಲಿಗೆ ಕ್ರೌರ್ಯವೂ ಮನರಂಜನೆ ಆಗಿರುವುದರಿಂದ, ಉದ್ದೇಶ ಈಡೇರಿರಬಹುದು. ಇದು ಸಮಾಜಕ್ಕೆ ಎಷ್ಟು ಹಿತ ಎಂಬ ಪ್ರಶ್ನೆಯನ್ನು ಅವರೂ ಹಾಕಿಕೊಂಡಂತಿಲ್ಲ. ನೋಡುಗರಲ್ಲಿ ಖಂಡಿತಾ ಈ ಪ್ರಶ್ನೆ ಮೂಡದೇ ಇರದು.ಇಷ್ಟಾದರೂ ಶ್ರೀನಿವಾಸ ರಾಜು ಅವರ ಪ್ರಯತ್ನವನ್ನು ಮೆಚ್ಚಬಹುದು. ಹಾಲಿವುಡ್‌ನಲ್ಲಿ ಸಾಲು ಸಾಲು ಕ್ರೈಮ್ ಸಿನಿಮಾಗಳು ಬಂದಾಗ ಆಸಕ್ತಿಯಿಂದ ನೋಡುವವರಿಗೆ ಕನ್ನಡದಲ್ಲಿ ಇಂತಹ ಚಿತ್ರವೊಂದು ಬಂದಿರುವುದು ಖುಷಿ ಕೊಡಬಹುದು. 'ರಾಂಗ್ ಟರ್ನ್' ಸರಣಿಯ ಅಷ್ಟೂ ಚಿತ್ರಗಳಲ್ಲಿ ಸಾಮಾಜಿಕ ಬದ್ಧತೆ ಇದೆ ಎಂದು ಯಾರಿಗಾದರೂ ಅನ್ನಿಸುತ್ತದೆಯೇ?ಇನ್ನು ನಟನೆಯ ಬಗ್ಗೆ ಮಾತನಾಡುವುದಾದರೆ, ಪೂಜಾ ಗಾಂಧಿ ಅದ್ಭುತ. ದಂಡುಪಾಳ್ಯ ಗ್ಯಾಂಗಿನ ಲಕ್ಷ್ಮಿ ಪಾತ್ರದಲ್ಲಿ ಅವರದ್ದು ಪರಕಾಯ ಪ್ರವೇಶ. ಘಾಟಿ ಹೆಂಗಸಿನ ಪಾತ್ರದಲ್ಲವರು ಎಲ್ಲವನ್ನೂ ಮರೆತಿದ್ದಾರೆ. ಬೀಡಿ ಸೇದುವುದನ್ನೂ ಚೆನ್ನಾಗಿ ಕಲಿತಿದ್ದಾರೆ. ಬಾಟಲಿ ಹಿಡಿದು ಕುಣಿಯುವಾಗಲೂ ಅನ್ಯಮನಸ್ಕರಾಗಿಲ್ಲ. ಪೊಲೀಸರ ಹಿಂಸೆಯ ದೃಶ್ಯದಲ್ಲಿ ಪೂಜಾ ಬೆತ್ತಲೆ ಬೆನ್ನು ತೋರಿಸಿರುವುದನ್ನು ಆಕ್ಷೇಪಿಸಬೇಕು ಎಂದು ಚಿತ್ರ ನೋಡಿದ ನಂತರ ಯಾರಿಗಾದರೂ ಅನ್ನಿಸಲಾರದು.ಮರಾಠಿ ರಂಗಭೂಮಿ ಕಲಾವಿದ ಮಕರಂದ್ ದೇಶಪಾಂಡೆಗಿರುವ ಲುಕ್‌ನಷ್ಟು ಚೆನ್ನಾಗಿ ಅವರ ಪಾತ್ರ ಮೂಡಿ ಬಂದಿಲ್ಲ. ಅವರ ಸಾಮರ್ಥ್ಯಕ್ಕೆ ಆ ಪಾತ್ರವನ್ನು ಇನ್ನೂ ಚೆನ್ನಾಗಿ ಮಾಡಬಹುದಿತ್ತು. ಗ್ಯಾಂಗಿನ ಇತರ ಸದಸ್ಯರಾಗಿ ಕಾಣಿಸಿರುವ ರವಿಕಾಳೆ, ಪೆಟ್ರೋಲ್ ಪ್ರಸನ್ನ, ಯತಿರಾಜ್ ಮುಂತಾದವರು ಹೆದರಿಸುವುದರ ಜತೆಗೆ ಹೆದರಿದಂತಿದ್ದಾರೆ. ರಘು ಮುಖರ್ಜಿ, ನಿಶಾ ಕೊಠಾರಿಯವರದ್ದು ಬೇಗನೆ ಸಾಯುವ ಪಾತ್ರಗಳು.ಇವರೆಲ್ಲರಿಗಿಂತ ಮತ್ತೆ ಮತ್ತೆ ನೆನಪಿಗೆ ಬರುವ ಪಾತ್ರ ಚಲಪತಿಯದ್ದು. ರವಿಶಂಕರ್ ಪಾತ್ರ ಪೋಷಣೆ ಅದೆಷ್ಟು ಚೆನ್ನಾಗಿದೆಯೆಂದರೆ, ಮಲ್ಟಿಪ್ಲೆಕ್ಸ್‌ಗೆ ಹೋದರೂ ಅವರ ಪ್ರತಿ ಡೈಲಾಗಿಗೆ ಚಪ್ಪಾಳೆ ಹೊಡೆಯೋಣ ಎಂದೆನಿಸುತ್ತದೆ. ಕನ್ನಡ ಚಿತ್ರರಂಗಕ್ಕವರು ಆಸ್ತಿಯಾಗುತ್ತಿದ್ದಾರೆ ಎಂಬ ಸುದೀಪ್ ಮಾತು ನೆನಪಿಗೆ ಬರುತ್ತದೆ.ಇನ್ನು ವೆಂಕಟ್ ಪ್ರಸಾದ್ ಛಾಯಾಗ್ರಹಣ, ಅರ್ಜುನ್ ಜನ್ಯ ಸಂಗೀತ, ಅವರದ್ದೇ ಹಿನ್ನೆಲೆ ಸಂಗೀತ ಯಾವುದೂ ಗಮನಾರ್ಹವಲ್ಲ. ಸಂಕಲನ ಕೂಡ ಇದೇ ಸಾಲಿನಲ್ಲಿದೆ.ಸಾಮಾಜಿಕ ಬದ್ಧತೆಯನ್ನು ಬದಿಗಿಟ್ಟು, ಅಮಾನವೀಯ ಕೃತ್ಯಗಳನ್ನು ಹಸಿಹಸಿಯಾಗಿ ನೋಡುವ ಇಚ್ಛೆಯುಳ್ಳವರು, ರಾಮ್ ಗೋಪಾಲ್ ವರ್ಮಾ ಅಭಿಮಾನಿಗಳು ಚಿತ್ರಮಂದಿರದತ್ತ ಹೆಜ್ಜೆ ಹಾಕಬಹುದು.