Select Your Language

Notifications

webdunia
webdunia
webdunia
webdunia

ತೂಫಾನ್ ಚಿತ್ರವಿಮರ್ಶೆ; ಯಶಸ್ ಬಿಟ್ಟರೆ ಬಫೂನ್

ತೂಫಾನ್ ಚಿತ್ರವಿಮರ್ಶೆ; ಯಶಸ್ ಬಿಟ್ಟರೆ ಬಫೂನ್
ಚಿತ್ರ: ತೂಫಾನ್
ತಾರಾಗಣ: ಯಶಸ್, ನಕ್ಷತ್ರಾ, ಚಂದನ್, ರಮೇಶ್ ಭಟ್, ಚಿತ್ರಾ ಶೆಣೈ, ಸಾಧು ಕೋಕಿಲಾ, ವಿದ್ಯಾ ಮೂರ್ತಿ, ದೇವದಾಸ್ ಕಾಪಿಕಾಡ್
ನಿರ್ದೇಶನ: ಸ್ಮೈಲ್ ಸೀನು
ಸಂಗೀತ: ಇಲ್ವಿನ್ ಜೋಶ್ವಾ

PR
ನಾಯಕ ಯಶಸ್ ದುರದೃಷ್ಟವೆಂದರೆ ಇದೇ ಇರಬೇಕು, ಇಲ್ಲದೇ ಇದ್ದರೆ ಇಂತಹ ಸ್ಫುರದ್ರೂಪಿ ನಟನಿಗೆ ಒಂದೊಳ್ಳೆ ಸಿನಿಮಾ ಇಷ್ಟು ವರ್ಷವಾದ ಮೇಲಾದರೂ ಸಿಗಬೇಕಿತ್ತು. ಆದರೆ ಈ ಹಿಂದಿನ ಎರಡೂ ಚಿತ್ರಗಳಲ್ಲಿ (ಶಿಶಿರ, ಯುಗ ಯುಗಗಳೆ ಸಾಗಲಿ) ವ್ಯರ್ಥವಾದ ಅವರು ಇಲ್ಲಿ ಗೆಲ್ಲುತ್ತಾರೆ ಎಂಬ ಮಾತುಗಳು 'ತೂಫಾನ್'ನಲ್ಲೂ ಹಾರಿ ಹೋಗುತ್ತವೆ.

ಸೂರ್ಯ (ಯಶಸ್) ಪೇಟೆ ಸೇರಿಕೊಂಡ ಹಳ್ಳಿ ಹುಡುಗ. ಹೋಗಿದ್ದು ಚೆನ್ನಾಗಿ ಓದಿ ದೊಡ್ಡ ನೌಕರಿ ಸಿಗಬೇಕು ಎಂಬ ಉದ್ದೇಶದಿಂದ. ಅದೇ ಉದ್ದೇಶವೂ ಸೂರ್ಯನಲ್ಲಿರುತ್ತದೆ. ಆದರೆ ಅಲ್ಲಿ ರಾಜಿ (ನಕ್ಷತ್ರಾ) ಸಿಗುತ್ತಾಳೆ. ಆಕೆಗೂ ಸೂರ್ಯ ಇಷ್ಟವಾಗುತ್ತಾನೆ. ಆದರೆ ಈ ನಡುವೆ ಮನೆಯಲ್ಲಿ ಆಕಾಶ್ (ಚಂದನ್) ಎಂಬ ಹುಡುಗನ ಜತೆ ರಾಜಿಯ ಮದುವೆಗೆ ಸಿದ್ಧತೆ ನಡೆಯುತ್ತದೆ.

ರಾಜಿಯ ಪ್ರೀತಿ ಗೊತ್ತಿದ್ದೂ ಮನೆಯವರು ಆಕಾಶ್ ಜತೆಗೇ ಮದುವೆ ಮಾಡಲು ಮುಂದಾಗುತ್ತಾರೆ. ಆಗ ರಾಜಿ, ಶೀಘ್ರದಲ್ಲೇ ಮತ್ತೆ ಬಂದು ನಿನ್ನ ಭುಜಕ್ಕೊರಗುತ್ತೇನೆ ಎಂದು ತನ್ನ ಪ್ರೀತಿಯ ಸೂರ್ಯನನ್ನು ಒಪ್ಪಿಸಿ ಚಂದನ್‌ನನ್ನೇ ಮದುವೆಯಾಗುತ್ತಾಳೆ. ಇದುವರೆಗೆ ಜೀವಂತ ಪ್ರೀತಿ ಮಾಡುತ್ತಿದ್ದವರು, ಇನ್ನು ಜೀವಚ್ಛವಗಳಾಗಿ ಪ್ರೀತಿಸಬೇಕಾಗುತ್ತದೆ. ಸೂರ್ಯ ಮತ್ತು ರಾಜಿ ಇಬ್ಬರೂ ಸಾವಿನ ಸನಿಹಕ್ಕೆ ಹೋಗುತ್ತಾರೆ. ಅವರಲ್ಲಿ ಬದುಕುವವರು ಯಾರು? ಬದುಕುಳಿದವರು ಯಾರ ಜತೆ ಜೀವನ ನಡೆಸುತ್ತಾರೆ? ಇದು ಮುಂದಿನ ಕಥೆ.

ಹೃದಯಾ ಹೃದಯಾ, ಮಿಲನ, ಸವಿ ಸವಿ ನೆನಪು ಮುಂತಾದ ಹತ್ತಾರು ಚಿತ್ರಗಳನ್ನು ಅಲ್ಲಲ್ಲಿ 'ತೂಫಾನ್' ಕಥೆ ನೆನಪಿಸುತ್ತಾ ಹೋಗುತ್ತದೆ 'ತೂಫಾನ್'. ಆದರೆ ಆ ಯಾವುದೇ ಸಿನಿಮಾಗಳ ಗುಣಮಟ್ಟವನ್ನು ಇದು ನೆನಪಿಸುವುದಿಲ್ಲ. ಯಾರೋ ಬರೆದಿಟ್ಟ ಪುರಾತನ ಕಥೆಯನ್ನು ಓದದೇ ನಿರ್ದೇಶಿಸಿದಂತಿದೆ. ಸ್ಮೈಲ್ ಸೀನು ಮೊದಲ ಪ್ರಯತ್ನದಲ್ಲೇ ಎಡವಿದ್ದಾರೆ.

ಕಥೆ, ಚಿತ್ರಕಥೆ, ನಿರ್ದೇಶನ ಮಾಡಿರುವ ಸ್ಮೈಲ್ ಸೀನು ಲಾಜಿಕ್ ಮರೆತೇ ಬಿಟ್ಟಿದ್ದಾರೆ. 'ತೂಫಾನ್' ಪ್ರೀತಿಯ ಕುರಿತು ಸಂದೇಶ ನೀಡುವ ಬದಲು, ನಿರ್ದೇಶಕರು ಸಿನಿಮಾ ನಿರ್ದೇಶನದ ಮೊದಲು, ತಾವು ಮಾಡುತ್ತಿರುವ ಚಿತ್ರದ ಪ್ರಮುಖ ವಿಷಯದ ಕುರಿತು ಸಂಬಂಧಪಟ್ಟವರಿಂದ ಮಾಹಿತಿ ಪಡೆದುಕೊಳ್ಳಲೇ ಬೇಕು ಎನ್ನುವುದನ್ನೇ ಸಾರುತ್ತದೆ! ಅಷ್ಟೊಂದು ಬಾಲಿಶವಾಗಿದೆ ಸೀನು ಯೋಚನೆಗಳು.

ಲಾಜಿಕ್ ಬಿಟ್ಟು ಸಿನಿಮಾ ನೋಡೋಣ ಅಂದುಕೊಂಡರೂ, ಸನ್ನಿವೇಶಗಳು ಆಪ್ತವೆನಿಸುವುದಿಲ್ಲ. ಚಿತ್ರದುದ್ದಕ್ಕೂ ಭಾವತೀವ್ರತೆಯ ಕೊರತೆ. ನಾಯಕ ಯಶಸ್ ಬಿಟ್ಟರೆ ಉಳಿದ ಪಾತ್ರಗಳು ನಿದ್ದೆ ಹತ್ತಿಸುವಂತಿದೆ. ಅದರಲ್ಲೂ ಯು2 ವಾಹಿನಿಯಿಂದ ಎಳೆದು ತಂದಿರುವ ಚಂದನ್ ತೆರೆಯ ಮೇಲೆ ಏನು ಮಾಡುತ್ತಾರೆಂಬುದೇ ಗೊಂದಲ ಹುಟ್ಟಿಸುತ್ತದೆ.

ಯಶಸ್ ಗೆದ್ದು ಸೋತಿರುವುದು ಸ್ಪಷ್ಟ. ಈ ಹಿಂದೆಯೂ ಅವರು ಚೆನ್ನಾಗಿಯೇ ನಟಿಸಿದ್ದರು. ಆದರೆ ಅದೃಷ್ಟ ಸರಿಯಿರಲಿಲ್ಲ. ಪ್ರೇಕ್ಷಕರು ನೋಡಲೇಬೇಕಾದ ಸಿನಿಮಾ ಅವುಗಳಾಗಿರಲಿಲ್ಲ. ಈ ಬಾರಿಯೂ ಅದೇ ನಡೆದಿದೆ. ಇನ್ನು ಚಂದನ್‌ರಂತೆ ನಾಯಕಿ ನಕ್ಷತ್ರಾ ಕೂಡಾ ವೇಸ್ಟ್. ಅವರಿಬ್ಬರ ಜಾಗಕ್ಕೆ ಬೇರೆಯವರಿರುತ್ತಿದ್ದರೆ 'ತೂಫಾನ್' ಸ್ವಲ್ಪವಾದರೂ ಸಹ್ಯವೆನಿಸುತ್ತಿತತ್ತು.

ಅಂತೂ ಹತ್ತಿಪ್ಪತ್ತು ವರ್ಷಗಳ ಹಿಂದೆ ಬರಬೇಕಿದ್ದ ಸಿನಿಮಾವೊಂದನ್ನು ಈಗ ನಿರ್ಮಿಸಿರುವ ಜಡೇ ಗೌಡ್ರನ್ನು ದೇವರೇ ಕಾಪಾಡಬೇಕು!

Share this Story:

Follow Webdunia kannada