ಒಂದು ಹಾಸ್ಯ ಚಿತ್ರ ಮಾಡುವುದು ಸುಲಭ. ಅಲ್ಲಿ ಒಂದಿಷ್ಟು ಮಾತಿನ ಮ್ಯಾಜಿಕ್ ಇದ್ದರೆ ಸಾಕು. ಜನರ ಮನಸ್ಸಿಗೆ ನಾಟುವಂತಹ ಸನ್ನಿವೇಶಗಳನ್ನು ಸೃಷ್ಟಿಸಿದರೆ, ಸಾಮಾನ್ಯವಾಗಿ ಆ ಚಿತ್ರ ಪ್ರೇಕ್ಷರಿಗೆ ಇಷ್ಟವಾಗುತ್ತದೆ. ಆದರೆ ಈ ವಾರ ಬಿಡುಗಡೆಯಾದ 'ನೀ ಟಾಟಾ ನಾ ಬಿರ್ಲಾ' ಚಿತ್ರ ಈ ಯಾವ ಅಂಶವು ಇಲ್ಲದೇ ಜನತೆಯ ಮನಮುಟ್ಟುವಲ್ಲಿ ವಿಫಲವಾಗಿದೆ. ಇದು ನಿರ್ದೇಶಕರು ಹೋಂವರ್ಕ್ ಮಾಡದೇ ನಿರ್ದೇಶನಕ್ಕಿಳಿದ ಫಲ.
ಈ ಹಿಂದೆ ಕೆಲವು ಚಿತ್ರಗಳಲ್ಲಿ ಜೊತೆಯಾಗಿ ನಟಿಸಿದ ರವಿಚಂದ್ರನ್- ಜಗ್ಗೇಶ್ ಜೋಡಿ ಇಲ್ಲಿಯೂ ಜೊತೆಯಾಗಿದೆ. ಆದರೆ ಯಾಕೋ ಚಿತ್ರ ಲಂಗು-ಲಗಾಮಿಲ್ಲದೇ ಸಾಗಿದೆ. ಬೇಡವೆಂದರೂ ಪದೇ ಪದೇ ಕಿವಿಗಡಚಿಕ್ಕುವ ಡೈಲಾಗ್‌ಗಳು ಬೋರ್ ಹೊಡೆಸುತ್ತವೆ.
ರವಿಚಂದ್ರನ್ ಎಂದಿನಂತೆ ತಮ್ಮ ಅಂಗಿಯ ಎರಡು ಬಟನ್ ಬಿಚ್ಚಿಕೊಂಡು ನಟಿಸಿದ್ದಾರೆ. ಅವರ ನಟನೆ ಇಲ್ಲಿ ಮನತಟ್ಟುವುದಿಲ್ಲ. ಆದರೆ ಲವಲವಿಕೆಯಲ್ಲಿ ಹಿಂದೆ ಬಿದ್ದಿಲ್ಲ. ಜಗ್ಗೇಶ್ ರವಿ, ಸಾಲದೆಂಬಂತೆ ಸಾಧು ಕೋಕಿಲ, ಸುಂದರ್ ರಾಜ್, ದೊಡ್ಡಣ್ಣ ಗ್ಲ್ಯಾಮರ್ ಬೊಂಬೆಯರಾದ ಜೆನ್ನಿಫರ್, ಪೂಜಾ ಗಾಂಧಿ, ನಿಖಿತಾ, ಕೀರ್ತಿಚಾವ್ಲಾ, ಜ್ಯೋತಿರಾಣಾ ಹೀಗೆ ನಟ-ನಟಿಯರ ದಂಡೇ ಇದೆ. ಎಲ್ಲರನ್ನೂ ನಿರ್ದೇಶಕರು ಕ್ಯಾಮರಾ ಮುಂದೆ ತಳ್ಳಿದ್ದಾರೆ.
ಚಿತ್ರದ ಕಥೆ ಏನೆಂದು ಕೇಳಬೇಡಿ. ಅಲ್ಲಿ ಕಥೆಯನ್ನು ಕಣ್ಣಿಗೆ ಎಣ್ಣೆ ಬಿಟ್ಟು ಹುಡುಕಿದರೂ ಸಿಗಲ್ಲ. ಸಿಕ್ಕರು ಏನು ಅರ್ಥ ಆಗಲ್ಲ. ಒಂದಷ್ಟು ಕಿಚಡಿ ಡೈಲಾಗ್‌ಗಳನ್ನು ಹೊರತುಪಡಿಸಿದರೆ ಉಳಿದಂತೆ ಚಿತ್ರ ಜಾಳು ಜಾಳಾಗಿದೆ. ಜಗ್ಗೇಶ್ ಎಂದಿನಂತೆ ತಮ್ಮ ಡಬ್ಬಲ್ ಮೀನಿಂಗ್ ಡೈಲಾಗ್‌ಗಳನ್ನು ಬಿಟ್ಟಿದ್ದಾರೆ. ಇಷ್ಟೆಲ್ಲ ಹೇಳಿದ ಮೇಲೆ ಸಂಗೀತ, ಸಾಹಿತ್ಯ, ಸಂಕಲನದ ಬಗ್ಗೆ ಹೇಳುವ ಅಗತ್ಯವಿಲ್ಲ ಎಂದೆನಿಸುತ್ತದೆ.