ಚಿತ್ರವಿಮರ್ಶೆ: ಮಾಲಾಶ್ರೀ ಅದ್ದೂರಿ 'ವೀರ' ಆಕ್ಷನ್ ಬಲು ಜೋರು!
ಚಿತ್ರ: ವೀರತಾರಾಗಣ: ಮಾಲಾಶ್ರೀ, ಕೋಮಲ್ ಕುಮಾರ್, ಆಶಿಶ್ ವಿದ್ಯಾರ್ಥಿ, ರಾಹುಲ್ ದೇವ್, ಮುಕುಲ್, ಸಿ.ಆರ್. ಸಿಂಹನಿರ್ದೇಶನ: ಅಯ್ಯಪ್ಪ ಶರ್ಮಾಸಂಗೀತ: ಹಂಸಲೇಖಮಾಲಾಶ್ರೀ ಸಿನಿಮಾ ಎಷ್ಟೇ ಅದ್ದೂರಿಯಾಗಿದ್ದರೂ, ಯಾರೇ ನಿರ್ದೇಶಿಸಿದರೂ ಸಿದ್ಧಸೂತ್ರಗಳಿಂದ ಹೊರಗೆ ಬರುವುದಿಲ್ಲ ಎನ್ನುವುದು ಇಲ್ಲಿ ಮತ್ತೊಮ್ಮೆ ಸಾಬೀತಾಗಿದೆ. ಅವರ ಈ ಹಿಂದಿನ ಚಿತ್ರಗಳಿಗೆ ಹೋಲಿಸಿದರೆ ಇಲ್ಲಿ ಕಾಣಸಿಗುವ ಹೆಚ್ಚುಗಾರಿಕೆ ಇಡೀ ಸಿನಿಮಾ ಶ್ರೀಮಂತವಾಗಿರುವುದು ಮಾತ್ರ!ಹಾಗೆಂದು 'ವೀರ' ಕೆಟ್ಟ ಸಿನಿಮಾ ಎಂದು ಹೇಳಲಾಗದು. ಉತ್ತಮ ಸಿನಿಮಾವೇ. ಆದರೆ ನಿರೀಕ್ಷಿತ ಪಾತ್ರ ಕುತೂಹಲ ಕೆರಳಿಸುವುದಿಲ್ಲ. ಒಂದು ಚೌಕಟ್ಟಿನೊಳಗಿನ ಕಥೆಯನ್ನು ದೃಶ್ಯ ರೂಪಕ್ಕೆ ಇಳಿಸುವ ಹೊಣೆಗಾರಿಕೆಯಲ್ಲಿ ನಿರ್ದೇಶಕರಿಗೂ ಹೆಚ್ಚು ಕೆಲಸವಿದೆ ಎಂದೆನಿಸುವುದಿಲ್ಲ. ಇಲ್ಲೇನಿದ್ದರೂ ಸಾಹಸ ನಿರ್ದೇಶಕರೇ ಕ್ಯಾಪ್ಟನ್.ಚಿತ್ರದಲ್ಲಿ ಮಾಲಾಶ್ರೀ ಅವರದ್ದು ಸೆಂಟರ್ ಪಾಯಿಂಟ್ ಪಾತ್ರ. ವೀರಲಕ್ಷ್ಮಿ ಮತ್ತು ಮಾಲಿನಿ ಅಯ್ಯರ್ ಎಂಬ ಎರಡು ಪಾತ್ರಗಳಲ್ಲಿ ನಟಿಸಿ, ಆಕ್ಷನ್ ಪ್ರಿಯರು ಮತ್ತು ಕೌಟುಂಬಿಕ ಪ್ರೇಕ್ಷಕರನ್ನು ಸರಿದೂಗಿಸಲು ಯತ್ನಿಸಿದ್ದಾರೆ. ನಿಜಗುಟ್ಟು ಏನೆಂಬುದು ತಿಳಿಯುವಾಗ ಚಿತ್ರ ಮುಗಿಯುವ ಹಂತಕ್ಕೆ ಬಂದಿರುತ್ತದೆ.ಹೊಡೆದಾಟವೇ ಸಿಂಗಲ್ ಅಜೆಂಡಾ ಎಂಬಂತೆ ಮಾಲಾಶ್ರೀ ಅವರನ್ನು ಬಿಂಬಿಸಲಾಗಿದೆ. ಪ್ರತಿದೃಶ್ಯದಲ್ಲೂ ಹೊಡೆ-ಬಡಿಯೇ ಕಾಣುತ್ತದೆ. ಆದರೆ ಯಾವುದೂ ಸಿಲ್ಲಿ ಎನಿಸುವುದಿಲ್ಲ. ಪ್ರತಿ ಆಕ್ಷನ್ ದೃಶ್ಯಗಳು ರಸದೂಟವಾಗುತ್ತವೆ. ನಿರ್ಮಾಪಕ ರಾಮು ಖರ್ಚು ಮಾಡಿರುವ ಪೈಸೆ ಪೈಸೆಯೂ ಕಾಣಸಿಗುತ್ತದೆ. ಹಾಗಾಗಿ ತಾಂತ್ರಿಕ ರೀತಿಯಲ್ಲಿ ಚಿತ್ರ ನಿಜಕ್ಕೂ ಉತ್ತಮ.ಸಾಮಾನ್ಯವಾಗಿ ಕನ್ನಡ ಚಿತ್ರಗಳಲ್ಲಿ ವಿದೇಶಿ ಚಿತ್ರೀಕರಣವೆಂದರೆ ಹಾಡುಗಳಿಗೆ ಸೀಮಿತ. ಆದರೆ ಇಲ್ಲಿ ಹಾಗಲ್ಲ. ಮಾತುಗಳ ಭಾಗ, ಆಕ್ಷನ್ ದೃಶ್ಯಗಳನ್ನೂ ವಿದೇಶಿ ನೆಲದಲ್ಲೇ ಚಿತ್ರೀಕರಿಸಿ ಅದ್ದೂರಿತನ ಮೆರೆಯಲಾಗಿದೆ.ಇನ್ನು ಎರಡೂ ಪಾತ್ರಗಳಿಗೆ ಮಾಲಾಶ್ರೀ ಜೀವ ತುಂಬಿದ್ದರೂ, ಧ್ವನಿಯಲ್ಲಿ ಜೀವಂತಿಕೆ ಕಾಣುವುದಿಲ್ಲ. ಅವರಿಗೆ ಮೊದಲ ಬಾರಿ ಕೋಮಲ್ ನಾಯಕನಾಗಿರುವುದು ವಿಶೇಷ. ಇಬ್ಬರ ನಡುವೆ ರೊಮ್ಯಾಂಟಿಕ್ ದೃಶ್ಯಗಳು ಬಿಡಿ, ಪರಸ್ಪರ ಪ್ರೀತಿಯ ಮಾತುಗಳೂ ಕಾಣುವುದಿಲ್ಲ. ಮಾಲಾಶ್ರೀ ಪುತ್ರಿ ಅನನ್ಯಾ ಕೂಡ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾಳೆ.ಆಶಿಶ್ ವಿದ್ಯಾರ್ಥಿ ಖಳನ ಪಾತ್ರದಿಂದ ಬಡ್ತಿ ಪಡೆದಿದ್ದಾರೆ. ಉಳಿದ ಮುಂಬೈ ಖಳನಟರು ಗಮನ ಸೆಳೆಯುಂತಿಲ್ಲ. ಹಂಸಲೇಖಾ ಸಂಗೀತವೂ ಕೇಳುವಂತಿಲ್ಲ. ಉಳಿದ ವಿಭಾಗಗಳನ್ನು ನಮೂದಿಸಲೇಬೇಕು ಎಂಬಂತಹ ನಿರ್ವಹಣೆ ಕಾಣುತ್ತಿಲ್ಲ.ಒಟ್ಟಾರೆ ಎಂದಿನಂತೆ ಈ ಹಿಂದಿನ ಮಾಲಾಶ್ರೀ ಸಿನಿಮಾಗಳ ನೆರಳನ್ನೇ ಅದ್ಧೂರಿಯಾಗಿ ಈ ಚಿತ್ರದಲ್ಲಿ ನೋಡಬಹುದು.