ಚಿತ್ರ ವಿಮರ್ಶೆ: ನಾಗವಲ್ಲಿಯ ಜಾಡಿನಲ್ಲಿ ಆಪ್ತರಕ್ಷಕ
ತಾರಾಗಣ : ವಿಷ್ಣುವರ್ಧನ್, ಭಾವನಾ, ವಿಮಲಾ ರಾಮನ್, ಸಂಧ್ಯಾ, ಅವಿನಾಶ್, ಕೋಮಲ್, ರಮೇಶ್ ಭಟ್, ಶ್ರೀನಿವಾಸ ಮೂರ್ತಿ, ಶೋಭರಾಜ್, ವಿನಯಾ ಪ್ರಸಾದ್ ಮುಂತಾದವರುನಿರ್ದೇಶನ : ಪಿ.ವಾಸುಸಂಗೀತ: ಗುರುಕಿರಣ್ಪ್ರೀತಿಯ 'ಸಾಹಸಸಿಂಹ' ವಿಷ್ಣುವರ್ಧನ್ ಅಭಿನಯದ ಬಹುಜನರ ನಿರೀಕ್ಷೆಯ 200ನೇ ಹಾಗೂ ಕೊನೆಯ ಚಿತ್ರ 'ಆಪ್ತರಕ್ಷಕ' ಪ್ರೇಕ್ಷಕರ ನಿರೀಕ್ಷೆಗಳನ್ನು ಹುಸಿ ಮಾಡುವುದಿಲ್ಲ. 'ಆಪ್ತಮಿತ್ರ'ದ ಯಶಸ್ಸನ್ನೇ ಈ ಚಿತ್ರವೂ ಗಳಿಸುವ ಎಲ್ಲಾ ಲಕ್ಷಣಗಳು ಬಿಡುಗಡೆಯ ದಿನ ಗೋಚರಿಸಿದೆ.ಡಾ. ವಿಜಯ್ ಮತ್ತು ದುಷ್ಟರಾಜ ವಿಜಯರಾಜೇಂದ್ರ ಬಹದ್ದೂರ್ ಪಾತ್ರಗಳಲ್ಲಿ ವಿಷ್ಣುವರ್ಧನ್ ತನ್ನ ಪ್ರತಿಭೆಯೇನೆಂಬುದನ್ನು ಕೊನೆಯ ಬಾರಿ ತೋರಿಸಿದ್ದರೆ, ನಿರ್ದೇಶಕ ಪಿ. ವಾಸು ಅವರದ್ದು ಅದ್ಭುತ ನಿರ್ದೇಶನ.ಆಪ್ತರಕ್ಷಕ ಚಿತ್ರಗಳ ಗ್ಯಾಲರಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಆಪ್ತಮಿತ್ರ ಚಿತ್ರಕಥೆಯ ಛಾಯೆಯೊಂದಿಗೇ ಸಾಗುವ ಈ ಚಿತ್ರ, ದೊಡ್ಡ ಕುಟುಂಬವೊಂದರಲ್ಲಿ ಇದ್ದಕ್ಕಿದ್ದಂತೆ ವಿಚಿತ್ರಗಳು ಸಂಭವಿಸುವುದರ ಮೂಲಕ ಪ್ರಾರಂಭವಾಗುತ್ತದೆ. ಇದರ ನಡುವೆಯೇ ಆಕಸ್ಮಿಕವಾಗಿ ಹಾವೊಂದು ಅದೇ ಮನೆಯಲ್ಲಿ ಬೀಡು ಬಿಡುತ್ತದೆ.
ಅನಾದಿ ಕಾಲದ ನೃತ್ಯಗಾರ್ತಿ ನಾಗವಲ್ಲಿಯ ದೊಡ್ಡ ಭಾವಚಿತ್ರವನ್ನು ಮನೆಗೆ ತರುವ ಮೂಲಕ ಈ ಎಲ್ಲಾ ಘಟನೆಗಳು ಪ್ರಾರಂಭವಾಗುತ್ತವೆ. ಈ ತೊಂದರೆಯನ್ನು ಬಗೆಹರಿಸುವ ಸಲುವಾಗಿ ಆಚಾರ್ಯ (ಅವಿನಾಶ್) ರೊಬ್ಬರ ಮೊರೆಹೋಗುತ್ತದೆ ಆ ಕುಟುಂಬ.
ಆದರೆ ಆ ಸಮಸ್ಯೆಯನ್ನು ಬಗೆಹರಿಸುವಲ್ಲಿ ವಿಫಲರಾಗುವ ಆಚಾರ್ಯರು ತಮ್ಮ ಸ್ನೇಹಿತರಾದ ಮನಶಾಸ್ತ್ರಜ್ಞರನ್ನು (ವಿಷ್ಣುವರ್ಧನ್) ಆ ಮನೆಗೆ ಕರೆಸಿಕೊಳ್ಳುತ್ತಾರೆ.
ನಟ ವಿಷ್ಣುವರ್ಧನ್ ಹೇಗೆ ಆ ಮನೆಯ ದುಷ್ಟಶಕ್ತಿಯನ್ನು ಓಡಿಸುತ್ತಾರೆ ಎಂಬುದೇ ಇಡೀ ಚಿತ್ರದ ಬೇರು. ಮುಂದೇನಾಗುತ್ತೆ ಎಂಬುದನ್ನು ನೀವು ತಿಳಿಯಬೇಕಾದರೆ ಚಿತ್ರಮಂದಿರಕ್ಕೆ ಹೋಗಬೇಕು.
ಗುರುಕಿರಣ್ ಸಂಗೀತದಲ್ಲಿ ಈ ಹಿಂದಿನ ಮಾಧುರ್ಯವೇ ಮೇಳೈಸುತ್ತದೆ. ಪಿಕೆಎಚ್ ದಾಸ್ ಅವರ ಕ್ಯಾಮರಾದ ಬಗ್ಗೆ ಎರಡು ಮಾತಿಲ್ಲ. ಸಂಭಾಷಣೆ, ಚಿತ್ರಕಥೆಯಲ್ಲಿ ಕೂಡ ಹುಳುಕು ಹುಡುಕುವುದು ಕಷ್ಟ.
ಅಭಿಮಾನಿಗಳು ಭಾರೀ ನಿರೀಕ್ಷೆಯೊಂದಿಗೆ ಚಿತ್ರಮಂದಿರಕ್ಕೆ ನುಗ್ಗುತ್ತಿದ್ದಾರೆ. ಅಗಲಿದ ವಿಷ್ಣುವಿನ ಮೇಲೆ ಜನ ಎಷ್ಟರ ಮಟ್ಟಿಗೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ, ಯಾವ ಪರಿ ಅವರನ್ನು ಇನ್ನೂ ಪ್ರೀತಿಸುತ್ತಿದ್ದಾರೆ ಎಂಬುದಕ್ಕೆ ಇದು ಸಾಕ್ಷಿಯಾಗುತ್ತಿದೆ.
ಒಟ್ಟಾರೆ ಹೇಳಬಹುದಾದರೆ, ಹಿಂದಿನ ‘ಆಪ್ತಮಿತ್ರ’ನಂತೆ ಆಪ್ತರಕ್ಷಕನೂ ಯಶಸ್ವಿ ಆಗುವುದರಲ್ಲಿ ಅನುಮಾನಗಳಿಲ್ಲ. ಚಿತ್ರ ನೋಡುಗರನ್ನು ಹಿಡಿದಿಡುತ್ತದೆ. ಸಿನಿಮಾ ವೀಕ್ಷಿಸುತ್ತಿದ್ದರೆ ಹಳೆಯ ಆಪ್ತ ಮಿತ್ರನ ನೆನಪಾಗುತ್ತದೆ. ಒಟ್ಟಾರೆ ಸೊಗಸಾದ ಚಿತ್ರವೊಂದನ್ನು ತಯಾರಿಸುವಲ್ಲಿ ನಿರ್ದೇಶಕ ಪಿ.ವಾಸು ಯಶಸ್ವಿಯಾಗಿದ್ದಾರೆ ಎನ್ನಬಹುದು.
ಖಂಡಿತಾ ಇದನ್ನು ಯಾರೂ ಮಿಸ್ ಮಾಡಬಾರದು.