ಚಾಲೆಂಜ್ ಚಿತ್ರವಿಮರ್ಶೆ: ಹೊಸತನದ ಹಾದಿಯಲ್ಲಿ..
ಚಿತ್ರ: ಚಾಲೆಂಜ್ತಾರಾಗಣ: ಹರೀಶ್ ರಾಜ್, ದಿಲೀಪ್ ರಾಜ್, ನಿಶಾಂತ್ ಅಚ್ಯುತ ಕುಮಾರ್, ಧರ್ಮ, ಕಲಾಭವನ್ ಮಣಿ, ಸಂಜನಾ ಸಿಂಗ್ನಿರ್ದೇಶಕ: ಗಣೇಶ್ ಕಾಮರಾಜನ್ಸಂಗೀತ: ಕಣ್ಣನ್ '
ಗಜನಿ'ಯಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ಗಣೇಶ್ ಕಾಮರಾಜನ್ ಮೊದಲ ಬಾರಿ ಆಕ್ಷನ್-ಕಟ್ ಹೇಳಿರುವ ಚಿತ್ರ 'ಚಾಲೆಂಜ್'. ಅವರು ಮೊದಲೇ ಹೇಳಿಕೊಂಡಿರುವಂತೆ ಇದು 'ಗಜನಿ' ಚಿತ್ರದ ಎಳೆಯನ್ನು ನೆನಪಿಸುತ್ತಲೇ ಸಾಗುತ್ತದೆ. ಎಲ್ಲೋ ಒಂದು ಕಡೆ ಹಿಂದಿಯ 'ಆಸಿಡ್ ಫ್ಯಾಕ್ಟರಿ'ಯನ್ನೂ ಎಳೆದುಕೊಳ್ಳುತ್ತದೆ.ಅದೊಂದು ಫ್ಯಾಕ್ಟರಿ. ಅಲ್ಲಿರುವ ಏಳೂ ಮಂದಿ ಪ್ರಜ್ಞೆ ಕಳೆದುಕೊಂಡಿರುತ್ತಾರೆ. ಎಚ್ಚರವಾದಾಗ ತಾವು ಯಾರೆಂದೇ ಗೊತ್ತಿರುವುದಿಲ್ಲ. ಪರಸ್ಪರರ ಗುರುತೇ ಇರುವುದಿಲ್ಲ. ಒಬ್ಬೊಬ್ಬರದು ಒಂದೊಂದು ರೀತಿಯ ವಿಚಿತ್ರ ವ್ಯಕ್ತಿತ್ವ. ನಾನು ಯಾರು ಅನ್ನೋದು ಅವರೆಲ್ಲರ ಪ್ರಶ್ನೆ. ಇದಕ್ಕೆ ಕಾರಣ, ಪೆಂಟೇನ್ ಗ್ಯಾಸ್. ಅದರಿಂದಾಗಿಯೇ ಅವರು ತಾತ್ಕಾಲಿಕವಾಗಿ ನೆನಪಿನ ಶಕ್ತಿ ಕಳೆದುಕೊಂಡಿರುತ್ತಾರೆ.ಅವರು ಯಾರು? ಫ್ಯಾಕ್ಟರಿಗೆ ಬಂದದ್ದು ಯಾಕೆ? ಫ್ಯಾಕ್ಟರಿಗೆ ಹೊರಗಿನಿಂದ ಲಾಕ್ ಮಾಡಿದವರು ಯಾರು? ಹೀಗೆ ಹತ್ತಾರು ಕಡೆಗಳಿಂದ ಪ್ರೇಕ್ಷಕರ ತಲೆಗೆ ಚೆನ್ನಾಗಿಯೇ ಹುಳ ಬಿಡುವ ನಿರ್ದೇಶಕರು ಪ್ರಥಮಾರ್ಧ ಮುಗಿಯುವವರೆಗೆ ಏನನ್ನೂ ಹೇಳುವುದಿಲ್ಲ. ದ್ವಿತೀಯಾರ್ಧದಲ್ಲಿ ಎಲ್ಲವನ್ನೂ ಹೇಳಿ ಬಿಡುತ್ತಾರೆ.ನಿಜಕ್ಕೂ ಒಂದೊಳ್ಳೆ ಕಥೆ 'ಚಾಲೆಂಜ್'ನಲ್ಲಿದೆ. ಮೊದಲ ಚಿತ್ರದಲ್ಲೇ ಗಣೇಶ್ ಕಾಮರಾಜನ್ ತಾನು ಬುದ್ಧಿವಂತ ಅನ್ನೋದನ್ನು ನಿರೂಪಿಸಿದ್ದಾರೆ. ಹಾಗೆಂದು ಅವರು ನಿರ್ದೇಶನದ ಕಲೆಗಳನ್ನು ಕರಗತ ಮಾಡಿಕೊಂಡಿದ್ದಾರೆ ಎಂದು ಹೇಳುವುದು ಕಷ್ಟ. ಅವರಿಗೆ ತನ್ನ ಯೋಚನೆಗಳನ್ನು ದೃಶ್ಯ ರೂಪಕ್ಕೆ ಇಳಿಸುವುದು ಸಾಧ್ಯವಾಗಿಲ್ಲ. ಬರವಣಿಗೆಯಲ್ಲಿ ಓದುಗರನ್ನು ಹಿಡಿದಿಡುವುದಕ್ಕೂ, ತೆರೆಯ ಮೇಲೆ ಪ್ರೇಕ್ಷಕರನ್ನು ಸಂಭಾಳಿಸುವುದಕ್ಕೂ ಇರುವ ವ್ಯತ್ಯಾಸ ನಿರ್ದೇಶಕರ ಹಿಡಿತಕ್ಕೆ ಸಿಕ್ಕಿಲ್ಲ. ಅವರು ಪ್ರೇಕ್ಷಕನಾಗಿ ನೋಡುವ ಪ್ರಯತ್ನ ಮಾಡದಿರುವುದೇ ಆಗಿರುವ ಪ್ರಮುಖ ಹಿನ್ನಡೆ.ಚಿತ್ರದ ನಿಜವಾದ ಹೀರೋ ಅಚ್ಯುತ ಕುಮಾರ್. ಅವರ ಪ್ರತಿಭಾ ಪ್ರದರ್ಶನಕ್ಕೆ 'ಚಾಲೆಂಜ್' ಉತ್ತಮ ವೇದಿಕೆಯಾಗಿದೆ. ಹರೀಶ್ ರಾಜ್, ದಿಲೀಪ್, ಧರ್ಮ, ಕಲಾಭವನ್ ಮಣಿಯವರ ಆಯ್ಕೆಗೆ ಭೇಷ್ ಅನ್ನಬೇಕು. ಸಂಜನಾ ಸಿಂಗ್‌ಗೆ ಹೆಚ್ಚೇನೂ ಕೆಲಸವಿಲ್ಲ.ಇರುವುದು ಎರಡೇ ಹಾಡುಗಳು. ಅದೂ ಅನಗತ್ಯ ಎನಿಸಿ ಬಿಡುತ್ತದೆ. ಆದರೂ ಇದ್ದುದರಲ್ಲಿ ಒಂದು ಟಪಾಂಗುಚ್ಚಿ ಹಾಡು ಓಕೆ. ಕತ್ತಲು-ಬೆಳಕಿನ ಜತೆ ಆಟವಾಡಿರುವ ಮಗೇಶ್ ಕೆ. ದೇವ್ ಛಾಯಾಗ್ರಹಣ ಸೂಪರ್. ಸಂಕಲನದ ಬಗ್ಗೆ ಎರಡು ಮಾತೇ ಇಲ್ಲ.ಅದೇ ಚರ್ವಿತ ಚರ್ವಣ ಕಥೆಯ ಹೊಡೆ-ಬಡಿ ಮಸಾಲೆ ಚಿತ್ರಗಳನ್ನು ನೋಡಿ ಬೋರಾದ ಕ್ಯಾಟಗರಿ ನಿಮ್ಮದಾಗಿದ್ದರೆ, ಖಂಡಿತಾ ಕೆಲವೊಂದು ಮಿತಿಗಳನ್ನು ಹಾಕಿಕೊಂಡು ಈ ಚಿತ್ರವನ್ನು ಒಮ್ಮೆ ನೋಡಬಹುದು.