Select Your Language

Notifications

webdunia
webdunia
webdunia
webdunia

ಗೌರಿಪುತ್ರ ಚಿತ್ರವಿಮರ್ಶೆ: ಹುಡುಕಾಟದ ಹುಡುಗಾಟವಿಲ್ಲ

ಗೌರಿಪುತ್ರ ಚಿತ್ರವಿಮರ್ಶೆ: ಹುಡುಕಾಟದ ಹುಡುಗಾಟವಿಲ್ಲ
ಚಿತ್ರ: ಗೌರಿಪುತ್ರ
ತಾರಾಗಣ: ಅಕ್ಷಯ್, ನಾಗಶೇಖರ್, ರಾಕೇಶ್, ನಿಖಿತಾ, ನಿವೇದಿತಾ, ರೂಪಿಕಾ
ನಿರ್ದೇಶನ: ಮಂಜು ಮಸ್ಕಲ್ ಮಟ್ಟಿ
ಸಂಗೀತ: ಮಿಲಿಂದ್ ಧರ್ಮಸೇನಾ

SUJENDRA
ಇದು ವಧು ಅನ್ವೇಷನೆಗಾಗಿ ನಾಯಕ ಪರದಾಡುವ ಕಥೆಯ ಸಿನಿಮಾ. ನಾಯಕ ಗಣೇಶ (ಅಕ್ಷಯ್) ಏನೇ ಮಾಡಿದರೂ ಹುಡುಗಿ ಸೆಟ್ ಆಗುವುದಿಲ್ಲ. ಗಣೇಶನಿಗೆ ಹುಡುಗಿ ಓಕೆ ಅನ್ನಿಸಿದಾಗಲೆಲ್ಲ ಏನಾದರೂ ಅಡೆತಡೆ. ಮದುವೆಯಾಗಬೇಕಿದ್ದ ಹುಡುಗಿ ಅದೇ ದಿನ ಪರಾರಿಯಾಗುವುದು, ಬೇರೆ ಯಾರನ್ನೋ ಇಷ್ಟಪಡುವುದನ್ನು ನೋಡುವ ಕರ್ಮ.

ಅವೆಲ್ಲಕ್ಕಿಂತಲೂ, ತಿರಸ್ಕರಿಸಿದ ಹುಡುಗಿಯರ ಪಾಲಿಗೆ ಗಣೇಶ ಆಪತ್ ಬಾಂಧವನಾಗುವುದು. ಎಲ್ಲವೂ ತಾನು ಅಂದುಕೊಂಡಂತೆಯೇ ಆಗಬೇಕು ಎಂದು ಬಯಸುವ ಸೌಮ್ಯ ಜೀವಿಯದ್ದು ಪರದಾಟದ ಬದುಕು. ಇಲ್ಲಿ ಸಾಂತ್ವನ ನೀಡಲೆಂದು ಬರುತ್ತಾನೆ ಅಂಧ ರೇಡಿಯೋ ಜಾಕಿ ಶೇಖರ್ ನಾಗ್ (ನಾಗಶೇಖರ್).

ತಮಿಳಿನ 'ರಾಮನ್ ತೇಡಿಯಾ ಸೀತೆ'ಯಿಂದಲೇ ಸ್ಫೂರ್ತಿ ಪಡೆದಿರುವ ನಿರ್ದೇಶಕ ಮಂಜು ಮಸ್ಕಲ್ ಮಟ್ಟಿ, ಒಂದು ಹಂತದವರೆಗೆ ಗೆಲ್ಲುತ್ತಾರೆ. ಆದರೆ ಭೂತಕಾಲದ ಕಥೆಯನ್ನು ಪ್ರೆಸೆಂಟ್ ಮಾಡುವ ರೀತಿಯಲ್ಲಿ ಸೋಲುತ್ತಾರೆ. ನಾಯಕ ವಧುವಿಗಾಗಿ ಪರದಾಟ ನಡೆಸುವುದು ಕಾಲೋಚಿತವೆನಿಸುವುದಿಲ್ಲ. ಗಂಭೀರ ದಾರಿಯಲ್ಲಿ ಹೋಗುವುದಕ್ಕಿಂತ ಹಾಸ್ಯವನ್ನು ಆರಿಸಿಕೊಳ್ಳುತ್ತಿದ್ದರೆ ಪಥ್ಯವಾಗುತ್ತಿತ್ತು.

ಇವೆಲ್ಲಕ್ಕಿಂತಲೂ ಚಿತ್ರದಲ್ಲಿ ಎದ್ದು ಕಾಣುವ ಪ್ರಮುಖ ಕೊರತೆ, ಲೈವ್ಲಿನೆಸ್ ಇಲ್ಲದೇ ಇರುವುದು. ನಾಯಕ ಅಕ್ಷಯ್ ನಟಿಸುತ್ತಿದ್ದಾರೆ ಎಂಬಷ್ಟಕ್ಕೇ ಸೀಮಿತರಾಗಿ ಬಿಡುತ್ತಾರೆ. ಇಂತಹ ಅದೆಷ್ಟೋ ಚಿತ್ರಗಳನ್ನು ಅನಂತ್‌ನಾಗ್ ಕೊಚ್ಚಿ ಹಾಕಿದ್ದಾರೆ. ಕನಿಷ್ಠ ಅದನ್ನು ನೋಡಿಯಾದರೂ ಕಲಿಯುವ ಅವಕಾಶ ಅಕ್ಷಯ್‌ಗಿತ್ತು. ಇದು ನಿರ್ದೇಶಕರಿಗೂ ಅನ್ವಯಿಸುತ್ತದೆ.

ಇಷ್ಟಾದ ಮೇಲೂ ಮಂಜು ಮಸ್ಕಲ್ ಮಟ್ಟಿ ಮೊದಲ ಚಿತ್ರದಲ್ಲಿ ಭರವಸೆ ಮೂಡಿಸಿದ್ದಾರೆ. ಅವರು ಫೇಲಾಗಿರುವ ವಿಭಾಗಗಳನ್ನು ಕೊಂಚ ಗಂಭೀರವಾಗಿ ಪರಿಗಣಿಸಿ, ಆ ಕಡೆ ದೃಷ್ಟಿ ಹರಿಸಿದರೆ ಅವರು ಒಳ್ಳೆಯ ನಿರ್ದೇಶಕನಾಗುವ ಸಾಧ್ಯತೆಗಳಿವೆ.

'ಗೌರಿಪುತ್ರ'ದ ನಾಯಕ-ನಾಯಕಿಗಿಂತ ನಾಗಶೇಖರ್-ನಿವೇದಿತಾ ಪಾತ್ರಗಳೇ ಗಮನ ಸೆಳೆಯುತ್ತದೆ. ಅವರ ಕಥೆಯನ್ನೇ ಪ್ರಮುಖವನ್ನಾಗಿಸಿದ್ದರೆ ಚಿತ್ರಕ್ಕೊಂದು ಬೇರೆಯದೇ ಆಯಾಮ ಸಿಕ್ಕಿ ಬಿಡುತ್ತಿತ್ತು. ತೀರಾ ಆತ್ಮೀಯತೆಯಿಂದಲೇ ಅವರು ನಟಿಸಿರುವುದು ಮೆಚ್ಚುಗೆಗೆ ಪಾತ್ರವಾಗುತ್ತದೆ.

ನಿಖಿತಾ ಸೇರಿದಂತೆ ಉಳಿದ ಪಾತ್ರಗಳನ್ನು ಉಲ್ಲೇಖಿಸುವುದು ಅನಗತ್ಯ. ಮಿಲಿಂದ್ ಧರ್ಮಸೇನಾ ಸಂಗೀತದ ಎರಡು ಹಾಡುಗಳಷ್ಟೇ ಕೇಳುವಂತಿವೆ.

Share this Story:

Follow Webdunia kannada