Article Kannada Cinema Review %e0%b2%97%e0%b3%82%e0%b2%b3%e0%b2%bf 108032400016_1.htm

Select Your Language

Notifications

webdunia
webdunia
webdunia
webdunia

ಗೂಳಿ

ಗೂಳಿ
ಸುದೀಪ್ ಇಂಥಾ ಪಾತ್ರಗಳಲ್ಲಿ ಅಭಿನಯಿಸಬಲ್ಲರು ಎಂಬುದು ರಂಗ ಎಸ್ಎಸ್ಎಲ್‌ಸಿ ಚಿತ್ರದಲ್ಲಿಯೇ ಸಾಬೀತಾಗಿತ್ತು. ಅವರೊಂಥರಾ ಅಣೆಕಟ್ಟೆ ಕಟ್ಟಬಾರದ ನದಿಯಿದ್ದಂತೆ. ಚಿತ್ರದ ಕಥೆ, ಆಶಯ, ಸಂಭಾಷಣೆ ಮತ್ತು ಕ್ಯಾಮರಾಕೋನವನ್ನು ವಿವರಿಸಿಬಿಟ್ಟರೆ ಸಾಕು; ತಮ್ಮ ಪಾಲಿನ ಕರ್ತವ್ಯವನ್ನು ಚಾಚೂ ತಪ್ಪದೆ ನಿಭಾಯಿಸಿಕೊಂಡು ಹೋಗುತ್ತಾರೆ. ಈ ನದಿಗೆ ಮಧ್ಯೆ ಎಲ್ಲೂ ಅಣೆಕಟ್ಟೆ ಇರುವುದಿಲ್ಲವಾದ್ದರಿಂದ ಒಮ್ಮೊಮ್ಮೆ ಅವರು ಹುಚ್ಚುಹೊಳೆಯಾಗುತ್ತಾರೆ, ತಗ್ಗು ಬಂದಾಗ ಜಲಪಾತವಾಗುತ್ತಾರೆ. ಒಟ್ಟಿನಲ್ಲಿ ಅವರ ಪಾಡಿಗೆ ಅವರನ್ನು ಬಿಟ್ಟುಬಿಡಬೇಕು.

ಇಷ್ಟು ಹೇಳಿದರೆ ಪ್ರಾಯಶಃ ಗೂಳಿ ಚಿತ್ರದ ಪ್ಲಸ್ ಪಾಯಿಂಟ್ ಏನು, ಚಿತ್ರವನ್ನು ಆವರಿಸಿಕೊಂಡಿರುವುದು ಯಾರು ಎಂಬುದೆಲ್ಲಾ ಸ್ಪಷ್ಟವಾಗಿಬಿಡುತ್ತದೆ. ಈ ಮೊದಲೇ ಚಿತ್ರಸುದ್ದಿಗಳಲ್ಲಿ ತಿಳಿಸಿರುವಂತೆ ಇದೊಂದು ರೌಡಿಸಂ ಚಿತ್ರ. ಭೂಗತ ದೊರೆಯ ಚಿತ್ರ. ಆತನ ಹೆಸರು ಗೂಳಿ ಎಂದಿರುವುದರಿಂದ ಆತನ ನುಗ್ಗುವಿಕೆಗೆ ಯಾರದೂ ತಡೆಯಿರುವುದಿಲ್ಲ.

ಇಂಥ ರಫ್ ಅಂಡ್ ಟಫ್ ನಾಯಕನ ಜೀವನದಲ್ಲಿ ಸಾಧುಸ್ವಭಾವದ ನಾಯಕಿಯ ಪ್ರವೇಶವಾಗುತ್ತದೆ. ಹಲವಾರು ಆಫರ್-ನಿರಾಕರಣೆಗಳ ನಂತರ ಅವಳ ಪ್ರೀತಿಯಲ್ಲಿ ನಾಯಕ ಸಿಲುಕುತ್ತಾನೆ. ಕೊನೆಗೆ ಮದುವೆಯಾಗಲೂ ತೀರ್ಮಾನಿಸುತ್ತಾನೆ. ಅದರೆ ಇವರ ಮದುವೆಯ ದಿನದಂದೇ ರೌಡಿಗಳ ದಾಳಿಯಾಗುತ್ತದೆ. ಇದನ್ನು ಮಾಡಿಸಿದವನು ನಾಯಕಿಯ ಅಣ್ಣ ಎಂಬಲ್ಲಿಗೆ ಕಥೆ ತಿರುವನ್ನು ತೆಗೆದುಕೊಳ್ಳುತ್ತದೆ. ಕಥಾನಾಯಕಿಯ ಅಣ್ಣ ಹೀಗೆ ಮಾಡಲು ಕಾರಣವೇನು ಎಂಬ ಪ್ರಶ್ನೆಗೆ ಉತ್ತರವನ್ನು ಬೆಳ್ಳಿತೆರೆಯ ಮೇಲೆ ನೋಡಿಯೇ ಕಂಡುಕೊಳ್ಳಬೇಕು.

ಚಿತ್ರಕಥೆ-ಅಭಿನಯ ಇತ್ಯಾದಿ ಅಂಶಗಳು ಉತ್ತಮವಾಗಿ ಮೂಡಿಬಂದಿದ್ದರೂ, ಸಮಾಜಕ್ಕೆ ಅದರಲ್ಲೂ ಯುವ ಜನಾಂಗಕ್ಕೆ ಚಿತ್ರದಲ್ಲಿ ನಡೆಯುವ ಸೀರಿಯಲ್‌ಗಟ್ಟಲೇ ಕೊಲೆಗಳಿಂದಾಗಿ ತಪ್ಪು ಸಂದೇಶ ರವಾನೆಯಾಗುತ್ತದಾ ಎಂಬ ಸಂದೇಹ ಕಾಡದಿರದು. ಇದನ್ನು ಬದಿಗಿಟ್ಟು ನೋಡುವುದಾದರೆ, ಎಸ್......ಸುದೀಪ್ ಮಿಂಚಿದ್ದಾರೆ. ಗಜ ಚಿತ್ರದಿಂದ ದರ್ಶನ್‌ಗೆ ಮರುಜನ್ಮ ಸಿಕ್ಕಂತೆಯೇ ಗೂಳಿ ಚಿತ್ರದಿಂದ ಸುದೀಪ್‌ಗೂ ತಮ್ಮ ಚಿತ್ರಜೀವನ ಮತ್ತೆ ಕೈಗೆ ಸಿಗುವ ಎಲ್ಲಾ ಸಾಧ್ಯತೆಗಳಿವೆ. ಅದಕ್ಕಾಗಿ ಅವರು ಚಿತ್ರದಲ್ಲಿ ಸಾಕಷ್ಟು ಕಷ್ಟಪಟ್ಟಿದ್ದಾರೆ ಕೂಡಾ. ಸಂಗೀತ, ಸಂಭಾಷಣೆ, ಸಾಹಸ ಮತ್ತು ಛಾಯಾಗ್ರಾಹಣ ಹೀಗೆ ಎಲ್ಲ ವಿಭಾಗಗಳಲ್ಲೂ ಓಹೋ ಎನ್ನುವಂತಹ ಕೆಲಸವನ್ನು ತೆಗೆದುಕೊಂಡಿದ್ದಾರೆ ನಿರ್ದೇಶಕರು.

ಬಹಳ ದಿನಗಳ ನಂತರ ಸುದೀಪ್ ಕಟ್ಟಾ ಅಭಿಮಾನಿಗಳು ನೋಡಬಹುದಾದ ಒಂದು ಚಿತ್ರ ಬಿಡುಗಡೆಯಾಗಿರುವುದಕ್ಕೆ ಸಂತೋಷವಾಗುತ್ತಿದೆ. ಆದರೆ ಮಿಕ್ಕವರ ಪಾಡೇನು ಎಂಬುದೇ ಚಿಂತೆ!!

Share this Story:

Follow Webdunia kannada