ಗುರು ಚಿತ್ರವಿಮರ್ಶೆ: ಗುರಿಕಾರ ಜಗ್ಗೇಶ್ ಟಾರ್ಗೆಟ್ ಮಿಸ್ಸಾಗಿಲ್ಲ
ಚಿತ್ರ: ಗುರುತಾರಾಗಣ: ಗುರುರಾಜ್, ರಶ್ಮಿ ಗೌತಮ್, ಯತಿರಾಜ್, ಶ್ರೀನಿವಾಸ ಮೂರ್ತಿ, ಅಭಿಜಿತ್ನಿರ್ದೇಶನ: ಜಗ್ಗೇಶ್ಸಂಗೀತ: ವಿನಯ್ ಚಂದ್ರಚಿತ್ರೀಕರಣ ಸಂದರ್ಭದಲ್ಲೇ 'ಗುರು' ರಿಮೇಕ್ ಎಂಬ ಗುಲ್ಲು ಕೇಳಿ ಬಂದಿತ್ತು. ಆದರೆ ಇದನ್ನು ಸ್ವತಃ ನವರಸ ನಾಯಕ, ನಿರ್ದೇಶಕ ಜಗ್ಗೇಶ್ ನಿರಾಕರಿಸಿದ್ದರು. ಆದರೆ ಬಿಡುಗಡೆಗೆ ದಿನ ಹತ್ತಿರ ಬರುತ್ತಿದ್ದಂತೆ ಸಂದರ್ಶನವೊಂದರಲ್ಲಿ, ಇದು ಕೊರಿಯನ್ ಸಿನಿಮಾ ಆಧರಿತ ಚಿತ್ರ ಎಂದು ಹೇಳಿ ಬಿಟ್ಟರು. ಈಗ ಸಿನಿಮಾ ನೋಡಿದರೆ 2011ರಲ್ಲಿ ಬಿಡುಗಡೆಯಾದ ತಮಿಳಿನ 'ಮೌನ ಗುರು' ಕಾಪಿ!ಅಲ್ಲಿಂದ ಇಲ್ಲಿಂದ ಎತ್ತಿಕೊಂಡ ಸರಕು ಎನ್ನುವುದನ್ನು ಮರೆತು ನೋಡುವುದಾದರೆ, ನಿರ್ದೇಶಕರಾಗಿ ಜಗ್ಗೇಶ್ ಭರವಸೆ ಮೂಡಿಸಿದ್ದಾರೆ. ಎಲ್ಲೂ ತಾನು ಹೊಸಬ ಎಂಬುವುದನ್ನು ತೋರ್ಪಡಿಸಿಲ್ಲ. ಇಬ್ಬರೂ ಮಕ್ಕಳನ್ನು ಒಬ್ಬ ಕಟ್ಟುನಿಟ್ಟಿನ ನಿರ್ದೇಶಕನಂತೆ ದುಡಿಸಿಕೊಂಡಿದ್ದಾರೆ. ಜಗ್ಗೇಶ್ ಪತ್ನಿ ಪರಿಮಳಾ ನಿರ್ಮಾಪಕಿಯಾಗಿರುವುದರಿಂದ ಈ ಚಿತ್ರದ ಮೂಲಕ ಇಡೀ ಫ್ಯಾಮಿಲಿಯೇ ಹೆಬ್ಬೆರಳನ್ನು ಮೇಲೆ ಮಾಡಿ ತಿರುಗಬಹುದು.ಗುರು (ಗುರುರಾಜ್) ಒಂಥರಾ ವಿಚಿತ್ರ ಹುಡುಗ. ತಾನಿರೋದೇ ಹೀಗೆ ಎಂಬ ಭಂಡ. ಹೀಗಿರುವಾಗ ಆತ ಇದ್ದಲ್ಲಿಗೆ ಸಮಸ್ಯೆಯೊಂದು ಹುಡುಕಿಕೊಂಡು ಬರುತ್ತದೆ. ಹೆದ್ದಾರಿಯಲ್ಲಿ ವ್ಯಕ್ತಿಯೊಬ್ಬನನ್ನು ಕೊಂದು ಪೊಲೀಸ್ ಅಧಿಕಾರಿ ಬೋಪಯ್ಯ (ಶೋಭರಾಜ್) ದೊಡ್ಡ ಮೊತ್ತದ ದುಡ್ಡನ್ನು ದೋಚುತ್ತಾನೆ. ಈ ಸಂಬಂಧ ಇತರ ಪೊಲೀಸ್ ಅಧಿಕಾರಿಗಳ ಜತೆ ಬೋಪಯ್ಯ ನಡೆಸುವ ಮಾತುಕತೆಯನ್ನು ಆತನ ಪ್ರೇಯಸಿ ಮಾಯಾ ವಿಡಿಯೋ ಮಾಡುತ್ತಾಳೆ. ಪ್ರೇಯಸಿಯನ್ನೇ ಕೊಂದು ಬಿಡುತ್ತಾನೆ ಬೋಪಯ್ಯ. ಈಗ ವಿಡಿಯೋ ಕ್ಯಾಮೆರಾ ಗುರುವಿನ ಹಾಸ್ಟೆಲ್ ರೂಮ್ ಸೇರುತ್ತದೆ.ಇಲ್ಲಿಂದ ಗುರುವಿಗೆ ಶನಿಕಾಟ ಶುರುವಾಗುತ್ತದೆ. ಜೈಲು ಪಾಲಾಗುತ್ತಾನೆ, ಮಾನಸಿಕ ಅಸ್ವಸ್ಥನೆಂದು ಆಸ್ಪತ್ರೆಗೆ ಸೇರಿಸುತ್ತಾರೆ, ನಕಲಿ ಎನ್‍ಕೌಂಟರ್ ಮಾಡಲು ಯತ್ನಿಸುತ್ತಾರೆ. ಇವೆಲ್ಲದರಿಂದ ಗುರು ಹೇಗೆ ಹೊರಗೆ ಬರುತ್ತಾನೆ? ಪೊಲೀಸ್ ಅಧಿಕಾರಿ ವಿರುದ್ಧ ಹೇಗೆ ಸೇಡು ತೀರಿಸಿಕೊಳ್ಳುತ್ತಾನೆ? ಇದು ಉಳಿದ ಕಥೆ.ನಾಯಕಿ ಬೇಕೆಂಬ ಕಾರಣಕ್ಕೆ ಅಂತಹದ್ದೊಂದು ಪಾತ್ರ ಸೃಷ್ಟಿಸಲಾಗಿದೆ. ಹಾಗಾಗಿ ರಶ್ಮಿ ಗೌತಮ್‌ಗೆ ಹೆಚ್ಚು ಕೆಲಸವಿಲ್ಲ. ಈ ಹಿಂದಿನ ಚಿತ್ರಗಳಿಗೆ ಹೋಲಿಸಿದರೆ ಗುರುರಾಜ್ ಸಹ್ಯ. ಆ ಮಟ್ಟಿಗಿನ ಬದಲಾವಣೆ ತರುವಲ್ಲಿ ಜಗ್ಗೇಶ್ ಯಶಸ್ವಿಯಾಗಿದ್ದಾರೆ. ಖಳನಟನಾಗಿ ಜಗ್ಗೇಶ್ ಇನ್ನೊಬ್ಬ ಪುತ್ರ ಯತಿರಾಜ್ ಭರವಸೆ ಮೂಡಿಸುತ್ತಾರೆ. ನಾಯಕನಾಗುವ ಸಾಹಸಕ್ಕೆ ಕೈ ಹಾಕದೆ ಇದ್ದರೆ ಉತ್ತಮ ಅನ್ನೋದು ಉಚಿತ ಸಲಹೆ.ಸುಧಾರಾಣಿ ಪೊಲೀಸ್ ಅಧಿಕಾರಿ ಅನ್ನೋದನ್ನು ಅರಗಿಸಿಕೊಳ್ಳುವುದು ಕಷ್ಟ. ಶ್ರೀನಿವಾಸ ಮೂರ್ತಿ, ಶೋಭರಾಜ್‌ರಿಂದ 'ಗುರು'ಬಲ ಸಿಕ್ಕಿದೆ.ರಮೇಶ್ ಬಾಬು ಕ್ಯಾಮರಾ ಕಣ್ಣುಕುಕ್ಕುತ್ತದೆ. ಅದರಲ್ಲೂ ಕತ್ತಲು ಬೆಳಕಿನ ಆಟದಲ್ಲವರು ಯಾವುದನ್ನೂ ಮಿಸ್ ಮಾಡದೆ ಗೆಲ್ಲುತ್ತಾರೆ. ಒಂದೆಡು ಹಾಡುಗಳಲ್ಲಿ ಸಂಗೀತ ವಿನಯ ಚಂದ್ರ ಗಮನ ಸೆಳೆಯುತ್ತಾರೆ. ಸಂಕಲನಕಾರ ಕೆ.ಎಂ. ಪ್ರಕಾಶ್ ಕತ್ತರಿ ಇನ್ನೂ ಚುರುಕಾಗಬೇಕಿತ್ತು. ಥ್ರಿಲ್ಲರ್ ಮಂಜು ಸಾಹಸದ ಬಗ್ಗೆ ಎರಡನೇ ಮಾತೇ ಇಲ್ಲ.ಜಗ್ಗೇಶ್ ಮಾಡಿರುವುದು ಮಾಮೂಲಿ ಸಿನಿಮಾವನ್ನಲ್ಲ. ಕ್ರೈಮ್-ಥ್ರಿಲ್ಲರ್-ಲವ್ ಸ್ಟೋರಿಯನ್ನು. ಆ ಮೊದಲ ಪರೀಕ್ಷೆಯಲ್ಲಿ ಅವರು ತೇರ್ಗಡೆಯಾಗಿದ್ದಾರೆ. ಮುಂದಿನ ಪರೀಕ್ಷೆಯಲ್ಲಿ ಉನ್ನತ ಅಂಕಗಳನ್ನು ಗಳಿಸಿದರೆ ಮಾತ್ರ ಸೀಟು.