Select Your Language

Notifications

webdunia
webdunia
webdunia
webdunia

ಗಾಡ್‌ಫಾದರ್ ಚಿತ್ರವಿಮರ್ಶೆ: ಉಪ್ಪಿ ಅಭಿಮಾನಿಗಳಿಗೆ ಮಾತ್ರವಲ್ಲ

ಗಾಡ್‌ಫಾದರ್ ಚಿತ್ರವಿಮರ್ಶೆ: ಉಪ್ಪಿ ಅಭಿಮಾನಿಗಳಿಗೆ ಮಾತ್ರವಲ್ಲ
ಚಿತ್ರ: ಗಾಡ್‌ಫಾದರ್
ತಾರಾಗಣ: ಉಪೇಂದ್ರ, ಸೌಂದರ್ಯಾ ಜಯಮಾಲಾ, ಕ್ಯಾಥರಿನ್ ತೆರೆಸಾ, ಸದಾ
ನಿರ್ದೇಶನ: ಸೇತು ಶ್ರೀರಾಮ್
ಸಂಗೀತ: ಎ.ಆರ್. ರೆಹಮಾನ್

PR


ಅಜಿತ್ ತ್ರಿಪಾತ್ರದಲ್ಲಿ ನಟಿಸಿದ್ದ 'ವರಲಾರು' ಚಿತ್ರವನ್ನು ಯಾರಿಂದಲೂ ನಿರ್ವಹಿಸಲು ಸಾಧ್ಯವೇ ಇಲ್ಲ ಎಂಬ ಮಾತಿತ್ತು. ಆದರೆ ಅದನ್ನು ಸುಳ್ಳು ಮಾಡಿದ್ದಾರೆ ರಿಯಲ್ ಸ್ಟಾರ್ ಉಪೇಂದ್ರ ಮತ್ತು ನಿರ್ದೇಶಕ ಸೇತು ಶ್ರೀರಾಮ್. ಮೂಲ ಚಿತ್ರಕ್ಕೆ ಸಡ್ಡು ಹೊಡೆಯುವಂತಿದೆ 'ಗಾಡ್‌ಫಾದರ್'.

ಇತ್ತೀಚೆಗೆ ಬಿಡುಗಡೆಯಾಗುತ್ತಿರುವ ಕನ್ನಡ ಚಿತ್ರಗಳಲ್ಲಿ ಕಥೆಯೇ ಇಲ್ಲ ಎಂಬ ಕೊರತೆಯನ್ನು ನೀಗಿಸಿರುವ 'ಗಾಡ್‌ಫಾದರ್' ರಿಮೇಕ್ ಅನ್ನೋದೊಂದು ಮಾತ್ರ ಹಿನ್ನಡೆ. ಅದನ್ನು ಬಿಟ್ಟರೆ ನಿಜಕ್ಕೂ ಅದ್ಭುತ ಚಿತ್ರ. ಇಲ್ಲಿ ಗ್ಲ್ಯಾಮರ್ ತುರುಕಿಲ್ಲ, ಮಸಾಲೆ ಹಚ್ಚಿಲ್ಲ, ಚಿತ್ರಮಂದಿರದಲ್ಲಿರುವ ಅಷ್ಟೂ ಹೊತ್ತು ಕುತೂಹಲ. ಒಂದೇ ಒಂದು ಬೋರಿಂಗ್ ಕ್ಷಣವಿಲ್ಲದಷ್ಟು ಜಾಣತನದ ನಿರೂಪನೆ.

webdunia
PR


ವ್ಹೀಲ್ ಚೇರ್‌ನಲ್ಲೇ ಅಡ್ಡಾಡುವ ಗಂಭೀರ ವದನನೇ ಇಲ್ಲಿ ಗಾಡ್‌ಫಾದರ್. ನರೆತ ಕೂದಲು, ಬಾಣದಂತಹ ಲುಕ್. ಆತ ಇಡೀ ಊರಿಗೇ ಗಾಡ್‌ಫಾದರ್. ಹೆಸರು ಶಿವ ಸಾಗರ್ (ಉಪೇಂದ್ರ). ಆತನ ಮಗ ವಿಜಯ್ (ಉಪೇಂದ್ರ) ದಿಕ್ಕು ದೆಸೆಯಿಲ್ಲದೆ ಕಾಲಹರಣ ಮಾಡುತ್ತಿರುವವನು. ಆತನ ಬದುಕು ಬದಲಿಸಲೇಬೇಕು ಎಂದು ಯಾವುದೋ ನೆಪದಲ್ಲಿ ಗಾಡ್‌ಫಾದರ್ ಒಂದೂರಿಗೆ ಕಳುಹಿಸುತ್ತಾನೆ.

ಅಲ್ಲಿ ಸಿಗುವವಳೇ ದಿವ್ಯಾ (ಸೌಂದರ್ಯಾ ಜಯಮಾಲಾ). ಇಷ್ಟು ಹೊತ್ತಿಗೆ ಅಜಯ್ (ಉಪೇಂದ್ರ) ಎಂಟ್ರಿಯೂ ಆಗುತ್ತದೆ. ಅಜಯ್ ಕೂಡ ಗಾಡ್‌ಫಾದರ್ ಮಗನೇ. ಆದರೆ ತಂದೆಯ ಬದಲು ತಾಯಿಯ ಜತೆ ಬೆಳೆದಿರುತ್ತಾನೆ. ಆತನಲ್ಲಿರೋದು ಗಾಡ್‌ಫಾದರ್ ಮೇಲಿನ ಸೇಡು. ಕೊಂದೇ ಬಿಡುತ್ತೇನೆ ಎಂಬ ಧಾವಂತ. ಮುಂದಿನ ಕಥೆ ಹೇಳದಿದ್ದರೇ ಉತ್ತಮ, ಅದನ್ನು ತೆರೆಯ ಮೇಲೆ ನೋಡಿಯೇ ಆನಂದಿಸಿ.

ಯಾವ ಹಂತದಲ್ಲೂ ಇದೊಂದು ಸರಳ ಸಿನಿಮಾ ಎಂಬ ಭಾವನೆಯೇ ಬರದು. ಹೆಚ್ಚು ಕಡಿಮೆ ಮೂಲ ಚಿತ್ರಕ್ಕೇ ನಿಷ್ಠರಾಗಿರುವ ಸೇತು ಶ್ರೀರಾಮ್, ಎಲ್ಲೂ ಬಸವಳಿದಿಲ್ಲ. ಅವರ ನಿರ್ದೇಶನದಷ್ಟೇ ಅಥವಾ ಅದಕ್ಕಿಂತ ಹೆಚ್ಚೇ ಛಾಯಾಗ್ರಹಣ ಚೆನ್ನಾಗಿದೆ. ಅವರ ಕನಸಿನ ಹಿಂದಿ ಚಿತ್ರ ನಿರ್ದೇಶನಕ್ಕೆ ಇನ್ನು ಕಾಯಬೇಕಿಲ್ಲ ಅನ್ನೋದು ನಮ್ಮ ಸಲಹೆ.

webdunia
PR


ಮೂರು ಪಾತ್ರದಲ್ಲಿ ಕಾಣಿಸಿಕೊಂಡಿರುವ ಉಪೇಂದ್ರರದ್ದು ಮೋಡಿಯ ನಟನೆ. ಅವರ ಅಭಿಮಾನಿಗಳಿಗೆ ಬಂಪರ್. ಅದರಲ್ಲೂ ಅವರು ಹೆಣ್ಣಿಗನಾಗಿರುವ ಭರತನಾಟ್ಯದಲ್ಲಂತೂ ಯಾರಿಗೂ ಮೆಚ್ಚದಿರಲು ಸಾಧ್ಯವಿಲ್ಲ. ಇವೆಲ್ಲಕ್ಕಿಂತಲೂ ಅವರಿಗೆ ಚೆನ್ನಾಗಿ ಮ್ಯಾಚ್ ಆಗಿರುವ ಪಾತ್ರ ವಯಸ್ಸಾಗಿರುವ ಗಾಡ್‌ಫಾದರ್. ನಟನಾಗಿ ತುಂಬಾ ಪ್ರಬುದ್ಧರಾಗಿದ್ದಾರೆ ಉಪ್ಪಿ.

ಸೌಂದರ್ಯಾ ಜಯಮಾಲಾ ಬಲಗಾಲಿಟ್ಟು ಒಳಗೆ ಬಂದಿದ್ದಾರೆ. ತಾಯಿಗೆ ತಕ್ಕ ಮಗಳಾಗಿರುವ ಅವರಿಗೆ ಉಜ್ವಲ ಭವಿಷ್ಯ ಕಟ್ಟಿಟ್ಟ ಬುತ್ತಿ. ಆದರೆ ತೂಕ ಇನ್ನೂ ಇಳಿಸಿಕೊಳ್ಳದಿದ್ದರೆ ಅವರಮ್ಮನಿಗಿಂತಲೂ ವಯಸ್ಸಾದಂತೆ ಕಾಣಬಹುದು.

ರೆಹಮಾನ್ ಸಂಗೀತದ ಬಗ್ಗೆ ಎರಡನೇ ಮಾತಿದೆ. ಮೂಲ ಚಿತ್ರದ ಹಾಡುಗಳನ್ನೇ ಭಟ್ಟಿ ಇಳಿಸಿ, ಎರಡು ಹೊಸ ಹಾಡುಗಳನ್ನು ಕೊಟ್ಟರೂ ಹೊಸತನವಿಲ್ಲ. ಎಲ್ಲೂ ಸಲ್ಲದ ಟ್ಯೂನುಗಳನ್ನು ಕನ್ನಡಕ್ಕೆ ಕೊಟ್ಟಂತಿದೆ. ಅದನ್ನೇ ಕೆ. ಮಂಜು ವರ ಪ್ರಸಾದವಾಗಿ ಸ್ವೀಕರಿಸಿದ್ದಾರೆ. ಆದರೆ ಸಾಹಿತ್ಯದಲ್ಲಿ ಕೆ. ಕಲ್ಯಾಣ್ ಮೋಸ ಮಾಡಿಲ್ಲ. ಸಂಗೀತವನ್ನು ಮೀರಿಸುವ ಪದಗಳನ್ನು ಪೋಣಿಸಿದ್ದಾರೆ.

ನೀವು ಉಪೇಂದ್ರ ಅಭಿಮಾನಿ ಅಲ್ಲದೇ ಇದ್ದರೂ ಈ ಚಿತ್ರ ನೋಡಬಹುದು. ಅದರಲ್ಲೂ ಭರತನಾಟ್ಯ ಮತ್ತು ಗಾಡ್‌ಫಾದರ್ ಪಾತ್ರವನ್ನು ನೋಡದೇ ಇದ್ದರೆ, ಮಿಸ್ ಮಾಡ್ಕೊಂಡಂತೆಯೇ ಸರಿ.

Share this Story:

ವೆಬ್ದುನಿಯಾವನ್ನು ಓದಿ

ಸುದ್ದಿಗಳು ಸ್ಯಾಂಡಲ್ ವುಡ್ ಕ್ರಿಕೆಟ್‌ ಸುದ್ದಿ ಜ್ಯೋತಿಷ್ಯ ಜನಪ್ರಿಯ..

Follow Webdunia kannada