ಗಲಾಟೆ ಚಿತ್ರವಿಮರ್ಶೆ: ಪ್ರೇಮದ, ಪ್ರೇಮಪತ್ರದ ಗೊಂದಲ
, ಮಂಗಳವಾರ, 15 ಜನವರಿ 2013 (12:14 IST)
ಚಿತ್ರ: ಗಲಾಟೆತಾರಾಗಣ: ಪ್ರಜ್ವಲ್ ದೇವರಾಜ್, ಕೃತಿ ಕರಬಂದ, ಹಾರ್ದಿಕಾ ಶೆಟ್ಟಿ, ಶಶಿಕುಮಾರ್ನಿರ್ದೇಶನ: ಎಂ.ಡಿ. ಶ್ರೀಧರ್ಸಂಗೀತ: ಜೆಸ್ಸಿ ಗಿಫ್ಟ್ನಿರ್ದೇಶಕ ಎಂ.ಡಿ. ಶ್ರೀಧರ್ ಕಾಲೇಜು ಹುಡುಗರಿಗೆ ಇಷ್ಟವಾಗುವಂತಹ ಚಿತ್ರ ನಿರ್ದೇಶಿಸುವುದರಲ್ಲಿ ನಿಸ್ಸೀಮರು. ಆ ರೇಖೆಯಿಂದ ಅವರು ಯಾವತ್ತೂ ಆಚೀಚೆ ಸರಿದಿಲ್ಲ. ರೊಮ್ಯಾನ್ಸ್, ಸೆಂಟಿಮೆಂಟ್, ಕಾಮಿಡಿ, ಒಂಚೂರು ಆಕ್ಷನ್ ಅವರ ಸಿದ್ಧ ಸೂತ್ರ. ಈ ಬಾರಿಯೂ ಅವರು ಬದಲಾಗಿಲ್ಲ. ಆದರೆ ವಿಭಿನ್ನವಾಗಿ ಬಂದಿದ್ದಾರೆ.ಕಾಲೇಜು ವಿದ್ಯಾರ್ಥಿ ಅಭಿ (ಪ್ರಜ್ವಲ್ ದೇವರಾಜ್) ಮೇಲೆ ಅಂಕಿತಾಗೆ (ಕೃತಿ ಕರಬಂದ) ಪ್ರೀತಿ. ಆದರೆ ಹೇಳಿಕೊಂಡಿರುವುದಿಲ್ಲ. ಹೀಗಿರುವಾಗ ಅಂಕಿತಾ ತನ್ನ ಗೆಳತಿಯ ಫ್ಯಾಷನ್ ಪ್ರದರ್ಶನಕ್ಕೆ ಅಭಿ ಹೋಗುವಂತೆ ಮಾಡುತ್ತಾಳೆ. ಅಲ್ಲಿ ಶಾಲಿನಿಯನ್ನು (ಹಾರ್ದಿಕಾ ಶೆಟ್ಟಿ) ನೋಡುವ ಅಭಿ ಪ್ರೀತಿಯಲ್ಲಿ ಬೀಳುತ್ತಾನೆ.ಅಂಕಿತಾ ಇನ್ನೇನು ಪ್ರಪೋಸ್ ಮಾಡಬೇಕು ಎನ್ನುವಾಗ, ಶಾಲಿನಿಯ ಬಗ್ಗೆ ವಿಚಾರಿಸುತ್ತಾನೆ ಅಭಿ. ಆಕೆಗೊಂದು ಪ್ರೇಮಪತ್ರ ಬರೆಯುವಂತೆ ಹೇಳುತ್ತಾನೆ. ಅಂಕಿತಾ ಪ್ರೀತಿ ಮೂರಾಬಟ್ಟೆಯಾಗುತ್ತದೆ. ಆದರೆ ಆಕೆ ಬರೆದ ಅನಾಮಿಕ ಪತ್ರ ಹಲವರ ಬದುಕಿನಲ್ಲಿ ಆಟವಾಡುತ್ತದೆ. ಅದೇ ಗಲಾಟೆಯ ಮರ್ಮ.ಅಭಿಯ ಮಾತಿಗೆ ಪ್ರೇಯಸಿ ಶಾಲಿನಿ ಬೆಲೆ ಕೊಡುವುದಿಲ್ಲ. ಪ್ರೀತಿ ಮುರಿದು ಬೀಳುತ್ತದೆ. ನಂತರ ಏನಾಗುತ್ತದೆ ಅನ್ನೋದು ಚಿತ್ರದ ಉಳಿದ ಕಥೆ.ಇಂತಹ ತ್ರಿಕೋನ ಪ್ರೇಮ ಕಥೆ ಸಾಕಷ್ಟು ಸಿನಿಮಾಗಳಲ್ಲಿ ಬಂದಿದೆ. ಆದರೂ ಚಿತ್ರಕಥೆಯಲ್ಲಿ ಜೀವಂತಿಕೆ ಇರುವುದರಿಂದ ಪ್ರೇಕ್ಷಕರು ನಿದ್ದೆಗೆ ಜಾರುವುದಿಲ್ಲ. ದೃಶ್ಯಗಳು ಶ್ರೀಮಂತವೆನಿಸಿ ಇಂದಿನ ಯುವ ಜನಾಂಗಕ್ಕೆ ಸಿನಿಮಾ ಇಷ್ಟವಾಗುವಂತಿದೆ.ನಾಯಕ ಪ್ರಜ್ವಲ್ ಪ್ರಬುದ್ಧ ಮಾತ್ರವಲ್ಲ, ಪಾತ್ರದಲ್ಲಿ ಲೀಲಾಜಾಲ. ನಾಯಕಿ ಕೃತಿ ಕರಬಂದ ನಗುವಿನಲ್ಲೇ ಕೊಲ್ಲುತ್ತಾರೆ. ಆದರೆ ಗ್ಲಾಮರ್ ಗರ್ಲ್ ಆಗಿ ಹಾರ್ದಿಕಾ ಚಿತ್ರಕ್ಕೆ ಮಾತ್ರವಲ್ಲ, ಇಡೀ ಚಿತ್ರರಂಗಕ್ಕೇ ಅಚ್ಚರಿ. ಮುಂದಿನ ದಿನಗಳಲ್ಲಿ ಅವರು ಇನ್ನಷ್ಟು ಹಾಟ್ ಪಾತ್ರಗಳಲ್ಲಿ ಕಾಣಿಸಿಕೊಂಡರೂ ಅಚ್ಚರಿಯಿಲ್ಲ.ಇಷ್ಟೂ ಮಂದಿಗಿಂತ ಇನ್ನೂ ಹೆಚ್ಚು ಗಮನ ಸೆಳೆಯುವುದು ಪ್ರಿನ್ಸಿಪಾಲ್ ಸುಮನ್ ರಂಗನಾಥ್. ಅವರ ಪಾತ್ರ ಬರುವಾಗ ಪ್ರೇಕ್ಷಕರು ಕಣ್ಣೆವೆಯಿಕ್ಕದೆ ನೋಡುತ್ತಾರೆ. ತಾರಾ, ಶೋಭರಾಜ್, ಶಶಿಕುಮಾರ್, ತಿಲಕ್ ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ.ಜೆಸ್ಸಿ ಗಿಫ್ಟ್ ಸಂಗೀತದ ಎರಡು ಹಾಡುಗಳು ಮತ್ತೆ ಮತ್ತೆ ಕೇಳುವಂತಿವೆ. ಹಾಡುಗಳನ್ನು ಸೇರಿದಂತೆ ಇಡೀ ಚಿತ್ರವನ್ನು ನೋಡುವಂತೆ ಮಾಡಿರುವುದು ಕೃಷ್ಣಕುಮಾರ್ ಛಾಯಾಗ್ರಹಣ.ಪ್ರೇಮಪತ್ರದ ಗಲಾಟೆ ನೋಡಲು ಒಂದು ಬಾರಿ ಚಿತ್ರಮಂದಿರದತ್ತ ಹೆಜ್ಜೆ ಹಾಕಬಹುದು.