ಚಿತ್ರ: ಕಿಲಾಡಿ ಕಿಟ್ಟಿ
ತಾರಾಗಣ: ಶ್ರೀನಗರ ಕಿಟ್ಟಿ, ಹರಿಪ್ರಿಯಾ, ನಿವೇದಿತಾ
ನಿರ್ದೇಶನ: ಅನಂತ್ ರಾಜು
ಸಂಗೀತ: ಜೆಸ್ಸಿ ಗಿಫ್ಟ್
ಹೇಳಿ ಕೇಳಿ ರಿಮೇಕ್ ಚಿತ್ರ. ಹಾಗಾಗಿ ಹೆಚ್ಚಿನ ನಿರೀಕ್ಷೆಗಳನ್ನು ಇಟ್ಟುಕೊಳ್ಳುವುದೇ ತಪ್ಪಾಗುತ್ತದೆ. ಮೂಲ ಕಥೆಗೆ ನಿಷ್ಠರಾಗಿದ್ದಾರಾ, ಚಿತ್ರ ಪ್ರೇಕ್ಷಕರನ್ನು ಮನರಂಜಿಸುವಂತಿದೆಯೇ ಎಂದರೆ, ಹೌದು. ಆ ನಿಟ್ಟಿನಲ್ಲಿ ಈ ವಾರ ಬಿಡುಗಡೆಯಾಗಿರುವ 'ಕಿಲಾಟಿ ಕಿಟ್ಟಿ' ಮೋಸ ಮಾಡುವುದಿಲ್ಲ.ಕೃಷ್ಣ ಮನೋಹರ್ (ಶ್ರೀನಗರ ಕಿಟ್ಟಿ) ತನ್ನ ಮತ್ತು ಅದೇ ಕಾಲನಿಯ ಇತರರನ್ನು ಸಂಕಷ್ಟದಿಂದ ಪಾರು ಮಾಡುವುದಕ್ಕಾಗಿ ಐದು ಕೋಟಿ ಹಣ ಸಂಗ್ರಹಿಸುವ ಅನಿವಾರ್ಯತೆಗೆ ಬೀಳುತ್ತಾನೆ. ಕೃಷ್ಣನಿಗೆ ಮಂದಾಕಿನಿ (ನಿವೇದಿತಾ), ದುಬೈ ಬಾಬು (ಶರಣ್) ಮತ್ತು ದಿಲೀಪ್ ಸಾಥ್ ನೀಡುತ್ತಾರೆ. ಮಾತಿನಂತೆ ಐದು ಕೋಟಿ ಆಗದೇ ಇದ್ದರೆ, ಬೀದಿಗೆ ಬೀಳಬೇಕಾಗುತ್ತದೆ.ಹೀಗಿದ್ದವರು ಏನೆಲ್ಲ ಸರ್ಕಸ್ ಮಾಡಿದರೂ ಹಣ ಹೊಂದಿಸಲು ಸಾಧ್ಯವಾಗುವುದಿಲ್ಲ. ಆಗ ಬ್ಯಾಂಕ್ ಲೂಟಿ ಯೋಚನೆ ಬರುತ್ತದೆ. ಅದರಲ್ಲಿ ಯಶಸ್ವಿಯೂ ಆಗುತ್ತಾರೆ. ಆದರೆ ಹಣ ಬೆಂಗಳೂರು ತಲುಪುವುದಿಲ್ಲ. ಹಣ ಎಲ್ಲಿ ಹೋಯ್ತು ಅನ್ನೋದೇ ದೊಡ್ಡ ಸಂಗತಿಯಾಗುತ್ತದೆ. ಈಗ ಪೊಲೀಸರ ಕೋಟೆಯೊಳಗೆ ಕೃಷ್ಣ ಪೊಲೀಸನಾಗಿ ಸೇರಿಕೊಳ್ಳುತ್ತಾನೆ. ಕಳೆದು ಹೋದ ಐದು ಕೋಟಿಯನ್ನು ಪತ್ತೆ ಹಚ್ಚಲು ಇಂತಹ ಖತರ್ನಾಕ್ ಐಡಿಯಾ ಮಾಡುತ್ತಾನೆ.ಹೀಗೆ ನೋಡಿ ನೋಡಿ ಸಾಕಾಗಿರುವ ಇಂತಹ ಸರಳ ಕಥೆಯೇ ಇಲ್ಲೂ ಇದೆ. ನಿರ್ದೇಶಕ ಅನಂತರಾಜು ಈ ಚಿತ್ರದ ಕಥೆ ನಾಲ್ಕು ವರ್ಷಗಳ ಹಿಂದಿನದ್ದು ಎಂಬುದನ್ನು ಯೋಚಿಸಿಯೇ ಇಲ್ಲವೆನ್ನುವುದು ಖಚಿತ. ಆದರೂ ಮನರಂಜನೆಗೆ ಮೋಸವಿಲ್ಲ. ಆರಂಭದಿಂದ ಅಂತ್ಯದವರೆಗೆ ತಲೆಯಿಲ್ಲದೆ ಸಿಕ್ಕಾಪಟ್ಟೆ ನಕ್ಕು ಬಿಡಬಹುದು.ನಾಯಕ ಶ್ರೀನಗರ ಕಿಟ್ಟಿ ಬಗ್ಗೆ ಹೆಚ್ಚೇನೂ ಹೊಗಳುವಂತಿಲ್ಲ. ಆದರೆ ಹರಿಪ್ರಿಯಾ ಇಡೀ ತೆರೆಯನ್ನು ಆವರಿಸಿಕೊಂಡು, ನಿದ್ದೆಗೆಡಿಸುತ್ತಾರೆ. ಮತ್ತೆ ಮತ್ತೆ ನೋಡಬೇಕೆನಿಸುತ್ತಾರೆ ಅವರು. ಅದೇ ಮಾತನ್ನು ನಿವೇದಿತಾಗೆ ಹೇಳುವಂತಿಲ್ಲ. ಅಂತಹ ಅವಕಾಶವೇ ಅವರಿಗಿಲ್ಲ. ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ ಮಾತೇ ಅವರಿಗೆ ಸರಿ.ಹಳೆ ಮದ್ಯವನ್ನು ಹೊಸ ಬಾಟಲಿಯಲ್ಲಿ ಕೊಟ್ಟಿರುವ ಆಕ್ಷೇಪಗಳ ನಡುವೆಯೇ ಜೆಸ್ಸಿ ಗಿಫ್ಟ್ ಆವಾಂತರಗಳನ್ನು ಮಾಡಿದ್ದಾರೆ. ಅವರ ಸಂಗೀತದ ಅಬ್ಬರದಲ್ಲಿ ಸಾಹಿತ್ಯವೇ ನಾಪತ್ತೆ. ಅವರೇ ಪೂರ್ತಿ ಆಸ್ವಾದಿಸಿರುವುದರಿಂದ ಪ್ರೇಕ್ಷಕರಿಗೆ ಸೊನ್ನೆ.ಇಂತಹ ಕಥೆಗೆ 'ಬ್ಲೇಡ್ ಬಾಬ್ಜಿ'ಯನ್ನೇ ರಿಮೇಕ್ ಮಾಡಬೇಕಿತ್ತೇ? ಹೀಗೆ ಎಳೆಯುವ ಅಗತ್ಯವೇನಿತ್ತು? ಒಂದು ಸ್ವಲ್ಪ ಕತ್ತರಿ ಪ್ರಯೋಗ ಮಾಡುತ್ತಿದ್ದರೆ, ನಿರೂಪನೆಯಲ್ಲಿ ಚುರುಕುತನ ಇರುತ್ತಿದ್ದರೆ ಟೈಮ್ ಪಾಸ್ ಮಾಡಲು ಸಾಕಾಗುತ್ತಿತ್ತು ಎಂಬ ಭಾವನೆ ಬರದೇ ಇರದು.