ಕಾಲಾಯ ತಸ್ಮೈ ನಮಃ ಚಿತ್ರವಿಮರ್ಶೆ: ಕಾಲವೇ ಹೇಳಲಿದೆ!
ಚಿತ್ರ: ಕಾಲಾಯ ತಸ್ಮೈ ನಮಃತಾರಾಗಣ: ಯೋಗೇಶ್, ಮಧುಬಾಲಾ, ರಂಗಾಯಣ ರಘು, ಶಂಕರ್ ಅಶ್ವತ್ಥ್, ರವಿಕಾಳೆ, ರಾಜು ತಾಳಿಕೋಟೆ, ನಾಗರಾಜ ಮೂರ್ತಿನಿರ್ದೇಶನ: ಚಂದ್ರಶೇಖರ್ ಶ್ರೀವಾತ್ಸವ್ಸಂಗೀತ: ಎ.ಎಂ. ನೀಲ್ಅವರಿಗೆ ಮಾಧ್ಯಮ ಮಂದಿಯ ಮೇಲೆ, ಗಾಂಧಿನಗರದ ಮೇಲೆ ಸಿಟ್ಟು. ಮಾತಿಗೆ ಸಿಕ್ಕಾಗ ಸದಾ ಒಂದಿಲ್ಲೊಂದು ಕಿಡಿ, ಆಕ್ರೋಶ. ತನ್ನನ್ನು ಕಡೆಗಣಿಸಲಾಗುತ್ತಿದೆ ಎಂಬ ಅಸಮಾಧಾನವೋ ಏನೋ? ಅದನ್ನು ಈ ಬಾರಿ ನಿವಾರಿಸಿಯೇ ನಿವಾರಿಸುತ್ತೇನೆ ಎಂಬಂತೆ ಹೊರಟಿದ್ದರು. ಆದರೆ ಅವರು ಸಿಟ್ಟಿನ ಸದುಪಯೋಗ ಮಾಡಿಲ್ಲ.ನಿರ್ದೇಶಕರ ಹೆಸರು ಚಂದ್ರಶೇಖರ್ ಶ್ರೀವಾತ್ಸವ್. ಪ್ರೀತಿಸೋದು ಸುಲಭ. ಆದರೆ ಪ್ರೀತಿಸುತ್ತಲೇ ಇರುವುದು ಮತ್ತು ಅದನ್ನು ಬದುಕನ್ನಾಗಿ ಮಾಡುವುದು ಕಷ್ಟ ಎಂಬುದನ್ನು ಹೇಳಲು ತುಂಬಾ ಸಮಯ ತೆಗೆದುಕೊಂಡರೂ ಪ್ರೇಕ್ಷಕರು ಸಹಿಸುತ್ತಿದ್ದರು. ಆದರೆ ಅದಕ್ಕಿಂತ ಹೆಚ್ಚು ಕ್ರೌರ್ಯವನ್ನೇ ಬಡಿಸಿರುವುದನ್ನು ಹೇಗೆ ಸಹಿಸಲಿ? ಚಂದ್ರಶೇಖರ್ ಹೇಗೆ ಭಿನ್ನ ನಿರ್ದೇಶಕರು ಎಂದು ಹೇಳಲಿ?ಹದಿನೇಳನೇ ವರ್ಷದಲ್ಲೇ ಮಧು (ಮಧುಬಾಲಾ) ಪ್ರೀತಿಯಲ್ಲಿ ಬೀಳುತ್ತಾಳೆ. ಅದೂ ತನ್ನ ಹೆಸರೇನೆಂದೇ ಗೊತ್ತಿಲ್ಲದ ಟೆನ್ (ಯೋಗೇಶ್) ಜತೆ. ಆತನ ನಿಜವಾದ ಹೆಸರು ತುಕರಾಮ್. ಆತನ ಬಗ್ಗೆ ಆಕೆಗೆ ಏನೂ ಗೊತ್ತಿರುವುದಿಲ್ಲ. ಹೋದ ಮೇಲೆ ಗೊತ್ತಾಗುತ್ತದೆ, ಎಸಗಿದ ತಪ್ಪಿನ ಅರಿವಾಗುತ್ತದೆ. ಪ್ರೀತಿಯ ಬಗ್ಗೆ ವಿಷಾದ ಮೂಡುತ್ತದೆ.ಅತ್ತ ಟೆನ್, ಕೊಲೆಗಳ ನಡುವೆ ಪ್ರೀತಿಗೆ ದಿನಗಳಿಲ್ಲ ಎಂಬ ತನ್ನ ಬಾಸ್ ಮಾತನ್ನೇ ಮೀರಿದವನು. ಆದರೆ ಅದರಲ್ಲಿ ಗೆಲ್ಲುತ್ತಾನಾ? ಪ್ರೀತಿಯನ್ನು ಉಳಿಸಿಕೊಳ್ಳುತ್ತಾನಾ?ಕನ್ನಡದಲ್ಲಿ ತಿಂಗಳಿಗೆರಡರಂತೆ ಬರುವ ಮಾಮೂಲಿ ರೌಡಿಸಂ ಚಿತ್ರಗಳ ಕಥೆಯೇ ಇಲ್ಲಿದೆ. ಆದರೆ ಅಷ್ಟೂ ಚಿತ್ರಗಳಲ್ಲಿ ಹರಿಯುವುದಕ್ಕಿಂತ ಹೆಚ್ಚು ರಕ್ತ ಇಲ್ಲಿ ಹರಿದಿದೆ. ಆ ಮಟ್ಟಿಗಿನ ಕ್ರೌರ್ಯ ಮೆರೆದಿರುವ ನಿರ್ದೇಶಕರು, ಅದರ ನಡುವೆ ಪ್ರೀತಿಯನ್ನು ಹೇಳಲು ಚಡಪಡಿಸಿದ್ದಾರೆ. ಕೆಲವು ಕಡೆಯಂತೂ ಪ್ರೇಕ್ಷಕರು ಆಕಳಿಸುವಂತೆ ಮಾಡಿ ಬಿಡುತ್ತಾರೆ. ಈ ಹುಳುಕುಗಳನ್ನು ಮೊದಲೇ ಗಮನಿಸುತ್ತಿದ್ದರೆ ಚಂದ್ರಶೇಖರ್ ಮಾಗಿದ ನಿರ್ದೇಶಕರಾಗುತ್ತಿದ್ದರು. ಒಂದೊಳ್ಳೆ ಚಿತ್ರವೂ ಹೊರ ಬರುತ್ತಿತ್ತು.ಯೋಗೇಶ್ ನಟನೆಯ ಬಗ್ಗೆ ಎರಡನೇ ಮಾತೇ ಇಲ್ಲ. ಆದರೆ ಕೆಲವು ದೃಶ್ಯಗಳು ಅವರ ಅಭಿಮಾನಿಗಳಿಗೆ ಅಪಥ್ಯವೆನಿಸಬಹುದು. ಚಿತ್ರದಲ್ಲಿ ನಾಯಕಿ ಮಧುಬಾಲಾ ನಿಜವಾದ ಅಚ್ಚರಿ. ಕನ್ನಡಕ್ಕೆ ಇನ್ನೊಬ್ಬಳು ಒಳ್ಳೆಯ ನಟಿ ಸಿಕ್ಕಿದ್ದಾಳೆ. ಇದ್ದ ಅವಕಾಶದಲ್ಲಿ ಮನೋಜ್ಞ ಅಭಿನಯ ಅವರಿಂದ ಬಂದಿದೆ. ರಂಗಾಯಣ ರಘು ಅವರದ್ದು ಗಂಭೀರ ವೇಷ. ಶಂಕರ್ ಅಶ್ವತ್ಥ್, ರವಿಕಾಳೆ ಪಾತ್ರಪೋಷಣೆ ಚೆನ್ನಾಗಿದೆ.ಇನ್ನು ಚಿತ್ರವನ್ನು ಹಲವು ಕಡೆ ಸಹ್ಯವೆನಿಸುವಂತೆ ಮಾಡಿರುವುದು ಸಿನಿಟೆಕ್ ಸೂರಿಯವರ ಕ್ಯಾಮರಾ ಮತ್ತು ಎ.ಎಂ. ನೀಲ್ ಸಂಗೀತ. ಅವರಿಬ್ಬರು ಇಲ್ಲದಿರುತ್ತಿದ್ದರೆ ಇದು 'ಎ ಡೈರೆಕ್ಟರ್ಸ್ ಫಿಲ್ಮ್' ನಿಜಕ್ಕೂ ಆಗುತ್ತಿತ್ತು!