Select Your Language

Notifications

webdunia
webdunia
webdunia
webdunia

ಕನ್ನಡಕ್ಕೊಂದು ಥ್ರಿಲ್ಲರ್ ಐಪಿಸಿ ಸೆಕ್ಷನ್ 300

ಐಪಿಸಿ ಸೆಕ್ಷನ್ 300
MOKSHA
ಚಿತ್ರ: ಐಪಿಸಿ ಸೆಕ್ಷನ್ 300
ನಿರ್ದೇಶನ: ಶಶಿಕಾಂತ್
ತಾರಾಗಣ: ವಿಜಯ ರಾಘವೇಂದ್ರ , ಪ್ರಿಯಾಂಕ, ದೇವರಾಜ್, ಸುಮನ್ ರಂಗನಾಥ್.

ನಿರ್ದೇಶಕ ಶಶಿಕಾಂತ್ ಮೊದಲ ಪ್ರಯತ್ನದಲ್ಲೇ ತಮ್ಮ ಸಿನಿಮಾ ಹುಮ್ಮಸ್ಸು ಎಷ್ಟಿತ್ತು ಎಂಬುದನ್ನು ಚಿತ್ರರಸಿಕರಿಗೆ ತೋರಿಸಿಕೊಟ್ಟಿದ್ದಾರೆ. ಕನ್ನಡದಲ್ಲಿ ಸಸ್ಪೆನ್ಸ್- ಥ್ರಿಲ್ಲರ್ ಚಿತ್ರಗಳು ಕಾಣಿಸಿಕೊಳ್ಳದೆ ಹಲವು ದಿನಗಳೇ ಆಗಿ ಹೋಗಿದ್ದವು. ಅಂತಹ ಸಂದರ್ಭದಲ್ಲೇ ಈ ಐಪಿಸಿ ಸೆಕ್ಷನ್ನು ಬಂದಿದೆ.

ಇದೀಗ ಐಪಿಸಿ ಸೆಕ್ಷನ್ 300 ಚಿತ್ರ ಬಿಡುಗಡೆಯಾಗುವುದರ ಮೂಲಕ ಉತ್ತಮ ಕನ್ನಡ ಭಾಷೆಯಲ್ಲೇ ಸಸ್ಪೆನ್ಸ್- ಥ್ರಿಲ್ಲರ್ ಚಿತ್ರ ವೀಕ್ಷಿಸುವ ಭಾಗ್ಯ ಕನ್ನಡಿಗರದ್ದು. ಶಶಿಕಾಂತ್ ಈ ಚಿತ್ರಕ್ಕಾಗಿ ತುಂಬಾ ಮಣ್ಣು ಹೊತ್ತಿದ್ದಾರೆ ಅನ್ನೋದು ಚಿತ್ರಮಂದಿರದಲ್ಲಿ ಚಿತ್ರ ನೋಡಲು ಕೂತ ಪ್ರೇಕ್ಷಕನಿಗೆ ಪಕ್ಕನೆ ಅರ್ಥವಾಗುತ್ತದೆ ಕೂಡಾ.

ಅದೇನೇ ಇರಲಿ. ಚಿತ್ರ ಒಂದೇ ಒಂದು ಕೊಲೆಯ ಸುತ್ತ ಸುತ್ತುತ್ತದೆ. ಪತಿ- ಪತ್ನಿಯರ ನಡುವೆ ಮಹಾಭಾರತ ಪ್ರಾರಂಭವಾಗಿ, ಪತ್ನಿ ಪರಪುರುಷನ ಸ್ನೇಹ ಮಾಡಿ ಆತನ ಮೋಸದ ಬಲೆಯಲ್ಲಿ ಸಿಕ್ಕಿಕೊಳ್ಳುತ್ತಾಳೆ. ಪತ್ನಿಯ ಕರ್ಮಕಾಂಡ ಪತಿಗೆ ತಿಳಿದು ಆತ ಅಂತಿಮ ನಿರ್ಧಾರವೂಂದಕ್ಕೆ ಮೂಹೂರ್ತವಿಡುತ್ತಾನೆ. ಹೀಗೆ ಸಾಗುವ ಕಥೆ ಅಲ್ಲಿಂದ ಮತ್ತೊಂದು ದಾರಿಯನ್ನು ಹಿಡಿಯುತ್ತದೆ. ಚಿತ್ರ ವೀಕ್ಷಿಸುವಾಗ ಪ್ರೇಕ್ಷಕರ ಸುತ್ತಾ ಬರೀ ನಿಗೂಢತೆಯೇ ಆವರಿಸಿಕೊಳ್ಳುತ್ತದೆ.

ಚಿತ್ರದಲ್ಲಿನ ಥ್ರಿಲ್, ಕ್ಲೈಮ್ಯಾಕ್ಸ್‌ವರೆಗೂ ನೋಡುಗರ ಬೆನ್ನುಹತ್ತಿ ಬರುತ್ತದೆ. ನಾಯಕ ಚಿತ್ರದಲ್ಲಿದ್ದರೂ ಇಲ್ಲದಂತೆ ಭಾಸವಾಗುತ್ತದೆ. ಹಾಗೆ ನೋಡಿದರೆ, ಕಥೆಯ ನಿಜವಾದ ಸೂತ್ರಧಾರಿ ದೇವರಾಜ್. ಪ್ರಮುಖ ಪಾತ್ರದಲ್ಲಿ ನಟಿಸಿದ ದೇವರಾಜ್ ಅಭಿನಯ ನಿಜಕ್ಕೂ ಡೈನಾಮಿಕ್. ಚಿತ್ರದಲ್ಲಿ ವಿಜಯ ರಾಘವೇಂದ್ರ ಹಿಂದಿನ ಚಿತ್ರಗಳಿಗಿಂತ ಸ್ವಲ್ಪ ತೆಳ್ಳಗಾಗಿ ಸುಂದರವಾಗಿಯೂ ಕಾಣುತ್ತಾರೆ. ಜೊತೆಗೆ ಅಷ್ಟೇ ಸುಂದರವಾಗಿ ತಮ್ಮ ನ್ಯಾಯವಾದಿಯ ಪಾತ್ರವನ್ನೂ ಅಭಿನಯಿಸಿ ತೋರಿಸಿದ್ದಾರೆ ಅವರು.

ಒಲ್ಡ್ ಇಸ್ ಗೋಲ್ಡ್ ಎಂಬುದನ್ನು ಸುಮನ್ ರಂಗನಾಥ್ ರಂಗು ರಂಗಾಗಿ ಕಾಣಿಸಿಕೊಳ್ಳುವ ಮೂಲಕ ಸಾಬೀತುಪಡಿಸಿದ್ದಾರೆ. ನಾಯಕಿ ಪ್ರಿಯಾಂಕ ಮಾತ್ರ ನಟನೆಯ ವಿಚಾರದಲ್ಲಿ ಇನ್ನೂ ಎಲ್.ಕೆ.ಜಿ. ವೀರಸಾಮರ್ಥ್ ಸಂಗೀತ ಒಕೆ ಅನ್ನಬಹುದು. ಛಾಯಾಗ್ರಹಣದ ಹರಿತ ಕೆಲವೆಡೆ ಸಾಲದು ಅಂದರೂ ತಪ್ಪಿಲ್ಲ. ಉತ್ತಮ ಅವಕಾಶ ದೊರೆತರೆ ಶಶಿಕಾಂತ್ ಉತ್ತಮ ಸಿನಿಮಾ ನೀಡಬಲ್ಲರೆಂಬ ಭರವಸೆಯನ್ನಂತೂ ಕನ್ನಡ ಚಿತ್ರರಸಿಕರಿಗೆ ಈ ಚಿತ್ರದ ಮೂಲಕ ನೀಡುತ್ತಾರೆ ಶಶಿಕಾಂತ್.

Share this Story:

Follow Webdunia kannada