Select Your Language

Notifications

webdunia
webdunia
webdunia
webdunia

ಕಡ್ಡಿಪುಡಿ ಸಿನಿಮಾ ವಿಮರ್ಶೆ: ಕ್ಲಾಸ್-ಮಾಸ್ ಸೂಪರ್ ಬೆರಕೆ

ಕಡ್ಡಿಪುಡಿ ಸಿನಿಮಾ ವಿಮರ್ಶೆ: ಕ್ಲಾಸ್-ಮಾಸ್ ಸೂಪರ್ ಬೆರಕೆ
, ಶನಿವಾರ, 8 ಜೂನ್ 2013 (14:54 IST)
PR
ದುನಿಯಾ ಸೂರಿಗೆ ರೌಡಿಸಂ ಕಥೆ ಹೊಸತಲ್ಲ ಎನ್ನುವುದಕ್ಕಿಂತ ಅವರು ರೌಡಿಸಂ ಕಥೆ ಬಿಟ್ಟು ಆಚೆ ಬಂದದ್ದೇ ಕಡಿಮೆ ಎನ್ನುವುದು ಸೂಕ್ತ. ಆದರೆ ಈ ಬಾರಿ ಹೊರಗೆ ಬರುವಂತೆ ಹಲವರಿಗೆ ಸಂದೇಶ, ಒಳಗೆ ಹೋಗದಂತೆ ಸಲಹೆ ನೀಡಿದ್ದಾರೆ. ಭೂಗತ ಜಗತ್ತಿನ ಕಥೆಯೊಳಗೆ ಸಂಸಾರ ಕಟ್ಟಿದ್ದಾರೆ.

ಭೂಗತ ಜಗತ್ತಿಗೆ ಬರುವ ಪ್ರತಿಯೊಬ್ಬರದ್ದೂ ಆಕಸ್ಮಿಕವೇ ಆಗಿರುತ್ತದೆ. ಇಲ್ಲೂ ನಾಯಕ ಅದೇ ರೀತಿ ಎಂಟ್ರಿ ಪಡೆಯುತ್ತಾನೆ. ಆದರೆ ಹೊರ ಜಗತ್ತಿನಲ್ಲಿ ಬದುಕಿ ತೋರಿಸಲು ಹೊರಡುತ್ತಾನೆ. ಲಾಂಗುಗಳಿಲ್ಲದೆ ಬದುಕುವುದು ಯಾಕೆ ಸಾಧ್ಯವಿಲ್ಲ ಎಂದು ಪ್ರಯತ್ನಿಸುತ್ತಾನೆ. ಆದರೆ ಲಾಂಗುಗಳು ಬಿಡುವುದಿಲ್ಲ. ಈ ನಡುವೆ ಬಡ ಹುಡುಗಿಯ ಪ್ರವೇಶ. ಬದುಕು ಬದಲಾಗುತ್ತದೆ. ಕೊನೆಗೆ ಸಂದೇಶವೊಂದು ಬಿತ್ತರವಾಗುತ್ತದೆ. ಕಥೆ ಮುಗಿಯುವುದಿಲ್ಲ, ಅಲ್ಪವಿರಾಮ ಮಾತ್ರ.

ಸದಾ ಮಾಸ್ ಪ್ರೇಕ್ಷಕರನ್ನು ತಟ್ಟುತ್ತಿದ್ದ ಸೂರಿ ಈ ಬಾರಿ ಕ್ಲಾಸ್‌ಗೂ ಹೋಗಿದ್ದಾರೆ. ಪ್ರಬುದ್ಧ ಭಾವನೆಗಳು ಅವರ ನಿರೂಪನೆಯಲ್ಲಿ ಸ್ಫುರಿಸಿವೆ. ಕಲಾತ್ಮಕ ಮತ್ತು ಕಮರ್ಷಿಯಲ್ ಎರಡೂ ಚಿತ್ರಗಳನ್ನು ಸೇರಿಸಿ ಮಾಡಿದಂತಿದೆ. ಹಾಗಾಗಿ ಯಾರಿಗೇ ಆದರೂ ನಿರಾಸೆ ಅಥವಾ ಹೇವರಿಕೆ ಹುಟ್ಟುವ ಸಾಧ್ಯತೆಗಳು ಕಡಿಮೆ. ಶಿವರಾಜ್ ಕುಮಾರ್ ಅಭಿಮಾನಿಗಳಿಗಂತೂ ನಿರಾಸೆಯ ಮಾತೇ ಇಲ್ಲ. ಹಾಡುಗಳು, ಹೊಡೆದಾಟಗಳು ಬೊಂಬಾಟ್ ಆಗಿವೆ. ಕಿಕ್ ಕೊಡುವ ಸಂಭಾಷಣೆಗಳಿವೆ.

webdunia
PR
ಕಡ್ಡಿಪುಡಿ' ಸುದೀರ್ಘ ಸಿನಿಮಾ. ಹಾಗಾಗಿ ಕೆಲವೆಡೆ ಸೂರಿ ಎಳೆದಾಡಿದ್ದಾರೆ ಎಂಬ ಭಾವನೆ ಬರುತ್ತದೆ. ಆಗೆಲ್ಲ ಇನ್ನೊಂದು ದೃಶ್ಯ ಚಕ್ಕನೆ ಬಂದು ತಿರುವು ನೀಡುತ್ತದೆ. ಹಾಗಾಗಿ ಎಲ್ಲೂ ಮಿಸ್ ಮಾಡಬೇಕಾದ ದೃಶ್ಯಗಳು ಇವೆ ಎಂದೆನಿಸುವುದಿಲ್ಲ. ತನ್ನದೇ ಧಾಟಿಯಲ್ಲಿ, ಗೆಲುವಿನ ಹಾದಿಯಲ್ಲಿ ಹೋಗಿರುವ ಸೂರಿ ಯಾರನ್ನೂ ಮೆಚ್ಚಿಸಲು ಹೊರಟಿಲ್ಲ ಎನ್ನುವುದೂ ಸ್ಪಷ್ಟವಾಗುತ್ತದೆ. ಅದೇ ರೌಡಿಸಂ ಕಥೆಯಾದರೂ, ಬೇರೆ ದೃಷ್ಟಿಯಲ್ಲಿ ನೋಡಿದ್ದಾರೆ. ಬೇರೆಯದೇ ಟಚ್ ನೀಡಿದ್ದಾರೆ. ಹೊಡೆಬಡಿ ಬದುಕಿನ ಇನ್ನೊಂದು ಮುಖ ತೋರಿಸಿದ್ದಾರೆ.

ಶಿವರಾಜ್ ಕುಮಾರ್ ಅಭಿನಯದ ಬಗ್ಗೆ ಇನ್ನೊಂದು ಮಾತೇ ಇಲ್ಲ. ರಾಧಿಕಾ ಪಂಡಿತ್ ಸಹಜಾಭಿನಯವನ್ನು ನೋಡಿಯೇ ಹೇಳಬೇಕು. ರಂಗಾಯಣ ರಘು ಅವರದ್ದು ವಿಶಿಷ್ಟ ಪಾತ್ರ. ಐಂದ್ರಿತಾ ರೇ ಬೆತ್ತಲೆ ಬೆನ್ನಿಗೆ ಎಲ್ಲೂ ಸಮರ್ಥನೆ ಸಿಗುವುದಿಲ್ಲ. ಹರಿಕೃಷ್ಣ ಸಂಗೀತದಲ್ಲಿ ಕಾಣೆಯಾಗಿರುವ ಮ್ಯಾಜಿಕನ್ನು ಛಾಯಾಗ್ರಾಹಕ ಕೃಷ್ಣ ಅಲ್ಲಲ್ಲಿ ಸರಿ ಮಾಡಿಕೊಂಡಿದ್ದಾರೆ.

ಕನ್ನಡ ಚಿತ್ರರಂಗದ ರೌಡಿಸಂ ಚಿತ್ರಗಳ ಮೂಲ ಉಪೇಂದ್ರ ನಿರ್ದೇಶನದ ಓಂ. ಆ ಚಿತ್ರದ ಅಂತ್ಯದಿಂದ ಸೂರಿ ನಿರ್ದೇಶನದ ಕಡ್ಡಿಪುಡಿ ಆರಂಭ. ಒಂದಷ್ಟು ಬೇರೆ ಚಿತ್ರಗಳನ್ನೂ ನೆನಪಿಸುತ್ತಾ ಹೋಗುವ 'ಕಡ್ಡಿಪುಡಿ' ಒಂದಲ್ಲ, ಎರಡು ಬಾರಿ ನೋಡಬಹುದಾದ ಚಿತ್ರ.

Share this Story:

Follow Webdunia kannada