Select Your Language

Notifications

webdunia
webdunia
webdunia
webdunia

ಎಲೆಕ್ಷನ್ ಚಿತ್ರವಿಮರ್ಶೆ: ಮಾಲಾಶ್ರೀ ಶೈಲಿಯ ಇನ್ನೊಂದು ಸಿನಿಮಾ!

ಎಲೆಕ್ಷನ್ ಚಿತ್ರವಿಮರ್ಶೆ: ಮಾಲಾಶ್ರೀ ಶೈಲಿಯ ಇನ್ನೊಂದು ಸಿನಿಮಾ!
, ಶನಿವಾರ, 25 ಮೇ 2013 (13:42 IST)
PR
PR
ಚಿತ್ರ: ಎಲೆಕ್ಷನ್
ತಾರಾಗಣ: ಮಾಲಾಶ್ರೀ, ಶ್ರೀನಿವಾಸ ಮೂರ್ತಿ, ಸಾಧು ಕೋಕಿಲಾ, ಪ್ರದೀಪ್ ರಾವ್, ದೇವಗಿಲ್
ನಿರ್ದೇಶನ: ಓಂ ಪ್ರಕಾಶ್ ರಾವ್
ಸಂಗೀತ: ಹಂಸಲೇಖ

ಇಲ್ಲಿ ಮಾಲಾಶ್ರೀ ಪೊಲೀಸ್ ಆಯುಕ್ತೆಯಲ್ಲ, ಚುನಾವಣಾ ಆಯುಕ್ತೆ. ಆದರೂ ಹೊಡೆದಾಡುತ್ತಾರೆ, ಬಡಿದಾಡುತ್ತಾರೆ, ರೌಡಿಗಳನ್ನು ತರಿಯುತ್ತಾರೆ. ರಾಜಕಾರಣಿಗಳನ್ನು ಅಟ್ಟಾಡಿಸಿ ಹೊಡೆಯುತ್ತಾರೆ. ಹೀಗೆ ಚುನಾವಣಾ ಆಯುಕ್ತರೂ ಬೀದಿಗಿಳಿದು ಹೀಗೆ ಹೋರಾಟ ಮಾಡಬಹುದು ಎಂಬ ಹೊಸ ಸಂಶೋಧನೆಯನ್ನು ಮಾಡಿರುವುದು ನಿರ್ದೇಶಕ ಓಂ ಪ್ರಕಾಶ್ ರಾವ್.

'ಎಲೆಕ್ಷನ್' ಚಿತ್ರದಲ್ಲಿ ಮಾಲಾಶ್ರೀ ಅವರದ್ದು ಚುನಾವಣೆ ಆಯುಕ್ತರ ಪಾತ್ರ. ನಾನು ಇಂದಿರಾ, ಗಾಂಧಿ ಅಲ್ಲ ಎಂದು ಇಡೀ ಸಿನಿಮಾದಲ್ಲಿ ಅಬ್ಬರಿಸುತ್ತಾರೆ. ಚುನಾವಣೆ ಸಂದರ್ಭ ಅಡ್ಡದಾರಿಯಲ್ಲಿ ಸಾಗುವ ರಾಜಕೀಯ ಪಕ್ಷಗಳನ್ನು ರಿಪೇರಿ ಮಾಡುತ್ತಾರೆ. ಸೇಡು ತೀರಿಸಿಕೊಳ್ಳಲು ಬರುವ ಪುಡಾರಿಗಳನ್ನು ತದುಕುತ್ತಾರೆ.

ರಾಜಕಾರಣಿಗಳಿಗೆ ನಾಯಕ ಅಥವಾ ನಾಯಕಿ ಸಿಂಹಸ್ವಪ್ನವಾಗುವ ಕಥೆ ಓಂ ಪ್ರಕಾಶ್ ರಾವ್‌ಗೆ ಹೊಸತೇನಲ್ಲ. ಇಂತಹ ಸಾಕಷ್ಟು ಸಿನಿಮಾಗಳನ್ನು ಅವರು ನಿರ್ದೇಶಿಸಿದ್ದಾರೆ. ಹಾಗಾಗಿ ಕಥೆ ಹಳೆಯದು ಎಂದು ಯಾರು ಬೇಕಾದರೂ ಹೇಳಬಹುದು. ಈ ಬಾರಿ ಹೊಸತೆಂದರೆ, ಪೊಲೀಸ್ ಅಧಿಕಾರಿಯ ಬದಲು ಆಯುಕ್ತೆಯ ಪಾತ್ರವನ್ನು ಮಾಲಾಶ್ರೀಗೆ ನೀಡಿರುವುದು ಮತ್ತು ಮಾಲಾಶ್ರೀ ಮಾಡಿರುವುದು. ಚಿತ್ರದಲ್ಲಿ ಕುತೂಹಲ ಉಳಿಸಿಕೊಂಡಿರುವುದರಿಂದ ಗೊತ್ತಿರುವ ಕಥೆಯಾದರೂ ಅಷ್ಟಾಗಿ ಬೋರ್ ಆಗುವುದಿಲ್ಲ.

ಆಕ್ಷನ್ ಕ್ವೀನ್ ಎಂದೇ ಹೆಸರು ಮಾಡಿರುವ ಮಾಲಾಶ್ರೀಗೆ ಪಾತ್ರ ಯಾವುದಾದರೇನು? ಹೊಡೆದಾಟ ಇರಬೇಕು, ಅಷ್ಟೇ. ಅವರು ಶಾಂತಿಯುತ ಚುನಾವಣೆಗಾಗಿ ಅಶಾಂತಿ ಸೃಷ್ಟಿಸುತ್ತಾರೆ. ಇಡೀ ಚಿತ್ರಮಂದಿರವೇ ನಡುಗುತ್ತಿದೆಯೇನೋ ಎಂಬ ರೀತಿಯ ವಾತಾವರಣ ಸೃಷ್ಟಿಸುತ್ತಾರೆ. ಯಾವುದೇ ತೆಲುಗು ಚಿತ್ರದಲ್ಲಿ ಎನ್‌ಟಿಆರ್ ಫ್ಯಾಮಿಲಿ ಅಬ್ಬರ ನೋಡಿದಂತಾಗುತ್ತದೆ.

ಅದೇನೇ ಇರಲಿ, ಮಾಲಾಶ್ರೀ ಅಭಿಮಾನಿಗಳಿಗೆ ಖಂಡಿತಾ ನಿರಾಸೆಯಿಲ್ಲ. ಯಾವುದೇ ನಾಯಕನಿಗೆ ಕಡಿಮೆಯಿಲ್ಲದಂತೆ ಹೊಡೆದಾಟದ ದೃಶ್ಯಗಳಲ್ಲಿ ಮಿಂಚಿದ್ದಾರೆ.

ನಿರ್ದೇಶಕರು ಮತ್ತು ನಾಯಕಿಯನ್ನು ಹೊರತುಪಡಿಸಿ ಚಿತ್ರದಲ್ಲಿ ಎದ್ದು ಕಾಣುವ ಶ್ರಮ ಸಾಹಸ ನಿರ್ದೇಶಕ ಫಳನಿ, ಸಂಭಾಷಣೆ ಬರೆದಿರುವ ರವಿ ಶ್ರೀವತ್ಸ ಹಾಗೂ ಛಾಯಾಗ್ರಾಹಕ ರಾಜೇಶ್ ಕಟ್ಟಾ. ಈ ಮೂವರೂ ತಮ್ಮ ತಮ್ಮ ವಿಭಾಗಗಳಲ್ಲಿ ಸೂಪರ್. ಅವರವರ ವಿಭಾಗಳಲ್ಲಿ ಪ್ರೇಕ್ಷಕರನ್ನು ಮುದಗೊಳಿಸುತ್ತಾರೆ. ಇವರಿಂದಾಗಿ ಸಖತ್ ಆಕ್ಷನ್, ಅದ್ಭುತ ಚೇಸಿಂಗ್, ಆವೇಶ ಭರಿತ ಸಂಭಾಷಣೆ ಪ್ಲಸ್ ಪಾಯಿಂಗ್ ಆಗುತ್ತದೆ.

ಸಾಧು ಕೋಕಿಲಾ, ಬುಲೆಟ್ ಪ್ರಕಾಶ್ ಹಾಸ್ಯ ಇಷ್ಟವಾಗುತ್ತದೆ. ಆದರೆ ಹಂಸಲೇಖ ಸಂಗೀತ ನೀಡಿದ್ದಾರೆ ಎನ್ನುವುದು ಟೈಟಲ್ ಕಾರ್ಡ್‌‌ನಲ್ಲಷ್ಟೇ ಗೊತ್ತಾಗುತ್ತದೆ, ಕೇಳುವಾಗ ಆ ಭಾವ ಹುಟ್ಟಿಕೊಳ್ಳುವುದಿಲ್ಲ.

ರಾಜಕಾರಣಿಗಳ ಅಡ್ಡೆಯಲ್ಲಿ ಏನೇನು ನಡೆಯುತ್ತದೆ ಎನ್ನುವುದು ಈಗಲೂ ಗುಟ್ಟಲ್ಲ. ಆದರೂ ಅದನ್ನು ಚೆನ್ನಾಗಿ ತೋರಿಸುವುದು ಎಲ್ಲರಿಂದಲೂ ಸಾಧ್ಯವಾಗುವುದಿಲ್ಲ. ಆ ಕೆಲಸವನ್ನು ಓಂ ಪ್ರಕಾಶ್ ರಾವ್ ಸಮರ್ಥವಾಗಿ ನಿಭಾಯಿಸಿದ್ದಾರೆ. ರಾಜ್ಯದ ಹಲವು ರಾಜಕಾರಣಿಗಳನ್ನು ಹೋಲುವ ಪಾತ್ರಗಳು ಇಲ್ಲಿವೆ. ಚುನಾವಣೆ ಸಂದರ್ಭ ಈ ಚಿತ್ರವನ್ನು ಬಿಡುಗಡೆ ಮಾಡಲು ಸೆನ್ಸಾರ್-ಆಯೋಗ ಯಾಕೆ ಬಿಡಲಿಲ್ಲ ಎನ್ನುವುದು ಚಿತ್ರ ನೋಡಿದ ಮೇಲೆ ಸ್ಪಷ್ಟವಾಗುತ್ತದೆ.

Share this Story:

Follow Webdunia kannada