ಎಕೆ 56 ಚಿತ್ರವಿಮರ್ಶೆ; ಆಕ್ಷನ್ ಪ್ರಿಯರಿಗೆ ಬಾಡೂಟ
ಚಿತ್ರ: ಎಕೆ 56ತಾರಾಗಣ: ಸಿದ್ಧಾಂತ್, ಶಿರಿನ್, ಸುಮಲತಾ ಅಂಬರೀಷ್, ಅತುಲ್ ಕುಲಕರ್ಣಿನಿರ್ದೇಶನ: ಓಂ ಪ್ರಕಾಶ್ ರಾವ್ಸಂಗೀತ: ಅಭಿಮಾನ್ ರಾಯ್ಎಕೆ 47 ತೆರೆಗಿಳಿಸಿದ 10 ವರ್ಷಗಳ ನಂತರ ಓಂ ಪ್ರಕಾಶ್ ರಾವ್ 'ಎಕೆ 56'ನೊಂದಿಗೆ ಬಂದಿದ್ದಾರೆ. ಹೆಸರಿನಲ್ಲಿ ಬದಲಾವಣೆಯಿರುವಂತೆ ಚಿತ್ರದಲ್ಲೂ ಬದಲಾವಣೆಯಿದೆ. ಅದೇ ಹಳಸಲು ಚಿತ್ರಾನ್ನದ ಬದಲು ಹೊಸ ವಿಷಯದೊಂದಿಗೆ ಬಂದಿದ್ದಾರೆ. ಆ ಮೂಲಕ ತನ್ನ 25ನೇ ಚಿತ್ರವನ್ನು ವಿಶಿಷ್ಟವನ್ನಾಗಿಸಿದ್ದಾರೆ ರಾವ್.
ಈ ಬಾರಿ ಅವರು ಆರಿಸಿಕೊಂಡಿರುವುದು ಭಯೋತ್ಪಾದನೆಯ ಎಸಳು. ಭಾರತದ ಪೊಲೀಸ್ ಮತ್ತು ನ್ಯಾಯಾಂಗ ವ್ಯವಸ್ಥೆಯಲ್ಲಿ ಅಮಾಯಕರು ಭಯೋತ್ಪಾದನೆ ಹೆಸರಿನಲ್ಲಿ ಹೇಗೆ ಬಲಿಪಶುಗಳಾಗುತ್ತಿದ್ದಾರೆ ಎಂಬ ಸಾಲಿನಲ್ಲಿ ಚಿತ್ರ ಸಾಗುತ್ತದೆ.ಅಜಯ್ (ಸಿದ್ದಾಂತ್) ಕಾರು ಕಂಪನಿಯೊಂದರ ಅಧಿಕಾರಿ. ತನಗೆ ಗೊತ್ತೇ ಇಲ್ಲದ ಸಂಗತಿಯೊಂದರಲ್ಲಿ ಹೇಗೋ ಸಿಕ್ಕಿ ಬಿದ್ದು ಪೊಲೀಸರ ಕಣ್ಣಲ್ಲಿ ಭಯೋತ್ಪಾದಕ ಪಟ್ಟಕ್ಕೇರುತ್ತಾನೆ. ಅಜಯ್ ಅಮಾಯಕತೆಗೆ ಖಾಕಿಗಳು ಬೆಲೆಯನ್ನೇ ಕೊಡುವುದಿಲ್ಲ. ಮೌನ ರೋದನಕ್ಕೆ ಪ್ರತಿಕ್ರಿಯೆಯೇ ಇರುವುದಿಲ್ಲ. ವಿಚಾರಣೆಯೇ ಇಲ್ಲದೆ ಉಗ್ರರ ಪಟ್ಟಿಗೆ ಸೇರಿ ಹೋಗುತ್ತಾನೆ ನಾಯಕ.