ಉಪೇಂದ್ರ ಪಟಪಟನೇ ಮಂಗಳೂರು ಕನ್ನಡ ಮಾತನಾಡುತ್ತಿದ್ದರೆ ಎಂಥವರು ಬೆರಗಾಗಬೇಕು. ಹೌದು ಬುದ್ದಿವಂತ ಚಿತ್ರದಲ್ಲಿ ಉಪ್ಪಿ ತಮ್ಮ ಡೈಲಾಗ್ ಶೈಲಿ ಹಾಗೂ ವಿಶಿಷ್ಟ ಮ್ಯಾನರಿಸಂನಿಂದ ಚಿತ್ರದುದ್ದಕ್ಕೂ ಗಮನ ಸೆಳೆಯುತ್ತಾರೆ. ಚಿತ್ರವನ್ನು ಉಪೇಂದ್ರರ ಇಮೇಜ್‌ಗಾಗಿಯೇ ಮಾಡಿದಂತಿದೆ. ಚಿತ್ರ ಸಂಪೂರ್ಣವಾಗಿ ಉಪೇಂದ್ರಮಯ.
ಐವರು ಲಲನೆಯರಿಗೆ ಬೇರೆ ಬೇರೆ ಗೆಟಪ್ ಹಾಗೂ ಹೆಸರಿನಲ್ಲಿ ಬಂದು ಅವರನ್ನು ಮದುವೆಯಾಗಿ ಕೊನೆಗೆ ಅವರಿಗೆ ಚಳ್ಳೆಹಣ್ಣು ತಿನ್ನಿಸಿ ಕೊನೆಗೆ 'ನಾನವನಲ್ಲ' ಎಂದು ಸಾಬೀತುಪಡಿಸುವ ಕಥೆಯನ್ನು ಚಿತ್ರ ಒಳಗೊಂಡಿದೆ. ಚಿತ್ರದ ಹೆಚ್ಚಿನ ಭಾಗ ಕೋರ್ಟ್ ಕಟಕಟೆಯಲ್ಲಿ ನಡೆಯುತ್ತದೆ. ಉಪ್ಪಿ ಮಂಗಳೂರು ಕನ್ನಡ ಭಾಷೆಯನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ.
ಹಿಂದಿನ ಉಪೇಂದ್ರ ಹಾಗೂ ಎ ಚಿತ್ರದ ಇಮೇಜನ್ನು ಗಳಿಸುವ ಪ್ರಯತ್ನವನ್ನು ಉಪೇಂದ್ರ ಈ ಚಿತ್ರದಲ್ಲಿ ಮಾಡಿದ್ದಾರೆ. ಭಾಗಶಃ ಯಶಸ್ವಿಯಾಗಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ.
ರೇಖಾ, ಶಾಂತಿ, ರಾಣಿ, ಮೋನಿಕಾ ಹಾಗೂ ಜಡ್ಜ್ ಮಗಳೊಬ್ಬಳಿಗೂ ರಂಜನೀಶ, ಸ್ವಾಮೀಜಿ, ಸೆಕ್ರೆಟರಿ, ಶ್ಯಾಂ ಪ್ರಸಾದ್ ಐದು ಮಂದಿ ಬೇರೆ ಬೇರೆ ಹೆಸರಿನಲ್ಲಿ ಬಂದು ಅವರ ವೀಕ್‌ನೆಸ್ ತಿಳಿದುಕೊಂಡು ಅವರನ್ನು ವರಿಸಿ ಅವರ ಹಣ, ಚಿನ್ನಾಭರಣದೊಂದಿಗೆ ಪರಾರಿಯಾಗುತ್ತಾನೆ. ಅವರು ಕೋರ್ಟ್‌ನಲ್ಲಿ ವಾದಿಸುವಾಗ ನಾನವನಲ್ಲ ಎಂದು ತನ್ನ ವಿಶಿಷ್ಟ ಡೈಲಾಗ್ ಶೈಲಿಯಿಂದ ವಾದ ಮಾಡುತ್ತಾರೆ.
ಇವರ ವಾದವನ್ನು ಕೇಳಿ 'ಜಡ್ಜಮ್ಮ' ಲಕ್ಷ್ಮೀಗೆ ನಗು ಬರುತ್ತದೆ. ಆದರೆ ಬುದ್ದಿವಂತ ವಾದ ಸರಿ ಇರುತ್ತದೆ. ಇಲ್ಲಿ ಉಪ್ಪಿ ಇಂದಿನ ಹುಡುಗಿಯರ ಆಸೆ ಹಾಗೂ ಅದರಿಂದಾಗುವ ತೊಂದರೆಯನ್ನು ಮಾರ್ಮಿಕವಾಗಿ ಬಿಂಬಿಸಿದ್ದಾರೆ.
ಚಿತ್ರದುದ್ದಕ್ಕೂ ಉಪೇಂದ್ರರಿಂದ ಮಾತು ಮಾತು.. ಒಂದು ನಿಮಿಷವೂ ಪುರುಸೊತ್ತಿಲ್ಲದಂತೆ ಮಾತನಾಡಿದ್ದಾರೆ. ಪಂಚಾಮೃತ ಎಂಬ ಹೆಸರಿನಿಂದ ಕಂಗೊಳಿಸಿ ಕೋರ್ಟ್ ತುಂಬಾ ನಗೆ ಬುಗ್ಗೆ ಎಬ್ಬಿಸುತ್ತಾರೆ.
ನಿರ್ದೇಶಕರು ಚಿತ್ರವನ್ನು ಅದ್ದೂರಿತನದಿಂದ ಮಾಡಿದ್ದಾರೆ. ನತನ್ಯ, ಸಲೋನಿ, ಪೂಜಾಗಾಂಧಿ, ಸೋನಾಲಿ ಹಾಗೂ ಸುಮನ್ ರಂಗನಾಥ್ ಹೀಗೆ ಒಬ್ಬರಿಂದ ಒಬ್ಬರು ಸ್ಪರ್ಧೆಗೆ ಬಿದ್ದು ನಟಿಸಿದ್ದಾರೆ. ಚಿತ್ರಾನ್ನ, ಚಿತ್ರಾನ್ನಾ ಹಾಡು ವಿಶಿಷ್ಟವಾಗಿದೆ. ರವಿವರ್ಮನ ಕುಂಚದ... ಹಾಡನ್ನು ಕೆಡಿಸಿದ್ದಾರೆ. ಕ್ಯಾಮರಾ ಕೆಲವು ಹಾಡಿನಲ್ಲಿ ಫಳಫಳಿಸುತ್ತದೆ. ಒಟ್ಟು ಉಪೇಂದ್ರ ಶಕ್ತಿ ಮೀರಿ ಪ್ರಯತ್ನಿಸಿದ್ದಾರೆ. ಯಾವುದಕ್ಕೂ ಚಿತ್ರ ಈಗ ಉಪ್ಪಿ ಅಭಿಮಾನಿಗಳ ಕೈಯಲ್ಲಿದೆ. ಅವರೇ ಉತ್ತರ ಹೇಳಬೇಕು.