Select Your Language

Notifications

webdunia
webdunia
webdunia
webdunia

'ಈಗ' ಚಿತ್ರವಿಮರ್ಶೆ: ಸುದೀಪ್ ನಟನಾ ಧೀಶಕ್ತಿ ಅನಾವರಣ

'ಈಗ' ಚಿತ್ರವಿಮರ್ಶೆ: ಸುದೀಪ್ ನಟನಾ ಧೀಶಕ್ತಿ ಅನಾವರಣ
ಚಿತ್ರ: ಈಗ
ತಾರಾಗಣ: ಕಿಚ್ಚ ಸುದೀಪ್, ನಾಣಿ, ಸಮಂತಾ
ನಿರ್ದೇಶನ: ಎಸ್.ಎಸ್. ರಾಜಮೌಳಿ
ಸಂಗೀತ: ಎಂ.ಎಂ. ಕೀರವಾಣಿ
PR

ಕಿಚ್ಚ ಸುದೀಪ್ ಎಂತಹ ಅದ್ಭುತ ನಟ ಅನ್ನೋದು ಕನ್ನಡದ ಪ್ರೇಕ್ಷಕರಿಗೆ ಗೊತ್ತಿತ್ತು. ಅದೀಗ ಇಡೀ ದಕ್ಷಿಣ ಭಾರತಕ್ಕೂ ಗೊತ್ತಾಗಿದೆ. ಎಸ್.ಎಸ್. ರಾಜಮೌಳಿ ಕೆಪ್ಯಾಸಿಟಿಯ ಮೇಲೆ ಭರವಸೆಯಿಟ್ಟು ಚಿತ್ರಮಂದಿರಕ್ಕೆ ಹೋದವರಿಗೆ ಕಿಚ್ಚ ಸುದೀಪ್ ಅದ್ಭುತವೆನಿಸಿದ್ದಾರೆ.

ಅಲ್ಲಿಗೆ, ಇಡೀ ಭಾರತೀಯ ಚಿತ್ರರಂಗವೇ ಹೆಮ್ಮೆ ಪಡಬೇಕಾದ ಚಿತ್ರ 'ಈಗ' (ತಮಿಳಿನಲ್ಲಿ 'ನಾನ್ ಈ', ಮಲಯಾಳಂನಲ್ಲಿ 'ಈಚ') ಎಂಬ ಸಾರ್ವತ್ರಿಕ ಮೆಚ್ಚುಗೆ ಸಿಕ್ಕಿದೆ. ಅಷ್ಟೇ ಅಲ್ಲ, ದಕ್ಷಿಣ ಭಾರತದತ್ತ ಬಾಲಿವುಡ್ ಮಂದಿ ಇನ್ನೊಮ್ಮೆ ಗಂಭೀರವಾಗಿ ನೋಡುವಂತಾಗಿದೆ.

ಮೊದಲೇ ಹೇಳಿದಂತೆ ಈ ಚಿತ್ರದಲ್ಲಿ ಸುದೀಪ್ ನಾಯಕರಲ್ಲ. ನಾಯಕ ನಾಣಿ. ಆದರೆ ನಾಣಿ ಇಡೀ ಚಿತ್ರದಲ್ಲಿರುವುದು ಕೇವಲ ಮೂವತ್ತೇ ನಿಮಿಷ! ನಂತರ ಏನಿದ್ದರೂ ನೊಣ, ಸಮಂತಾ ಮತ್ತು ಸುದೀಪ್.

ನಾಣಿಗೆ (ನಾಣಿ) ಎನ್‌ಜಿಒ ನಡೆಸುತ್ತಿರುವ ಎದುರು ಮನೆ ಹುಡುಗಿ ಬಿಂದು (ಸಮಂತಾ) ಅಂದರೆ ತುಂಬಾನೇ ಇಷ್ಟ. ಆದರೆ ಬಿಂದು ಮಾತ್ರ ನಾಣಿಯನ್ನು ಉಪೇಕ್ಷಿಸುತ್ತಲೇ ಬರುತ್ತಾಳೆ. ಆದರೆ ಅದೇ ನಿಜವಲ್ಲ. ವಾಸ್ತವದಲ್ಲಿ ಅವಳೂ ಪ್ರೀತಿಸುತ್ತಿರುತ್ತಾಳೆ. ಹೇಳಿಕೊಂಡಿರುವುದಿಲ್ಲ, ಅಷ್ಟೇ.

ಈ ನಡುವೆ ಬಿಂದು ಜೀವನದಲ್ಲಿ ಸುದೀಪ್ (ಸುದೀಪ್) ಎಂಟ್ರಿಯಾಗುತ್ತದೆ. ಎನ್‌ಜಿಒಗೆ ದೊಡ್ಡ ಸಹಾಯ ಮಾಡುವವನಂತೆ ಬಂದ ಸುದೀಪ್, ಆಕೆಯನ್ನೇ ಬಯಸುತ್ತಾನೆ. ಸುದೀಪ್‌ಗೆ ಅದೇನೂ ಹೊಸತಲ್ಲ. ಅದು ಆತನ ಖಯಾಲಿ. ಲೇಡಿಸ್ ಅವನ ವೀಕ್ನೆಸ್. ಬೇಕೆನಿಸಿದ್ದನ್ನು ಪಡೆದೇ ತೀರಬೇಕು. ಅದಕ್ಕಾಗಿ ಏನು ಮಾಡಲೂ ಆತ ಸಿದ್ಧ.

ತನ್ನ ಪತ್ನಿ ಮತ್ತು ಗೆಳೆಯನನ್ನೇ ಕಾರಣವಲ್ಲದ ಕಾರಣಕ್ಕಾಗಿ, ಬೇಕೆಂದಾಗ ಕೊಂದವನು ಸುದೀಪ್. ಹೀಗಿದ್ದಾಗ ತಾನು ಇಷ್ಟಪಟ್ಟ ಹುಡುಗಿ ಬಿಂದುವಿಗೊಬ್ಬ ಪ್ರಿಯಕರ ಇದ್ದಾನೆ ಎಂಬ ಸಂಗತಿ ಗೊತ್ತಾದ ಮೇಲೂ ಸುಮ್ಮನಿರುತ್ತಾನೆಯೇ? ಸುದೀಪ್ ತನ್ನ ನೈಜ ಮುಖವನ್ನು ತೋರಿಸುತ್ತಾನೆ. ನಾಣಿಯನ್ನು ಕ್ರೂರ ರೀತಿಯಲ್ಲಿ ಕೊಂದೇ ಬಿಡುತ್ತಾನೆ.

ಬಿಂದು ತನ್ನನ್ನು ಪ್ರೀತಿಸುತ್ತಿದ್ದಾಳೆ ಅನ್ನೋದು ನಾಣಿಗೆ ಗೊತ್ತಾಗುವುದೇ ಸಾಯುವ ಹೊತ್ತಿನಲ್ಲಿ. ಅದುವರೆಗೆ ಅವ್ಯಕ್ತವಾಗಿದ್ದ ನಿಜವಾದ ಪ್ರೀತಿ ಅಲ್ಲೇ ಹುಟ್ಟುತ್ತದೆ. ಬದುಕಿರದ ಮೇಲೆ ಇನ್ನೆಲ್ಲಿಯ ಪ್ರೀತಿ? ಆ ಪ್ರೀತಿಯ ಕೊಲೆಗಾರನ ಮೇಲೆ ಪ್ರತೀಕಾರ ತೀರಿಸುವುದೇ ಪ್ರೀತಿಯ ಪರಾಕಾಷ್ಠೆಯಾಗುತ್ತದೆ. ಅಲ್ಲಿಂದ ನಾಣಿಯ ಅವತಾರ ನೊಣ.

ನಾಣಿ ತನಗೆ ಸಿಕ್ಕಿರುವ ಅವಕಾಶದಲ್ಲಿ ಮಿಂಚಿದ್ದಾರೆ. ಇಡೀ ಚಿತ್ರದಲ್ಲಿ ಮುದ್ದು ಮುದ್ದಾಗಿರುವ ಸಮಂತಾ ಗಮನ ಸೆಳೆಯುತ್ತಾರೆ. ಆದರೆ ಇವರೆಲ್ಲರನ್ನೂ ಮೀರಿಸುವುದು ಕಿಚ್ಚ ಸುದೀಪ್. ಯಾವ ಫ್ರೇಮಿನಲ್ಲೂ ಅವರು ಸೋತಿಲ್ಲ. ಅವರ ದೇಹಭಾಷೆ, ವಿಲಕ್ಷಣ ಮ್ಯಾನರಿಸಂ - ಇದೂ ನಟನೆಯೇ ಎಂದು ಶಂಕೆ ಹುಟ್ಟಿಸುವಂತಿದೆ. ಒಬ್ಬ ಖಳನಾಗಿ ಇಡೀ ಚಿತ್ರವನ್ನು ಆವರಿಸಿ, ಪ್ರಳಯಾಂತಕನಂತೆ ಕಂಡು ಬರುತ್ತಾರೆ. ಪ್ರೇಕ್ಷಕರನ್ನು ನಗಿಸಿದರೂ, ತಾನು ಹಾಸ್ಯಾಸ್ಪದವಾಗದಂತೆ ಎಚ್ಚರಿಕೆ ವಹಿಸಿದ್ದಾರೆ.

ಸೋಲರಿಯದ ನಿರ್ದೇಶಕ ರಾಜಮೌಳಿ ಈ ಬಾರಿಯೂ ಮೋಸ ಮಾಡಿಲ್ಲ. ಅವರ ನಿರ್ದೇಶನ, ಚಿತ್ರಕಥೆಗೆ ಫುಲ್ ಮಾರ್ಕ್ಸ್. ವೇಗವಾಗಿ ಉರುಳುತ್ತಾ ಸಾಗುವ ಕಥೆಗೆ ಇಂಟರ್‌ವೆಲ್‌ನಲ್ಲಿ ಕೊಟ್ಟಿರುವ ತಿರುವು ಮರೆಯಲಾಗದಂತಿದೆ.

ಇನ್ನು ಗ್ರಾಫಿಕ್ಸ್. ಕಣ್ಣೆವೆಯಿಕ್ಕದಂತೆ ನೋಡಿಸಿಕೊಂಡು ಹೋಗುವ ಸ್ಪೆಷಲ್ ಎಫೆಕ್ಸ್ಟ್ ಎಷ್ಟು ಉತ್ಕೃಷ್ಟವೆಂದರೆ, ತೆಲುಗಿನಲ್ಲಿ ಈ ಹಿಂದೆ ಇಷ್ಟು ಗ್ರಾಫಿಕ್ಸ್ ಇರುವ ಸಿನಿಮಾ ಬಂದೇ ಇಲ್ಲ ಎಂದು ಹೇಳುವಷ್ಟು ಅದ್ಭುತ. ಕೀರವಾಣಿ ಸಂಗೀತ ತುಂಬಾ ಚೆನ್ನಾಗಿದೆ. ಛಾಯಾಗ್ರಹಣ, ಸಂಕಲನ, ಸಂಭಾಷಣೆ ಎಲ್ಲವೂ ರುಚಿಗೆ ತಕ್ಕಷ್ಟು.

ಮಕ್ಕಳಿಗೆ ತುಂಬಾ ಇಷ್ಟವಾಗಬಹುದಾದ ಚಿತ್ರ, ಇಡೀ ಕುಟುಂಬಕ್ಕೆ ಹೇಳಿ ಮಾಡಿಸಿದ್ದು. ಮನರಂಜನೆಗೆ ಖಂಡಿತಾ ಮೋಸವಿಲ್ಲ. 'ಈಗ' ಮಿಸ್ ಮಾಡ್ಕೋಬೇಡಿ, ಇಂತಹ ಸಿನಿಮಾ ಮತ್ತೆ ಮತ್ತೆ ಬರೋದಿಲ್ಲ.

Share this Story:

Follow Webdunia kannada