Select Your Language

Notifications

webdunia
webdunia
webdunia
webdunia

ಇಷ್ಟವಾಗುವ ಶಿಷ್ಟ ಪ್ರೀತಿಯ 'ದುಷ್ಟ'

ಇಷ್ಟವಾಗುವ ಶಿಷ್ಟ ಪ್ರೀತಿಯ 'ದುಷ್ಟ'
PR
'ದುಷ್ಟ'ನನ್ನು ಇಷ್ಟವಾಗುವಂತೆ ಮಾಡುವಲ್ಲಿ ಹಿರಿಯ ನಿರ್ದೇಶಕ ಎಸ್. ನಾರಾಯಣ್ ಗೆದ್ದಿದ್ದಾರೆಂದೇ ಹೇಳಬೇಕು. ನಾರಾಯಣ್ ನಿರ್ದೇಶಕರಾಗಿ ತಮ್ಮ ಪಾಲಿನ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ಮತ್ತು ಪರಿಣಾಮಕಾರಿಯಾಗಿ ನಿಭಾಯಿಸುವಲ್ಲಿ ಸಫಲರಾಗಿದ್ದಾರೆ.

ಚಿತ್ರಕಥೆ, ಸಂಗೀತ, ನಿರ್ಮಾಣ, ನಿರ್ದೇಶನ ಸೇರಿದಂತೆ ಚಿತ್ರದ ಎಂಟು ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿರುವ ನಾರಾಯಣ್ ಎಲ್ಲ ವಿಭಾಗಗಳಲ್ಲೂ ಸಂಯಮ ಸಾಧಿಸಿಕೊಂಡಿರುವುದು ಅವರ ಹೆಚ್ಚುಗಾರಿಕೆ.

'ಇದು ಕಥೆಯಲ್ಲ. ನೈಜ ಘಟನೆಯನ್ನಾಧರಿಸಿದ ಚಿತ್ತಾರ' ಎಂದು ಚಿತ್ರದ ಆರಂಭದಲ್ಲೇ ನಿರ್ದೇಶಕರು ಘೋಷಿಸುತ್ತಾರೆ. 'ದುಷ್ಟ'ನ ಮೇಲೆ ನಾರಾಯಣ್ ಅವರೇ ತಯಾರಿಸಿದ್ದ 'ಚೆಲುವಿನ ಚಿತ್ತಾರ'ದ ಗಾಢ ಪ್ರಭಾವ ಬಿದ್ದಿರುವುದೂ ಈ ಆರಂಭಿಕ ಘೋಷಣೆಗೊಂದು ಕಾರಣವಿರಬಹುದು.

ನೈಜ ಕಥೆಯೊಂದನ್ನು ಇಟ್ಟುಕೊಂಡು ವಾಸ್ತವ ನೆಲೆಗಟ್ಟಿನಲ್ಲಿ ಅಷ್ಟೇ ಚಾಕಚಕ್ಯತೆಯಿಂದ ನಿರೂಪಿಸುವ ಪ್ರಯತ್ನವನ್ನು ನಾರಾಯಣ್ ಮಾಡಿದ್ದಾರೆ. ಇತ್ತೀಚೆಗಷ್ಟೇ ತಮಿಳಿನಲ್ಲಿ ಯಶಸ್ಸು ಕಂಡ 'ಮೈನಾ'ದ ಅಪರಾವತಾರವೆಂಬಂತೆ 'ದುಷ್ಟ' ಅಲ್ಲಲ್ಲಿ ಪ್ರೇಕ್ಷಕನಿಗೆ ಭಾಸವಾದರೂ ಅಚ್ಚರಿಯಿಲ್ಲ.

ನಾಯಕಿಯನ್ನು ಆಕೆಯ ಅಪ್ಪನೇ ಕೊಲ್ಲುತ್ತಾನೆ. ಪ್ರೇಮದ ಹೆಸರಿನಲ್ಲಿ ಅಮಾಯಕ ಹುಡುಗಿಯ ಬಾಳನ್ನೇ ಲಗಾಡಿ ತೆಗೆಯುತ್ತಾನೆ. ತನ್ನ ದಾರಿಗೆ ಅಡ್ಡ ಬಂದವರ ಕೈ ಕಾಲು ಮುರಿಯುತ್ತಾನೆ. ಪುಂಡ ಹುಡುಗರು ನಾಯಕಿಯ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಪ್ರಯತ್ನಿಸುತ್ತಾರೆ.

ಹೀಗೆ ಜಾತಿ ವ್ಯವಸ್ಥೆ, ಮರ್ಯಾದೆ-ಪ್ರತಿಷ್ಠೆಗಳ ಅಹಂ, ಕುರುಡು ಕಾಮ, ಪ್ರೇಮದ ಅಮಲು ಮುಂತಾದ ಮುಖವಾಡಗಳಲ್ಲಿ ಕ್ರೌರ್ಯ ವಿಜೃಂಭಣೆಗೊಳ್ಳುತ್ತಾ ಸಾಗುತ್ತದೆ 'ದುಷ್ಟ' ಚಿತ್ರದಲ್ಲಿ. ತಾಯಿ ಬೇರೆ ಜಾತಿಯವನನ್ನು ಮದುವೆಯಾದಳು ಎಂಬ ಕಾರಣಕ್ಕೆ ಈಶ (ಪಂಕಜ್) ಮತ್ತು ಅತನ ತಾಯಿಯನ್ನು ಸಮಾಜ ನಿಕೃಷ್ಟವಾಗಿ ಕಾಣುತ್ತದೆ. ಅಣ್ಣನ ಮಗಳು ಪಾತಿ (ಸುರಭಿ)ಯನ್ನು ಮಗನಿಗೆ ತಂದುಕೊಳ್ಳುವ ಹಂಬಲ ತಾಯಿಯದು. ಇದು ಈತನ ಮನದಲ್ಲಿ ಬೇರೂರಿ ಶಾಲೆಗೂ ಹೋಗದೆ ಪ್ರೀತಿಯ ಕನವರಿಕೆಯಲ್ಲೇ ತೇಲಾಡಿ ಜೈಲು ಪಾಲಾಗುತ್ತಾನೆ.

ಈತ ಜೈಲಿನಿಂದ ಹೊರ ಬಂದನೆನ್ನುವಷ್ಟರಲ್ಲಿ ಪಾತಿ ಮಾಡಿದ ತಪ್ಪಿಗಾಗಿ ಜೈಲು ಪಾಲಾಗುತ್ತಾಳೆ. ಈಶ ಮತ್ತೆ ಜೈಲು ಸೇರುತ್ತಾನೆ. ಆ ನಂತರ ಹೊರ ಬಂದ ಇಬ್ಬರೂ ಹೊಸ ಬದುಕು ರೂಪಿಸಿಕೊಳ್ಳುವ ಪ್ರಯತ್ನದಲ್ಲಿ ಅನೇಕ ಕಷ್ಟ-ನಷ್ಟ, ಏಳು ಬೀಳುಗಳನ್ನು ಅನುಭವಿಸುತ್ತಾರೆ. ಪ್ರೀತಿಗಾಗಿ ಹೊರಾಟ ಒಂದೆಡೆಯಾದರೆ ಪ್ರತಿಷ್ಠೆಯ ಪ್ರಶ್ನೆ ಇನ್ನೊಂದೆಡೆ. ಇವುಗಳಲ್ಲಿ ಯಾವುದಕ್ಕೆ ಜಯ ಎಂಬುದೇ ಚಿತ್ರದ ಕ್ಲೈಮ್ಯಾಕ್ಸ್.

ಸಿನಿಮಾದ ಗ್ರಾಮರ್ಅನ್ನು ನಾರಾಯಣ್ ಅರೆದು ಕುಡಿದವರಾದುದರಿಂದ ಕಡಿಮೆ ಬಜೆಟ್‌ನಲ್ಲಿ ಸೊಗಸಾದ ಚಿತ್ರ ನೀಡುವಲ್ಲಿ ಅವರು ಸಫಲರಾಗಿದ್ದಾರೆ.

'ಪ್ರೇಮಿಗಳನ್ನು ಬದುಕಲು ಬಿಡಿ' ಎಂಬ ಸಂದೇಶವನ್ನು 'ದುಷ್ಟ' ಚಿತ್ರದಲ್ಲಿ ನೀಡ ಹೊರಟಿರುವ ನಾರಾಯಣ್ 'ಮುಗ್ಧನೊಬ್ಬ ಹೇಗೆ ಎಲ್ಲರ ಕಣ್ಣಿಗೆ ದುಷ್ಟನಾಗಿ ಕಂಡುಬರುತ್ತಾನೆ' ಎಂಬುದನ್ನೂ ರೂಪಿಸಲು ಸಾರ್ಥಕ ಪ್ರಯತ್ನ ಮಾಡಿದ್ದಾರೆ. ಬದುಕು ಕಟ್ಟಿಕೊಳ್ಳಲು ಪರದಾಡುವವರಿಗೆ ಹಾಗೂ ಬದುಕು ಕಳಕೊಂಡ ಹತಭಾಗ್ಯರಿಗೆ ಚಿತ್ರ ಮತ್ತಷ್ಟು ಆಪ್ತವೆನಿಸೀತು.

ನಾಯಕ ನಟನಾಗಿ ಅಭಿನಯಿಸಿರುವ ಪುತ್ರ ಪಂಕಜ್‌ನಲ್ಲಿ ಅಡಗಿದ್ದ ಕಲಾವಿದನನ್ನು ಹೊರ ಹಾಕುವಲ್ಲೂ ಅವರು ಯಶಸ್ವಿಯಾಗಿದ್ದಾರೆ. ಪಂಕಜ್ ಅತೀವ ಎಚ್ಚರಿಕೆಯಿಂದ ಶ್ರಮವಹಿಸಿ ನಟಿಸಿದ್ದಾರೆಂಬುದು ಮೆಚ್ಚುಗೆಗೆ ಅರ್ಹ ಸಂಗತಿ. ಇದುವರೆಗಿನ ಚಿತ್ರಗಳಲ್ಲಿನ ನಟನೆಗಿಂತ ಇಲ್ಲಿ ಅವರು ಹೆಚ್ಚು ಸಾಣೆ ಹಿಡಿದಿರುವುದು ಗಮನಾರ್ಹ. ನಾಯಕಿ ಸುರಭಿ ಆಕರ್ಷಣೀಯವಾಗಿ ಕಾಣಿಸುವುದರ ಜೊತೆಗೆ ತನ್ನ ಪಾತ್ರವನ್ನು ಒಪ್ಪವಾಗಿ ಒಪ್ಪಿಸಿದ್ದಾರೆ. ಛಾಯಾಗ್ರಾಹಕ ಜಗದೀಶ್ ವಾಲಿ ಅವರ ಕ್ಯಾಮರಾದಲ್ಲಿ ಸುಂದರ ಹೊರಾಂಗಣ ದೃಶ್ಯಗಳು ಇನ್ನಷ್ಟು ಸೊಗಸಾಗಿ ಮೂಡಿ ಬಂದಿವೆ.

Share this Story:

Follow Webdunia kannada