Select Your Language

Notifications

webdunia
webdunia
webdunia
webdunia

ಆಟ ವಿಮರ್ಶೆ; ಹೊಸ ಹುಡುಗನ ಹುಡುಗಾಟ

ಆಟ ವಿಮರ್ಶೆ; ಹೊಸ ಹುಡುಗನ ಹುಡುಗಾಟ
ಚಿತ್ರ: ಆಟ
ತಾರಾಗಣ: ಸುಮಂತ್ ಶೈಲೇಂದ್ರ, ವಿಭಾ ನಟರಾಜನ್, ಅವಿನಾಶ್, ಸಾಧು ಕೋಕಿಲಾ
ನಿರ್ದೇಶನ: ವಿಜಯ್ ಕುಮಾರ್
ಸಂಗೀತ: ಸಾಧು ಕೋಕಿಲಾ
SUJENDRA

ಪುತ್ರರತ್ನದ ಮೇಲೆ ಅಪಾರ ಭರವಸೆಗಳನ್ನಿಟ್ಟು ಹಣ ಸುರಿದ ಶೈಲೇಂದ್ರ ಬಾಬು ಆ ಕಾರಣಕ್ಕಾಗಿ ತಲೆ ತಗ್ಗಿಸಬೇಕಾಗಿಲ್ಲ. ಆದರೆ, ಅವರು ಹೀಗೆ ಖರ್ಚು ಮಾಡುವಾಗ ಹಿಂದೆ ಮುಂದೆ ನೋಡಬೇಕಿತ್ತು ಅನ್ನುವುದು ಚಿತ್ರಮಂದಿರದಿಂದ ಹೊರಗೆ ಬಂದಾಗ ನೆನಪಿನಲ್ಲಿ ಉಳಿಯುವ ಏಕೈಕ ಸಂಗತಿ!

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಹಾಗೆ ನೋಡಿದರೆ ನಿರ್ದೇಶಕ ವಿಜಯ್ ಕುಮಾರ್ ಹೊಸಬರೇನಲ್ಲ. ಈ ಹಿಂದೆ ಗೆಜ್ಜೆನಾದ, ನಂದ ಲವ್ಸ್ ನಂದಿತಾ ಚಿತ್ರಗಳಲ್ಲಿ ಗೆಲುವಿನ ಮುಖ ನೋಡಿದವರೇ. ಆದರೆ ಇಲ್ಲಿ ಮಾತ್ರ ಅವರ 'ಆಟ' ಅಷ್ಟಾಗಿ ನಡೆದಿಲ್ಲ. ಹೊಗಳುವಷ್ಟು ಶ್ರಮ ವಹಿಸಿರುವುದು ಎದ್ದು ಕಾಣುವುದಿಲ್ಲ. ಇಷ್ಟರ ಹೊರತಾಗಿಯೂ ಚಿತ್ರ ಸಹ್ಯ ಎನಿಸುವುದಾದರೆ ಅದಕ್ಕೆ ಕಾರಣ ನಾಯಕ ಸುಮಂತ್ ಶೈಲೇಂದ್ರ ಮತ್ತು ನಿರ್ಮಾಪಕ ಶೈಲೇಂದ್ರ ಬಾಬು.

ಚಿತ್ರದ ಹೆಸರಿನಂತೆ ಕಥೆಯಲ್ಲೂ ಆಟವೇ ಪ್ರಮುಖ. ಜೀವನ ಮತ್ತು ಪ್ರೀತಿಯ ಆಟಕ್ಕೆ ರಾಹುಲ್ (ಸುಮಂತ್) ಮತ್ತು ಸ್ವಾತಿ (ವಿಭಾ ನಟರಾಜನ್) ಹೊರಡಲು ಮುಹೂರ್ತವನ್ನಿಡುವುದು ಫುಟ್ಬಾಲ್ ಪಂದ್ಯ. ಹೆತ್ತವರ ಮನಸ್ಸನ್ನು ನೋಯಿಸದೆ ಕಾರ್ಯ ಸಾಧನೆ ಮಾಡಬೇಕೆನ್ನುವುದರಲ್ಲಿ ರಾಹುಲ್‌ಗೆ ನಂಬಿಕೆ ಜಾಸ್ತಿ. ಅದೇ ಕಾರಣದಿಂದ ಪ್ರೀತಿ ನಿಧಾನವಾಗುತ್ತದೆ. ಪ್ರೇಕ್ಷಕರಿಗೆ ಬೋರ್ ಆಗುತ್ತದೆ.

ಈ ನಡುವೆ ರಾಹುಲ್ ಸಹೋದರಿ ಆಕೆಯ ಮದುವೆಯ ದಿನದಂದು ಕಲ್ಯಾಣ ಮಂಟಪದಿಂದಲೇ ನಾಪತ್ತೆಯಾಗುತ್ತಾಳೆ. ಅದೇ ಹೊತ್ತಿಗೆ ಅತ್ತ ಸ್ವಾತಿಯ ಬದುಕಿನಲ್ಲೂ ಅಲ್ಲೋಲ ಕಲ್ಲೋಲ ಆರಂಭವಾಗಿರುತ್ತದೆ. ತಂದೆ ಇಷ್ಟಪಟ್ಟ ಹುಡುಗನ ಜತೆ ನಿಶ್ಚಿತಾರ್ಥವೂ ನಡೆಯುತ್ತದೆ. ನಂತರ ಏನಾಗುತ್ತದೆ? ಸ್ವಾತಿಯಿಂದ ಅಮಾಯಕ ರಾಹುಲ್ ಪಡೆಯುವ ಬಹುಮಾನವೇನು? ಕೊನೆಗಾದರೂ ರಾಹುಲ್‌ಗೆ ನ್ಯಾಯ ಸಿಗುತ್ತದೆಯೇ ಎಂಬುದನ್ನು ಚಿತ್ರಮಂದಿರದಲ್ಲೇ ನೋಡಬೇಕು.

ಯುವ ಜನತೆ ಮತ್ತು ಕೌಟುಂಬಿಕ ದೃಷ್ಟಿಕೋನ ಇಟ್ಟುಕೊಂಡು ನಿರ್ಮಿಸಲಾಗಿರುವ ಚಿತ್ರದ ಕಥೆಯಲ್ಲೇನೂ ಹೊಸತನ ಹುಡುಕಬೇಕಾಗಿಲ್ಲ. ನಿರೂಪನೆಯಲ್ಲಾದರೂ ನಿರೀಕ್ಷಿಸಲಾಗಿತ್ತು. ಅದೂ ಸುಳ್ಳಾಗಿದೆ. ನಿರ್ದೇಶಕ ವಿಜಯ್ ಕುಮಾರ್ ತನ್ನ ಹಿಂದಿನ ಖದರನ್ನು ಇಲ್ಲಿ ತೋರಿಸಿಲ್ಲ. ಒಂದು ಅದ್ದೂರಿ ಚಿತ್ರಕ್ಕೆ ಏನೆಲ್ಲ ಬೇಕು, ಅದನ್ನೆಲ್ಲ ಕೊಟ್ಟಿರುವ ಶೈಲೇಂದ್ರ ಬಾಬುವಿಗೆ ನಿರ್ದೇಶಕರು ತನ್ನ ಮಿತಿಯನ್ನು ಪ್ರದರ್ಶಿಸಿದ್ದಾರೆ.

ಡ್ಯಾನ್ಸ್ ಮತ್ತು ಹೊಡೆದಾಟದ ದೃಶ್ಯಗಳಲ್ಲಿ ಸುಮಂತ್ ಬಗ್ಗೆ ಎರಡು ಮಾತೇ ಇಲ್ಲ. ಆದರೆ ನಟನೆ ಸೇರಿದಂತೆ ಭಾವನಾತ್ಮಕ ಸನ್ನಿವೇಶಗಳ ಸಂಗತಿ ಬಂದಾಗ ಇದನ್ನೇ ಹೇಳುವಂತಿಲ್ಲ. ಮುಖದ ಹತ್ತಿರ ಕ್ಯಾಮರಾ ಫೋಕಸ್ ಮಾಡುವುದನ್ನು ಇಂತಹ ನಾಯಕರ ವಿಚಾರಕ್ಕೆ ಬಂದಾಗ ಉಪೇಕ್ಷಿಸುವುದು ಉತ್ತಮ ಎನ್ನುವುದು ಛಾಯಾಗ್ರಾಹಕರಿಗೂ ಅನ್ನಿಸಿಲ್ಲ ಅನ್ನುವುದು ಅಚ್ಚರಿ.

ನಾಯಕಿ ವಿಭಾ ನಟರಾಜನ್ ಆಯ್ಕೆಯೇ ಸರಿ ಹೊಂದುವುದಿಲ್ಲ. ನಟನೆಯಲ್ಲಿ ಇನ್ನಷ್ಟು ಪಳಗಬೇಕಿದ್ದರೂ, ಪರಭಾಷೆಯ ನಟಿಯರ ಪಟ್ಟಿಗೆ ಇನ್ನೊಂದು ಸೇರ್ಪಡೆಯಾಗುವ ಅರ್ಹತೆಯನ್ನು ಈಕೆ ಹೊಂದಿದ್ದಾರೆ.

ಸಾಧು ಕೋಕಿಲಾ ಅಪರೂಪಕ್ಕೆ ಎಂಬಂತೆ ಸಂಗೀತದಲ್ಲಿ ಮಿಂಚಿದ್ದಾರೆ.

Share this Story:

ವೆಬ್ದುನಿಯಾವನ್ನು ಓದಿ

ಸುದ್ದಿಗಳು ಸ್ಯಾಂಡಲ್ ವುಡ್ ಕ್ರಿಕೆಟ್‌ ಸುದ್ದಿ ಜ್ಯೋತಿಷ್ಯ ಜನಪ್ರಿಯ..

Follow Webdunia kannada