Article Kannada Cinema Review %e0%b2%85%e0%b2%b5%e0%b3%8d%e0%b2%b5 108021100010_1.htm

Select Your Language

Notifications

webdunia
webdunia
webdunia
webdunia

ಅವ್ವ

ಅವ್ವ
ಹಳ್ಳಿಯೊಂದರಲ್ಲಿ ಕಂಡುಬರುವ ಜಾತೀಯತೆ, ಹುಂಬತನ, ಕೀಟಲೆ, ತಮಾಷೆಗಳನ್ನು ಮೂಲವಸ್ತುವಾಗಿರಿಸಿಕೊಂಡಿದ್ದ ಕಥೆ ಮುಸ್ಸಂಜೆಯ ಕಥಾಪ್ರಸಂಗ. ಈ ಎಲ್ಲಾ ಅಂಶಗಳಿಂದ ಹಳ್ಳಿ ಮುಸ್ಸಂಜೆಯಲ್ಲಿರುವಂತೆ ಭಾಸವಾದುದರಿಂದ ಕಥೆಗೆ ಈ ಹೆಸರನ್ನೇ ಲಂಕೇಶರು ಇಟ್ಟಿದ್ದರು.

ಆದರೆ ಉದ್ಯಮದ ಕೆಲ ಅನಿವಾರ್ಯತೆಗಳ ಕಾರಣದಿಂದಾಗಿ ನಿರ್ದೇಶಕಿ ಕವಿತಾ ಲಂಕೇಶ್ ಚಿತ್ರದ ಹೆಸರನ್ನು ಅವ್ವ ಎಂದು ಬದಲಿಸಿಕೊಂಡಿರುವುದಲ್ಲದೇ ಕೆಲ ಆಶಯಗಳನ್ನೂ ಮಾರ್ಪಾಡುಮಾಡಿಕೊಂಡಿದ್ದಾರೆ. ಹೀಗಾಗಿ ಅವ್ವ ಪಾತ್ರಧಾರಿ ಆಣೆಬಡ್ಡಿ ರಂಗವ್ವನ ಒರಟುತನ, ತಲ್ಲಣಗಳು ಹಾಗೂ ಸಾಧ್ವಿತನಕ್ಕೆ ಪ್ರಾಶಸ್ತ್ಯ ಸಿಕ್ಕಿದೆ. ಹಾಗಂತ ಇತರ ಪಾತ್ರಗಳು ಮಂಕಾಗಿವೆಯೆಂದಲ್ಲ. ಬ್ಯಾಡ್ರ ಮಂಜ ಮತ್ತು ಸಾವಂತ್ರಿ ಎಂಬ ಯುವ ಪ್ರೇಮಿಗಳಾಗಿ ನಟಿಸಿರುವ ವಿಜಯ್-ಸ್ಮಿತಾ, ಮಿಷಿನ್ ಭರ್ಮಣ್ಣನ ಪಾತ್ರಧಾರಿ ರಂಗಾಯಣ ರಘು, ಉಡುಪನ ಪಾತ್ರದಲ್ಲಿ ಮಿಂಚಿರುವ ಸುಚೇಂದ್ರ ಪ್ರಸಾದ್ ಎಲ್ಲರದೂ ಬೊಂಬಾಟ್ ಅಭಿನಯ.

ಕಥೆಯನ್ನು ಘಟನೆಗಳ ಮೂಲಕ ಹೇಳದೆ ಪಾತ್ರಗಳ ನಡಾವಳಿಕೆಯ ಮೂಲಕ ಹೇಳಿರುವುದು ಕವಿತಾ ಲಂಕೇಶರ ವೈಶಿಷ್ಟ್ಯ. ಊರಲ್ಲಿನ ಹಲವು ಹನ್ನೊಂದು ವ್ಯಕ್ತಿತ್ವಗಳು ವ್ಯಕ್ತಪಡಿಸುವ ಹುಂಬತನ, ಸೋಗಲಾಡಿತನ, ಸ್ವಾರ್ಥ ಎಲ್ಲವನ್ನೂ ನೋಡುತ್ತಿದ್ದರೆ ಇದು ಕೇವಲ ಕಂಬಳ್ಳಿಯ ಕಥೆಯಲ್ಲ, ನಮ್ಮದೇ ಊರಿನ ಕಥೆ ಎನಿಸುವಷ್ಟರ ಮಟ್ಟಿಗೆ ಚಿತ್ರ ನಮ್ಮನ್ನು ಅವರಿಸುತ್ತದೆ. ಹೀಗಾಗಿ ಅವ್ವ ಚಿತ್ರ ನಮ್ಮ-ನಿಮ್ಮೆಲ್ಲರ ಊರಿನ ಕಥೆ ಎನ್ನಬಹುದೇನೋ.

ಚಿತ್ರದಲ್ಲಿ ಕೆಲವೊಂದು ಹಸಿ-ಬಿಸಿ ಪ್ರಣಯದ ದೃಶ್ಯಗಳು, ಕಥೆಗೆ ಸಹಜವಾಗಿರುವ ಬೈಗುಳಗಳು ಇರುವುದಕ್ಕೋ ಏನೋ ಚಿತ್ರಕ್ಕೆ ಎ ಪ್ರಮಾಣಪತ್ರ ಸಿಕ್ಕಿದೆ ಎಂದುಕೊಳ್ಳಬಹುದಾದರೂ, ಆಣೆಬಡ್ಡಿ ರಂಗವ್ವನದು ಒರಟುಪಾತ್ರ, ಆಕೆ ಹಳ್ಳಿಯವಳು ಎಂಬ ಒಂದೇ ಕಾರಣಕ್ಕೆ ಅಷ್ಟೊಂದು (ನೇರ-ದಿಟ್ಟ-ನಿರಂತರ!!) ಬೈಗುಳಗಳನ್ನು ಬಳಸುವುದು ಅಗತ್ಯವಿತ್ತೇ ಎಂಬ ಪ್ರಶ್ನೆ ಆಗಾಗ ಕಾಡುತ್ತದೆ. ಇಷ್ಟನ್ನು ಹೊರತು ಪಡಿಸಿದರೆ ಚಂದ್ರೇಗೌಡರ ಸಂಭಾಷಣೆ ಎಲ್ಲರ ಗಮನವನ್ನು ಸೆಳೆಯುತ್ತದೆ. ಅಷ್ಟೇ ಅಲ್ಲ, ಅವರ ಮೇಲೆ ಲಂಕೇಶರ ಪ್ರಭಾವ ದಟ್ಟವಾಗಿರುವುದೂ ಕಂಡುಬರುತ್ತದೆ. ಲಂಕೇಶ್ ಪತ್ರಿಕೆಯಲ್ಲಿ ಅಂಕಣಕಾರರಾಗಿದರುವುದರ ಜೊತೆಗೆ ಲಂಕೇಶರ ಒಡನಾಟವಿದ್ದುದೂ ಇದಕ್ಕೆ ಕಾರಣವಿರಬಹುದು. ಮಾತಾಡ್ ಮಾತಾಡು ಮಲ್ಲಿಗೆ ಚಿತ್ರದಲ್ಲಿ ಈಗಾಗಲೇ ತಮ್ಮ ಕಟ್ಟೇಪುರಾಣದ ಸಂಭಾಷಣೆಯ ಮೂಲಕ ಜನಪ್ರಿಯರಾಗಿದ್ದ ಚಂದ್ರೇಗೌಡರನ್ನು ಚಿತ್ರೋದ್ಯಮ ಇನ್ನಷ್ಟು ಸಮರ್ಥವಾಗಿ ಬಳಸಿಕೊಂಡರೆ ಉದ್ಯಮಕ್ಕೊಂದು ಪ್ರತಿಭೆ ಸಿಕ್ಕಂತಾಗುತ್ತದೆ.

ಚಿತ್ರದಲ್ಲಿ ಮತ್ತಷ್ಟು ಗಮನ ಸೆಳೆಯುವುದು ಐಸಾಕ್‌ರವರ ಸಂಗೀತ ಹಾಗೂ ಮಧು ಅಂಬಟ್‌ರವರ ಛಾಯಾಗ್ರಾಹಣ. ಐಸಾಕ್‌ರವರ ಪ್ರತಿಭೆಯ ಬಗ್ಗೆ ಅರಿಯಲು ಗುರುವೇ ನಿನ್ನಾಟ ಬಲ್ಲವರಾರೋ ಎಂಬ ಗೀತೆಯೊಂದೇ ಸಾಕು. ಇವರು ಮುಂಬರುವ ದಿನಗಳಲ್ಲಿ ಕನ್ನಡ ಚಿತ್ರರಂಗದ ಆಸ್ತಿಯಾಗಬಲ್ಲರು ಎನಿಸುತ್ತದೆ. ಇನ್ನು ಬಹಳ ದಿನಗಳ ನಂತರ ಕನ್ನಡ ಚಿತ್ರರಂಗಕ್ಕೆ ಬಂದಿರುವ ಛಾಯಾಗ್ರಾಹಕ ಮಧು ಅಂಬಟ್ ಬಗೆಗೆ ಏನೆಂದು ಹೇಳುವುದು? ಜಿ.ವಿ. ಅಯ್ಯರ್‌ರವರ ಚಿತ್ರವನ್ನು ಹೊರತುಪಡಿಸಿದರೆ ಅಂಬಟ್ ಕನ್ನಡ ಚಿತ್ರರಂಗಕ್ಕೆ ಅಷ್ಟಾಗಿ ದಕ್ಕಿರಲಿಲ್ಲ. ಈ ಚಿತ್ರದಲ್ಲಂತೂ ಅವರು ಹಳ್ಳಿಯನ್ನು ಅದ್ಬುತವಾಗಿ ತೋರಿಸಿದ್ದಾರೆ.

ಚಿತ್ರದಲ್ಲಿ ಅಲ್ಲಲ್ಲಿ ಕೆಲವೊಂದು ಅನಗತ್ಯ ದೃಶ್ಯಗಳು ಕಾಣಸಿಗುತ್ತವೆ. ಪ್ರಾಯಶಃ ಇವು ಪ್ರೇಕ್ಷಕನಿಗೆ ಅಗತ್ಯ ಎಂದು ಕವಿತಾ ಲಂಕೇಶ್ ಭಾವಿಸಿದ್ದರು ಎನಿಸುತ್ತದೆ. ಇದು ಅವರ ಹಾಗೂ ಉದ್ಯಮದ ಅನಿವಾರ್ಯತೆಯೂ ಇರಬಹುದು. ಚಿತ್ರವನ್ನು ಒಮ್ಮೆ ನೋಡಿ ವಿಮರ್ಶಿಸುವವನಿಗಿಂತ ಪ್ರೇಕ್ಷಕನೆಂಬ ವಿಮರ್ಶಕ ಕೆಲವೊಮ್ಮೆ ಅನಿವಾರ್ಯವಾಗಿಬಿಡುವುದು ಪ್ರಾಯಶಃ ಇದೇ ಕಾರಣಗಳಿಗಾಗಿ.

ಈ ಅರ್ಥದಲ್ಲಿ ಅವ್ವ ಹಾಗೂ ಕವಿತಾ ಲಂಕೇಶ್ ಇಬ್ಬರೂ ಗೆದ್ದಿದ್ದಾರೆ. ಬಿಂಬ ಚಿತ್ರದಷ್ಟು, ದೇವೀರಿ ಚಿತ್ರದಷ್ಟು ಗೆದ್ದಿದ್ದಾರಾ ಎಂದು ನೀವು ಕೇಳಬಾರದು. ಏಕೆಂದರೆ ಐದೂ ಬೆರಳುಗಳು ಸಮನಾಗಿರಲು ಸಾಧ್ಯವಿಲ್ಲ...

ಅಲ್ಲವೇ?!!

Share this Story:

Follow Webdunia kannada