Select Your Language

Notifications

webdunia
webdunia
webdunia
webdunia

ಅದ್ಧೂರಿ ಚಿತ್ರವಿಮರ್ಶೆ; ತಾಜಾ ಪ್ರೀತಿ ನಿಜವೆನಿಸುವ ಪ್ರತೀತಿ

ಅದ್ಧೂರಿ ಚಿತ್ರವಿಮರ್ಶೆ; ತಾಜಾ ಪ್ರೀತಿ ನಿಜವೆನಿಸುವ ಪ್ರತೀತಿ
ಚಿತ್ರ: ಅದ್ಧೂರಿ
ತಾರಾಗಣ: ಧ್ರುವ ಸರ್ಜಾ, ರಾಧಿಕಾ ಪಂಡಿತ್, ತರುಣ್ ಚಂದ್ರ, ರಾಜು ತಾಳಿಕೋಟೆ, ತಬಲ ನಾಣಿ
ನಿರ್ದೇಶನ: ಎ.ಪಿ. ಅರ್ಜುನ್
ಸಂಗೀತ: ವಿ. ಹರಿಕೃಷ್ಣ
SUJENDRA

ಹತ್ತಾರು ಕೆಟ್ಟ ಕನ್ನಡ ಚಿತ್ರಗಳು ಬೆನ್ನು ಬೆನ್ನಿಗೆ ಅಪ್ಪಳಿಸಿ ಉಸಿರುಗಟ್ಟಿಸಿದ ಬಳಿಕ ಪ್ರೇಕ್ಷಕರನ್ನು ತಾಜಾತನದ ಮಜಲಿಗೆ ಸೆಳೆದೊಯ್ಯುವ ಯತ್ನವನ್ನು ನಡೆಸುತ್ತದೆ 'ಅದ್ಧೂರಿ'. ಆ ಮಟ್ಟಿಗೆ ನಿರ್ದೇಶಕ ಎ.ಪಿ. ಅರ್ಜುನ್ ಕನ್ನಡಿಗರನ್ನು 'ಅಂಬಾರಿ' ಮೇಲೇರುವಂತೆ ಮಾಡುವಲ್ಲಿ ಯಶಸ್ವಿಯಾಗುತ್ತಾರೆ.

ಅವರ ಕಥೆಯ ಆಯ್ಕೆಯನ್ನು ಗಂಭೀರವಾಗಿ ಮೆಚ್ಚಲಾಗದು. ಆದರೂ ಈ ಜಮಾನದ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು, ಬೇಕುಬೇಕಾದುದನ್ನೆಲ್ಲ ಹದವಾಗಿ ಬೆರೆಸಿ ಉತ್ತಮ ಅಡುಗೆ ಮಾಡಿದ್ದಾರೆಂದು ಹೇಳಲು ಯಾವ ಅಡ್ಡಿಯೂ ಇಲ್ಲ.

ಅಚ್ಚು-ರಚ್ಚುವಿನ ಪ್ರೀತಿಯ ವರ್ಷದ ಅಗ್ನಿಪರೀಕ್ಷೆಯನ್ನೇ ಹಿಡಿದು ಜಗ್ಗಾಡಿ ಪ್ರಥಮಾರ್ಧದಲ್ಲಿ ಕೊಂಚ ಮಂಪರು ಬರುವಂತೆ ಮಾಡಿರುವುದು, ಇಬ್ಬರೇ ಪಾತ್ರಧಾರಿಗಳನ್ನು ನೆಚ್ಚಿಕೊಂಡಿರುವುದು ಮತ್ತು ಅವೆಲ್ಲಕ್ಕಿಂತಲೂ ಒಂದೊಳ್ಳೆ ಕಥೆಯಿಲ್ಲದಿರುವುದು ಉಪ್ಪಿನಕಾಯಿ ಊಟದಲ್ಲಿಲ್ಲ ಎಂಬ ಕೊರತೆಯನ್ನು ಎದ್ದು ತೋರಿಸುತ್ತದೆ.

ಇನ್ನು ಮೊದಲ ಚಿತ್ರ 'ಅಂಬಾರಿ'ಗಿಂತ ತುಂಬಾ ಮುಂದಕ್ಕೆ ಸಾಗಿರುವ ಅರ್ಜುನ್ ತಾಜಾತನದ ಅನುಭವ ಮೂಡಿಸಿದ್ದಾರೆ ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ. ಕಥೆಯಲ್ಲಿ ಎಡವಿದರೂ ಅವರು ನಿರೂಪನೆಯಲ್ಲಿ ಗೆದ್ದಿದ್ದಾರೆ. ಪ್ರತಿ ಫ್ರೇಮಿನಲ್ಲೂ ಚಿತ್ರದ ಶೀರ್ಷಿಕೆಗೆ ಹೊಂದಾಣಿಕೆಯಾಗುವ ಅದ್ಧೂರಿತನವನ್ನವರು ಮೆರೆದಿದ್ದಾರೆ. ಹದಬೆರೆತ ಹಾಸ್ಯ, ಭಾವನಾತ್ಮಕ ಸನ್ನಿವೇಶಗಳು, ಆಕ್ಷನ್‌ಗಳಿಗೆ ಸರಿ ಹೊಂದುವ ಸಂಭಾಷಣೆ ಪ್ಲಸ್ ಪಾಯಿಂಟ್.

ನಾಯಕಿ ರಾಧಿಕಾ ಪಂಡಿತ್ ಪ್ರತಿಭೆ ಅನಾವರಣ ಪ್ರೇಕ್ಷಕರಿಗೇನೂ ಹೊಸತಲ್ಲ. ಅವರಿಗಿಂತಲೂ ಇಡೀ ಚಿತ್ರದಲ್ಲಿ ಅಚ್ಚರಿಯೆನಿಸುವುದು ನಾಯಕ ಧ್ರುವ ಸರ್ಜಾ. ಅವರ ಔಟ್‌ಲುಕ್, ಅದರಲ್ಲೂ ಮೂಗು ಬಿಟ್ಟು ಉಳಿದ್ಯಾವುದರಲ್ಲೂ ದೂರು ಸಿಗದು. ಆಕ್ಷನ್, ಡ್ಯಾನ್ಸ್ ಜತೆಗೆ ಡೈಲಾಗ್ ಡೆಲಿವರಿಯಲ್ಲೂ ಗೆಲ್ಲುತ್ತಾರೆ. ಅವರು ನವನಾಯಕನೇ ಎಂದು ಶಂಕೆ ಹುಟ್ಟಿಸುವಂತಿದ್ದಾರೆ. ಚಿರಂಜೀವಿ ಸರ್ಜಾರಿಂದ ನಿರಾಸೆಗೊಂಡಿದ್ದ ಚಿಕ್ಕಪ್ಪ ಅರ್ಜುನ್ ಸರ್ಜಾ ಈ ಬಾರಿ ಇನ್ನೊಂದು ಸರ್ಜಾನನ್ನು ಮೆಚ್ಚದೇ ಇರಲು ಕಾರಣಗಳೇ ಇಲ್ಲ.

ಪ್ರೇಮಿಗಳಿಬ್ಬರ ಕಚ್ಚಾಟದಲ್ಲಂತೂ ಪ್ರೇಕ್ಷಕರು ಮೈಮರೆತು ಬಿಡುತ್ತಾರೆ. ನಿರ್ದೇಶಕರ ಆಯ್ಕೆ ಸರಿಯಾಗಿದೆ ಎಂಬ ಭಾವನೆ ಗಟ್ಟಿಯಾಗುವುದು ಆಗಲೇ. ರಾಧಿಕಾ ಪಂಡಿತ್ ನೋವಿನಲ್ಲೂ, ನಲಿವಿನಲ್ಲೂ ಮನೆಮಗಳೆಂಬಷ್ಟು ಆಪ್ತೆ. ಎಲ್ಲದಕ್ಕೂ ಸೈ ಎಂಬುದನ್ನು ಸಾಬೀತುಪಡಿಸಿರುವ ಅವರು ರಮ್ಯಾ ನಂತರದ ಸ್ಥಾನ ತುಂಬುವ ಭರ್ತಿ ಅಭಿನೇತ್ರಿ.

ಸೂರ್ಯ ಕಿರಣ್ ಕ್ಯಾಮರಾ ಕೆಲಸ ಕಣ್ಣು ಕುಕ್ಕುತ್ತದೆ. ಯಾವ ದೃಶ್ಯದಲ್ಲೂ ಅವರು ತ್ರಾಸ ಕೊಡುವುದಿಲ್ಲ, ರಮಣೀಯವಾಗಿಸುತ್ತಾರೆ. ವಿ. ಹರಿಕೃಷ್ಣ ಸಂಗೀತದ 'ಅಮ್ಮಾಟೆ...' ಹಾಡಂತೂ ಪ್ರೇಕ್ಷಕರು ಕುಳಿತಲ್ಲಿಂದಲೇ ಪ್ರೇಕ್ಷಕರು ಕಾಲಾಡಿಸುವಂತೆ ಮಾಡುತ್ತಾರೆ. ಉಳಿದ ಮೆಲೋಡಿ ಹಾಡುಗಳೂ ಅಷ್ಟೇ, ಪ್ರತಿಯೊಂದರಲ್ಲೂ ಇಷ್ಟವಾಗುತ್ತಾರೆ.

Share this Story:

Follow Webdunia kannada