ಅಟ್ಟಹಾಸ ಚಿತ್ರವಿಮರ್ಶೆ: ವೀರಪ್ಪನ್ ಡಾಕ್ಯುಮೆಂಟರಿ!
ಚಿತ್ರ: ಅಟ್ಟಹಾಸತಾರಾಗಣ: ಕಿಶೋರ್, ಅರ್ಜುನ್ ಸರ್ಜಾ, ಸುರೇಶ್ ಒಬೆರಾಯ್, ಲಕ್ಷ್ಮಿ ರೈ, ರವಿಕಾಳೆ, ವಿಜಯಲಕ್ಷ್ಮಿನಿರ್ದೇಶನ: ಎಎಂಆರ್ ರಮೇಶ್ಸಂಗೀತ: ಸಂದೀಪ್ ಚೌಟನರಹಂತಕ ವೀರಪ್ಪನ್ ಚಿತ್ರವೆಂದ ಮೇಲೆ ಕುತೂಹಲ ಇದ್ದೇ ಇರುತ್ತದೆ. ವೀರಪ್ಪನ್ ಹತ್ಯೆಯಾದ ಮೇಲೆ ಆತನ ಕುರಿತು ಯಾರೂ ಸಿನಿಮಾ ಮಾಡಿಯೇ ಇಲ್ಲ. ಅದರಲ್ಲೂ ಈ ಹಿಂದೆ ಸೈನೈಡ್ ಚಿತ್ರ ನಿರ್ದೇಶಿಸಿ ಗೆದ್ದ ಎಎಂಆರ್ ರಮೇಶ್ ನಿರ್ದೇಶನ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿತ್ತು. ಆ ನಿರೀಕ್ಷೆಗಳು ಹುಸಿಯಾಗಿಲ್ಲ ಅನ್ನೋದು ಇಡೀ ಚಿತ್ರದ ಪ್ಲಸ್ ಪಾಯಿಂಟ್.ವೀರಪ್ಪನ್ ಜೀವನದ ಕುರಿತು ಸಾಕಷ್ಟು ಮಾಹಿತಿ ಕಲೆ ಹಾಕಿಯೇ ರಮೇಶ್ ಕಥೆ ಬರೆದಿದ್ದಾರೆ. ಅದಕ್ಕೆ ತಕ್ಕ ತಂಡವನ್ನೂ ಕಟ್ಟಿಕೊಂಡಿರುವುದು ಹೆಗ್ಗಳಿಕೆ. ನಿರ್ದೇಶಕ ರಮೇಶ್‌ಗೆ ಅತಿ ಹೆಚ್ಚು ಬೆಂಬಲವಾಗಿ ಚಿತ್ರದಲ್ಲಿ ನಿಂತಿರುವುದು ಕ್ಯಾಮರಾಮ್ಯಾನ್ ವಿಜಯ್ ಮಿಲ್ಟನ್ ಮತ್ತು ಹಿನ್ನೆಲೆ ಸಂಗೀತ ನೀಡಿರುವ ಸಂದೀಪ್ ಚೌಟ. ರಮೇಶ್ ಕಥೆಯ ದೃಶ್ಯಗಳಿಗೆ ಜೀವ ಕೊಡುವಲ್ಲಿ ಈ ಇಬ್ಬರ ಪಾಲು ತುಂಬಾ ದೊಡ್ಡದು.ಬಿಗಿ ನಿರೂಪನೆಯಲ್ಲೇ ಇಡೀ ಚಿತ್ರ ಸಾಗುತ್ತದೆ. ಕಾಡಿನ ಸನ್ನಿವೇಶಗಳು ಭಯ ಹುಟ್ಟಿಸುತ್ತವೆ. ತಾಂತ್ರಿಕವಾಗಿ ಕೆಲವೊಂದು ಕಡೆ ನಾಟಕೀಯತೆ ಇರುವುದನ್ನು ಹೊರತುಪಡಿಸಿದರೆ ಉತ್ತಮ. ಆದರೆ ಇಡೀ ಚಿತ್ರ ಡಾಕ್ಯುಮೆಂಟರಿಯಂತೆ ಭಾವನೆ ಮೂಡಿಸುತ್ತದೆ. ಕಮರ್ಷಿಯಲ್ ರೀತಿಯಲ್ಲಿ ಚಿತ್ರಿಸಿರುವ ಡಾಕ್ಯುಮೆಂಟರಿ ಎಂಬ ಅನುಭವ ನೀಡುತ್ತದೆ. ಹಾಗಾಗಿ ಚಿತ್ರಮಂದಿರಕ್ಕೆ ಹೋಗುವವರು ಕಮರ್ಷಿಯಲ್ ಥ್ರಿಲ್ಲಿಂಗ್ ಅನುಭವದ ನಿರೀಕ್ಷೆ ಇಟ್ಟುಕೊಳ್ಳಬಾರದು.ಇನ್ನು ಇಡೀ ಚಿತ್ರದಲ್ಲೊಂದು ದೊಡ್ಡ ಮೈನಸ್ ಪಾಯಿಂಟ್ ಇದೆ. ಅದು ಬಹುಶಃ ನಿರ್ದೇಶಕ ಮತ್ತು ನಿರ್ಮಾಪಕ ಎಎಂಆರ್ ರಮೇಶ್ ಅವರ ಮಾರ್ಕೆಟಿಂಗ್ ತಂತ್ರ. ಇಡೀ ಚಿತ್ರವನ್ನು ಅವರು ತಮಿಳುನಾಡು ಮತ್ತು ತಮಿಳು ಪ್ರೇಕ್ಷಕರಿಗಾಗಿ ಮಾಡಿದ್ದಾರೇನೋ ಎಂಬ ಭಾವನೆ ಬರುತ್ತದೆ. ವರನಟ ಡಾ.ರಾಜ್‌ಕುಮಾರ್ ಪಾತ್ರ ಹೊರತುಪಡಿಸಿದರೆ ಕರ್ನಾಟಕ ಅಥವಾ ಕನ್ನಡ ಅವರಿಗೆ ಮರೆತೇ ಹೋಗಿದೆ. ವೀರಪ್ಪನ್ ಹತ್ಯೆಯಲ್ಲಿ ಕರ್ನಾಟಕ ಪೊಲೀಸರ ಪಾತ್ರವೇ ಇಲ್ಲ ಎಂಬಂತೆ ಬಿಂಬಿಸಲಾಗಿದೆ. ರಾಜಕಾರಣಿಗಳ ವಿಚಾರಕ್ಕೆ ಬಂದಾಗಲೂ, ನಮ್ಮವರ ಪ್ರಸ್ತಾಪವಿಲ್ಲ.ಇಂತಹ ಕೆಲವು ಲೋಪದೋಷಗಳನ್ನು ಹೊರತುಪಡಿಸಿ ನೋಡಿದರೆ, ರಮೇಶ್ ನೈಜ ಘಟನೆಗಳ ಸಿನಿಮಾ ಮಾಡುವುದರಲ್ಲಿ ಸಿದ್ಧ ಹಸ್ತರು ಎನ್ನುವುದು ಇನ್ನೊಮ್ಮೆ ಸಾಬೀತುಪಡಿಸಿದ್ದಾರೆ ಎಂದು ಹೇಳಬಹುದು.ವೀರಪ್ಪನ್ ಪಾತ್ರ ಮಾಡಿರುವ ಕಿಶೋರ್ ಅವರದ್ದು ಪರಕಾಯ ಪ್ರವೇಶ. ಆದರೆ ವರನಟ ಡಾ.ರಾಜ್‌ಕುಮಾರ್ ಪಾತ್ರ ಮಾಡಿರುವ ಸುರೇಶ್ ಒಬೆರಾಯ್ ಬಗ್ಗೆಯೂ ಇದೇ ಮಾತು ಹೇಳುವಂತಿಲ್ಲ. ಅರ್ಜುನ್ ಸರ್ಜಾ, ರವಿಕಾಳೆ, ಸ್ವತಃ ರಮೇಶ್, ಸುಚೇಂದ್ರ ಪ್ರಸಾದ್ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ. ನ್ಯಾಯಾಲಯದ ಸೂಚನೆಯಂತೆ ಲಕ್ಷ್ಮಿ ಪಾತ್ರದ ಕೆಲವು ದೃಶ್ಯಗಳನ್ನು ಮಬ್ಬುಮಬ್ಬಾಗಿ ತೋರಿಸಲಾಗಿದೆ.ಕೆಲವೇ ಕೆಲವು ಸನ್ನಿವೇಶಗಳನ್ನು ಹೊರತುಪಡಿಸಿದರೆ, ಇಡೀ ಚಿತ್ರ ಸಹಜತೆಯಿಂದ ಕೂಡಿದೆ. ಕರ್ನಾಟಕ ಮತ್ತು ತಮಿಳುನಾಡುಗಳನ್ನು ಎರಡು ದಶಕಗಳಿಗೂ ಹೆಚ್ಚು ಕಾಲ ಕಾಡಿದ ಒಬ್ಬ ಕ್ರಿಮಿಯ ಜೀವನದ ಕೆಲ ಭಾಗಗಳನ್ನಾದರೂ ನೋಡಬೇಕೆಂಬವರು, ಶೋಕಿಯ ರೌಡಿಸಂ ಚಿತ್ರಗಳನ್ನು ನೋಡಿ ಬೋರ್ ಆದವರು ಖಂಡಿತಾ ಚಿತ್ರಮಂದಿರದತ್ತ ಹೆಜ್ಜೆ ಹಾಕಬಹುದು.