Select Your Language

Notifications

webdunia
webdunia
webdunia
webdunia

ರಮೇಶ್ ಅರವಿಂದ್ ಪುಷ್ಪಕ ವಿಮಾನದಲ್ಲಿ ಹಾರಾಡಿ ಬನ್ನಿ

ರಮೇಶ್ ಅರವಿಂದ್ ಪುಷ್ಪಕ ವಿಮಾನದಲ್ಲಿ ಹಾರಾಡಿ ಬನ್ನಿ

Krishnaveni K

Bangalore , ಸೋಮವಾರ, 9 ಜನವರಿ 2017 (09:43 IST)
ಸಿನಿಮಾ : ಪುಷ್ಪಕ ವಿಮಾನ
ನಿರ್ದೇಶನ: ಎಸ್. ರವೀಂದ್ರ ನಾಥ್
ತಾರಾಗಣ: ರಮೇಶ್ ಅರವಿಂದ್, ರಚಿತಾ ರಾಂ,  ಯುವಿನಾ, ರವಿ ಕಾಳೆ, ಮನ್ ದೀಪ್ ರಾಯ್ ಮತ್ತಿತರರು


ಬೆಂಗಳೂರು: ಇದಕ್ಕೂ ವಾಸ್ತವಕ್ಕೂ ಸಂಬಂಧ ಹುಡುಕಲು ಹೋಗಬೇಡಿ. ನಿಜ ಜೀವನದಲ್ಲಿ ಹೀಗೆಲ್ಲಾ ನಡೆಯಲು ಸಾಧ್ಯವೇ ಇಲ್ಲ ಎಂಬ ಪ್ರಶ್ನೆ ಹಾಕಿಕೊಳ್ಳಲೇ ಬೇಡಿ. ಹೀಗೂ ಆಗಬಹುದೇ ಎಂಬ ಸಂಶಯ ಚೂರೂ ಇಟ್ಟುಕೊಳ್ಳದೆ ನೋಡಿದರೆ ರಮೇಶ್ ಅರವಿಂದ್ ರ ಪುಷ್ಪಕ ವಿಮಾನ ಅದ್ಭುತ ಯಾನವಾಗುವುದರಲ್ಲಿ ಸಂಶಯವೇ ಇಲ್ಲ.

ಒಬ್ಬ ಬುದ್ಧಿಮಾಂದ್ಯ ಅಪ್ಪ ಅನಂತರಾಮಯ್ಯ (ರಮೇಶ್ ಅರವಿಂದ್), ಅವನ ಮುದ್ದಿನ ಮಗಳು ಪುಟ್ಟು ಲಕ್ಷ್ಮಿ (ಯುವಿನಾ). ಇವರ ಸುಂದರ ಪ್ರಪಂಚಕ್ಕೆ ಒಂದು ದಿನ ಬರಸಿಡಿಲು ಬಂದೆರಗುತ್ತದೆ. ಮಾಡದ ತಪ್ಪಿಗೆ ಆತ ಜೈಲು ಸೇರುತ್ತಾನೆ. ಮಗಳಿಗೆ ಏರೋಪ್ಲೇನ್ ಕೊಡಿಸುವ ಕನಸಿಟ್ಟುಕೊಂಡು ಕಾಸು ಕೂಡಿಡುತ್ತಿದ್ದಾತ ಮುಗ್ಧ ಕಮಿಷನರ್ ಮಗಳ ರೇಪ್ ಮಾಡಿ ಕೊಲೆ ಮಾಡಿದ ಅಪರಾಧದಲ್ಲಿ ಜೈಲು ಸೇರುತ್ತಾನೆ.  ಅಲ್ಲಿನ ಬೆಳಕು ಕತ್ತಲುಗಳ ನಡುವೆ ಅವನ ಬದುಕು ಕಳೆದು ಹೋಗುತ್ತದೆ.

ಜೈಲಿನಲ್ಲಿ ಆತನಿಗೆ ಒಂದಿಷ್ಟು ಮಂದಿ ‘ಒಳ್ಳೆ ಮನಸ್ಸಿನ’ ಅಪರಾಧಿಗಳು ಸ್ನೇಹಿತರಾಗುತ್ತಾರೆ. ಈ ಸ್ನೇಹಿತರ ಕೃಪಾಕಟಾಕ್ಷದಿಂದ ಆಗಾಗ ಜೈಲಿಗೆ ಬರುವ ಮಗಳು ಅನಂತರಾಮಯ್ಯನಿಗೆ ಬೆಳಕು ನೀಡುತ್ತಾಳೆ. ಕೊನೆಗೊಮ್ಮೆ ಇವರ ಕತ್ತಲು ಬೆಳಕಿನಾಟ ಜೈಲಿನ ಅಧಿಕಾರಿಗೆ ತಿಳಿಯುತ್ತದೆ. ಮುಂದೇನಾಗುತ್ತದೆ? ಈ ಮುಗ್ಧ ಅನಂತರಾಮಯ್ಯ ಜೈಲಿನಿಂದ ಹೊರಗೆ ಬರುತ್ತಾನಾ, ಎಲ್ಲವೂ ಸುಖಾಂತ್ಯವಾಗುತ್ತದಾ ಎಂದು ತಿಳಿಯಬೇಕಾದರೆ ಸಿನಿಮಾ ನೋಡಬೇಕು.

ಆರಂಭದಲ್ಲೇ ಭುವನ್ ಗೌಡ ಕ್ಯಾಮರಾ ವರ್ಕ್ ನಮ್ಮ ಕಣ್ಣು ತಂಪಗಾಗಿಸುತ್ತದೆ. ಸುಂದರ ಕಡಲ ತೀರವನ್ನು ಅದ್ಭುತವಾಗಿ ಸೆರೆ ಹಿಡಿದಿದ್ದಾರೆ. ಚಿತ್ರದ ಆರಂಭದಲ್ಲೇ ಅನಂತರಾಮಯ್ಯನ ಪುಟ್ಟು ಲಕ್ಷ್ಮಿ ದೊಡ್ಡ ಲಕ್ಷ್ಮಿಯಾಗಿ ಲಾಯರ್ ಆಗಿ ರಚಿತಾ ರಾಂ ಗಮನ ಸೆಳೆಯುತ್ತಾರೆ. ತುಂಬಾ ಮೆಚ್ಯೂರ್ ಪಾತ್ರ ಮಾಡಿರುವ ರಚಿತಾಗೆ ಇದು ಹೊಸ ಮೈಲಿಗಲ್ಲು. ಪುಟ್ಟ ಲಕ್ಷ್ಮಿ ಪಾತ್ರ ಮಾಡಿರುವ ಯುವಿನಾ ನಿಜಕ್ಕೂ ಅದ್ಭುತವಾಗಿ ಅಭಿನಯಿಸಿದ್ದಾರೆ.  ಅಪ್ಪನನ್ನು ಕಾಣುವ ತುಡಿತ, ಕಂಡಾಗ ಆಕೆಯ ಕಣ್ಣಲ್ಲಿ ಮೂಡುವ ಮಿಂಚಿನಿಂದ ಯುವಿನಾ ನಮಗೆ ಇಷ್ಟವಾಗುತ್ತಾರೆ.

ಇನ್ನು ರಮೇಶ್ ಅರವಿಂದ್ ಬಗ್ಗೆ ಹೇಳುವಂತೆಯೇ ಇಲ್ಲ. ಅವರು ಸಹಜವಾಗಿ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದಾರೆ. ಕಾರಣವಿಲ್ಲದೇ ನಮ್ಮ ಕಣ್ಣಲ್ಲಿ ನೀರು ತರಿಸುತ್ತಾರೆ. ಹೊಸ ಮ್ಯಾನರಿಸಂ, ಹೊಸ ರೀತಿಯಲ್ಲಿ ಅವರ ಸಂಭಾಷಣೆ ನಿಜಕ್ಕೂ ಅವರು ಚಿತ್ರದ ತುಂಬಾ ಆವರಿಸಿಕೊಂಡಿದ್ದಾರೆ. ಬಾಲಿವುಡ್ ತಾರೆ ಜ್ಯೂಹಿ ಚಾವ್ಲಾ ಕೇವಲ ಮನರಂಜನೆಗಾಗಿ ಒಂದು ಹಾಡಿನಲ್ಲಿ ಕಾಣಿಸಿಕೊಂಡಿದ್ದಾರಷ್ಟೆ. ಸದಾ ನೆಗೆಟಿವ್ ಪಾತ್ರ ಮಾಡಿ ಕೋಪ ಹುಟ್ಟಿಸುವ ರವಿ ಕಾಳೆಗೆ ಇಲ್ಲಿ ವಿಭಿನ್ನ ಪಾತ್ರವಿದೆ. ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಯಾಗಿ ಚಪ್ಪಾಳೆ ಗಿಟ್ಟಿಸುತ್ತಾರೆ.

ಕಣ್ಣೀರು ಹಾಕಿ ಹಾಕಿ ಕರ್ಚೀಫ್ ಒದ್ದೆಯಾದಾಗ ಒಮ್ಮೆ ನಗು ಮೂಡಿಸಲು ಅನಂತರಾಮಯ್ಯನ ಜೈಲಿನ ಸ್ನೇಹಿತರು ಬರುತ್ತಾರೆ. ಕೆಲವೊಂದು ಡಬ್ಬಲ್ ಮೀನಿಂಗ್ ಡೈಲಾಗ್ ಗಳು ಇಂತಹ ಸಿನಿಮಾಕ್ಕೆ ಅನಗತ್ಯ ಎನಿಸಿದರೂ, ಮನರಂಜನೆ ಒದಗಿಸಲು ಇಂತಹ ಸರಕುಗಳು ಬೇಕೆನಿಸುತ್ತವೆ.

ಎಲ್ಲಕ್ಕಿಂತ ಹೆಚ್ಚಿನ ಪ್ಲಸ್ ಪಾಯಿಂಟ್ ಅಂದರೆ ಚರಣ್ ರಾಜ್ ಸಂಗೀತ. ಟೈಟಲ್ ಹಾಡು ಚಿತ್ರದುದ್ದಕ್ಕೂ ಆಗಾಗ ಬಂದು ಹೋಗುತ್ತದೆ. ಜ್ಯೂಹಿ ಚಾವ್ಲಾ ಡ್ಯಾನ್ಸ್ ಮಾಡಿದ ಜಿಲ್ಕಾ ರೇ ಹಾಡು, ಟೈಟಲ್ ಹಾಡು ಹಲವು ಸಮಯ ನಮ್ಮ ಮನಸ್ಸಿನಲ್ಲಿ ಉಳಿಯುವುದು ಖಂಡಿತಾ.

ಕೆಲವೊಮ್ಮೆ ಒಂದೊಂದು ಪಾತ್ರ ಯಾಕೆ ಬಂತು, ಕತೆ ಯಾಕೆ ಹಾಗೆ ತಿರುವು ಪಡೆಯಿತು ಎಂಬ ಪ್ರಶ್ನೆಗಳು ಮೂಡುವುದು ಸಹಜ. ಇನ್ನೂ ನೀಟಾಗಿ ಸಿನಿಮಾ ಮುಗಿಸಬಹುದಿತ್ತು ಎಂದು ಅನಿಸುವುದು ಸಹಜ. ಈ ಕತೆ ಇನ್ಯಾವುದರದ್ದೋ ನಕಲು ಅನಿಸಿದರೂ ಮರೆತು ಬಿಡಬೇಕು. ಯಾಕೆಂದರೆ ಇದು ಸಂಪೂರ್ಣ ಹೊಸಬರ ಚಿತ್ರ. ಪ್ರೀತಿ, ಪ್ರೇಮ ಪ್ರಣಯದಂತಹ ಸಾಮಾನ್ಯ ಕತೆಯ ಚೌಕಟ್ಟನ್ನು ಮೀರಿ ಮಾಡಿದ ಪ್ರಯತ್ನ. ಹಾಗಾಗಿ ಇದನ್ನು ಪ್ರೋತ್ಸಾಹಿಸಲೇಬೇಕು. ರಮೇಶ್ ಅರವಿಂದ್ ಎಷ್ಟೋ ಸಿನಿಮಾ ಮಾಡಿದ್ದಾರೆ. ಆದರೆ ಇದು ಅವರ 100 ನೇ ಚಿತ್ರವಾಗುವುದಕ್ಕೆ ಲಾಯಕ್ಕಾದ ಸಿನಿಮಾ. ಹಾಗಾಗಿ ತಪ್ಪು ಒಪ್ಪುಗಳನ್ನೆಲ್ಲಾ ಹೊಟ್ಟೆಗೆ ಹಾಕಿ ಒಮ್ಮೆ ಪುಷ್ಪಕ ವಿಮಾನದಲ್ಲಿ ಜಮ್ಮೆಂದು ಹಾರಾಡಿ ಬನ್ನಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮೋಟರ್ ಬೈಕ್ ಮೇಲೆ ಹಾಟ್ ಚೆಲುವೆ ಲಕ್ಷ್ಮಿ ರೈ