ಬೆಂಗಳೂರು: ಮಕ್ಕಳನ್ನು ಮಾತ್ರ ಈ ಸಿನಿಮಾಗೆ ಕರೆದುಕೊಂಡಲೇ ಹೋಗಬೇಡಿ. ಹೀಗಂತ ಮೊದಲೇ ಎಚ್ಚರಿಕೆ ಬೋರ್ಡ್ ಹಾಕಬೇಕು ಈ ಸಿನಿಮಾಗೆ. ನೀವು ತೆರೆ ಮೇಲೆ ನೋಡುವ ಪ್ರತಿ ಕ್ಷಣವೂ ಹೃದಯವನ್ನು ಕೈಯಲ್ಲಿಟ್ಟುಕೊಂಡೇ ಸಿನಿಮಾ ನೋಡಬೇಕು. ಹಾಗಿದೆ ಈ ಸಿನಿಮಾ.
‘ಮಮ್ಮಿ’ ಹೆಸರು ಕೇಳಲು ಮುದ್ದಾಗಿದೆ. ಆದರೆ ಸಿನಿಮಾವನ್ನು ಅಷ್ಟೇ ಆರಾಮವಾಗಿ ಕುಳಿತು ನೋಡಲು ಸಾಧ್ಯವಿಲ್ಲ. ಗಂಡನನ್ನು ಕಳೆದುಕೊಂಡ ಗರ್ಭಿಣಿ ಹೆಣ್ಣು ಮಗಳು ಪ್ರಿಯಾ (ಪ್ರಿಯಾಂಕ ಉಪೇಂದ್ರ). ಅವಳಿಗೊಬ್ಬಳು ಮುದ್ದಾದ ಮಗಳು (ಯುವಿನಾ) ಮತ್ತು ಅವರ ಚಿಕ್ಕ ಸಂಸಾರ.
ಗಂಡನ ಆಸೆಯಂತೆ ಪ್ರಿಯಾ ತನ್ನ ಸಂಸಾರ ಸಮೇತ ಗೋವಾದ ಸುಂದರ ತಾಣದಲ್ಲಿರುವ ಬಂಗಲೆಗೆ ಶಿಫ್ಟ್ ಆಗುತ್ತಾರೆ. ಮಗಳಿಗೆ ಅಪ್ಪನೆಂದರೆ ತುಂಬಾ ಇಷ್ಟ. ಅಪ್ಪನ ಆಸೆಯಂತೆ ಹೊಸ ಬಂಗಲೆಗೆ ಬಂದ ಮೇಲೆ ಸಮಸ್ಯೆಗಳು ಶುರುವಾಗುತ್ತದೆ. ಭೂತದ ಕಾಟ ಶುರುವಾಗುವುದೇ ಇಲ್ಲಿ. ಅಲ್ಲಿರುವ ಭೂತ ಯಾರದ್ದು ಎನ್ನುವುದನ್ನು ಚಿತ್ರ ನೋಡಿಯೇ ತಿಳಿಯಬೇಕು.
ಎಲ್ಲಕ್ಕಿಂತ ಹೆಚ್ಚು ಇಲ್ಲಿ ಗಮನ ಸೆಳೆಯುವುದು ಚಿತ್ರದ ಮೇಕಿಂಗ್. ಸಿನಿಮಾ ನೋಡುವ ಒಂದೊಂದು ಕ್ಷಣವೂ ಭಯ ಹುಟ್ಟಿಸುವಲ್ಲಿ ನಿರ್ದೇಶಕ ಲೋಹಿತ್ ಯಶಸ್ವಿಯಾಗಿದ್ದಾರೆ. ಪ್ರಿಯಾಂಕ ಉಪೇಂದ್ರ ಅಭಿನಯವನ್ನು ಮೆಚ್ಚಲೇ ಬೇಕು. ಅವರ ಅಭಿನಯದಲ್ಲಿ ಪ್ರಭುತ್ವ ಇದೆ. ಯುವಿನಾ ಅದ್ಭುತವಾಗಿ ನಟಿಸಿದ್ದಾರೆ. ಪ್ರತಿಯೊಬ್ಬರ ನಟನೆಯಲ್ಲೂ ಸಹಜತೆ ಇದೆ.
ನಮ್ಮ ಕನ್ನಡದ ಸೊಗಡಿಗೆ ತಕ್ಕುದಾದ ಕತೆಯಾದರೂ, ನಿರೂಪಣೆ ಶೈಲಿಯಲ್ಲಿ ಕ್ಯಾಮರಾ ಕೈ ಚಳಕದಲ್ಲಿ ಯಾವುದೋ ಹಾಲಿವುಡ್ ಸಿನಿಮಾ ನೋಡಿದ ಅನುಭವವಾಗುತ್ತದೆ. ಮೈ ಬೆವರಳಿಸುವ ದೃಶ್ಯ ಕಟ್ಟಿಕೊಟ್ಟ ಚಿತ್ರದ ಪ್ರತಿಯೊಬ್ಬ ತಂತ್ರಜ್ಞನಿಗೂ ಚಪ್ಪಾಳೆ ಹೊಡೆಯಲೇಬೇಕು. ಗುಂಡಿಗೆ ಗಟ್ಟಿ ಇರುವವರು ವೀಕೆಂಡ್ ನಲ್ಲಿ ಕುಳಿತು ನೋಡಲೇ ಬೇಕಾದ ಸಿನಿಮಾ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ