Select Your Language

Notifications

webdunia
webdunia
webdunia
webdunia

'9 ಟು 12': ಥ್ರಿಲ್ಲರ್ ಚಿತ್ರಗಳ ವ್ಯಾಕರಣವನ್ನು ಅಳವಡಿಸಿಕೊಳ್ಳದ ಚಿತ್ರ

'9 ಟು 12': ಥ್ರಿಲ್ಲರ್ ಚಿತ್ರಗಳ ವ್ಯಾಕರಣವನ್ನು ಅಳವಡಿಸಿಕೊಳ್ಳದ ಚಿತ್ರ
PR
ಇದು ಈ ಚಿತ್ರದ ಕುರಿತಾದ ಏಕಸಾಲಿನ ವಿಮರ್ಶೆ ಎಂದುಕೊಳ್ಳಿ ಬೇಕಿದ್ದರೆ. ಈ ಚಿತ್ರದ ಮೂಲಕ ನಿರ್ದೇಶಕ ಅಶೋಕ್ ಪಾಟೀಲ್ ಮತ್ತೊಮ್ಮೆ ಗೆಲ್ಲುವ ಅವಕಾಶವನ್ನು ತಾವೇ ತಪ್ಪಿಸಿಕೊಂಡಿದ್ದಾರೆ ಎನ್ನಬಹುದು. ಕಲಾವಿದ ಕಿಶೋರ್ ಅವರ ಹದವರಿತ ಅಭಿನಯ, ಸವಾಲಾಗಿ ಎದುರಾಗಿದ್ದ ಛಾಯಾಗ್ರಹಣವನ್ನು ಸುಲಲಿತವಾಗಿ ನಿರ್ವಹಿಸಿರುವ ಛಾಯಾಗ್ರಾಹಕ ನಿರಂಜನ್ ಬಾಬುರವರ ಕಸುಬುಗಾರಿಕೆ ಚಿತ್ರದ ಪ್ಲಸ್ ಪಾಯಿಂಟುಗಳು. ಆದರೆ ಸಂಕಲನ ಹರಿತವಾಗಿಲ್ಲದಿರುವುದು, ಹಾಡಿನ ಸೇರ್ಪಡೆ ಇತ್ಯಾದಿಗಳಿಂದಾಗಿ ಒಂದು ಉತ್ತಮ ಚಿತ್ರವಾಗಬಹುದಾಗಿದ್ದ ಅವಕಾಶವೂ ತಪ್ಪಿದಂತಾಗಿದೆ ಎನ್ನಬಹುದು.

ಕಥಾನಾಯಕ ಮುನ್ನಾ ಓರ್ವ ಟ್ಯಾಕ್ಸಿ ಚಾಲಕ. ಅವನ ತಾಯಿಯ ಶಸ್ತ್ರ ಚಿಕಿತ್ಸೆಗೆ 3 ಲಕ್ಷ ರೂಪಾಯಿಗಳು ಬೇಕಿರುತ್ತವೆ. ಅದನ್ನು ದಕ್ಕಿಸಿಕೊಳ್ಳಲೆಂದು ಭೂಗತಲೋಕದ ಕಾನೂನುಬಾಹಿರ ಕಾರ್ಯವೊಂದರಲ್ಲಿ ಮುನ್ನಾ ತನಗರಿವಿಲ್ಲದಂತೆ ತೊಡಗಿಸಿಕೊಳ್ಳುತ್ತಾನೆ. ಆತ ತನ್ನ ಕಾರಿನಲ್ಲಿ 'ಅಜ್ಞಾತ ವಸ್ತುಗಳನ್ನು' ನಿರ್ದಿಷ್ಟ ಸ್ಥಳವೊಂದಕ್ಕೆ ರಾತ್ರಿ 9 ಗಂಟೆಯಿಂದ 12 ಗಂಟೆಯೊಳಗೆ ಸಾಗಣೆ ಮಾಡಬೇಕಿರುತ್ತದೆ.

ಹಾಗಂತ ಸಾಗಣೆಯ ಯಾವ ಹಂತದಲ್ಲೂ ಅವನು ಕಾರಿನ ಡಿಕ್ಕಿಯನ್ನು ತೆರೆದು ನೋಡುವಂತಿಲ್ಲ ಎಂಬ ಷರತ್ತನ್ನೂ ಅವನಿಗೆ ವಿಧಿಸಲಾಗಿರುತ್ತದೆ. ಒಂದು ವೇಳೆ ಡಿಕ್ಕಿಯನ್ನು ತೆರಯಲು ಪ್ರಯತ್ನಿಸಿದ್ದೇ ಆದಲ್ಲಿ, ಅದರಲ್ಲಿ ಅಳವಡಿಸಿರುವ ಟ್ರಾನ್ಸ್‌ಮೀಟರ್‌ನಿಂದ ಭೂಗತ ಲೋಕದ ಮಂದಿಗೆ ಗೊತ್ತಾಗುವಂತೆ ವ್ಯವಸ್ಥೆ ಮಾಡಲಾಗಿರುತ್ತದೆ.

ಒಂದು ವೇಳೆ ರಾತ್ರಿ 12 ಗಂಟೆಯೊಳಗಾಗಿ ನಿಗದಿತ ಸ್ಥಳವನ್ನು ಮುನ್ನಾ ತಲುಪದೇ ಇದ್ದಲ್ಲಿ ಕಾರಿಗೆ ಅಳವಡಿಸಿರುವ ಬಾಂಬ್ ಮುನ್ನಾನನ್ನು ಆಹುತಿ ತೆಗೆದುಕೊಳ್ಳುವಂಥ ಅಪಾಯವೂ ಇರುತ್ತದೆ. ಅವನ ತಾಯಿಯ ಶಸ್ತ್ರಚಿಕಿತ್ಸೆ ನಡೆಯುವ ವೇಳೆಯೂ ರಾತ್ರಿ 9 ರಿಂದ 12 ಗಂಟೆಯ ಕಾಲಾವಧಿಯಲ್ಲೇ ಇರುತ್ತದೆ. ಮುನ್ನಾ ನಿಗದಿತ ಕಾರ್ಯವನ್ನು ಮುಗಿಸಿದ ನಂತರವಷ್ಟೇ ಆಸ್ಪತ್ರೆಯ ಕೌಂಟರ್‌ನಲ್ಲಿ 3 ಲಕ್ಷ ರೂಪಾಯಿಗಳು ಜಮಾ ಆಗುವ ವ್ಯವಸ್ಥೆಯನ್ನು ಮಾಡಲಾಗಿರುತ್ತದೆ. ಇದು ಕಥೆಯ ಹೂರಣ.

ಆದರೆ ಈ ಮೂರು ಗಂಟೆಗಳ ಪ್ರಯಾಣ ಸಲೀಸಾಗಿ ನಡೆಯುವುದಿಲ್ಲ. ಮಾರ್ಗಮಧ್ಯದಲ್ಲಿ ಒಂದಷ್ಟು ಹಿಜಡಾಗಳು ಕಾರಿನಲ್ಲಿ ತೂರಿಕೊಳ್ಳುತ್ತಾರೆ, ಚೆಕ್ ಪೋಸ್ಟ್‌ನಲ್ಲಿ ಪೊಲೀಸನೊಬ್ಬ ತಡೆಯೊಡ್ಡುತ್ತಾನೆ, ಪೊಲೀಸ್ ಅಧಿಕಾರಿಯೊಬ್ಬ ಡ್ರಾಪ್ ನೀಡು ಎಂದು ಕೇಳುತ್ತಾನೆ, ಓರ್ವ ಡಕಾಯಿತ, ಓರ್ವ ಗರ್ಭಿಣಿ ಎಲ್ಲರೂ ಕಾರಿನಲ್ಲಿ ತೂರಿಕೊಳ್ಳುತ್ತಾರೆ ಮತ್ತು ಅನಪೇಕ್ಷಿತ ಅತಿಥಿಗಳಾಗಿ ಪರಿಣಮಿಸಿಬಿಡುತ್ತಾರೆ.

ಈ ಅವಧಿಯಲ್ಲಿ ತಲ್ಲಣದ ಕ್ಷಣಗಳನ್ನು ಮುನ್ನಾ ಎದುರಿಸುತ್ತಾನೆ. ಆದರೆ ಎಲ್ಲವನ್ನೂ ದಾಟಿಕೊಂಡು ನಿಗದಿತ ತಾಣದ ಬಳಿಗೆ ಬಂದಾಗ ಅವನಿಗೇ ಅಚ್ಚರಿ-ಆಘಾತವಾಗುವಂಥ ದೃಶ್ಯವೊಂದು ಅವನಿಗೆ ಗೋಚರಿಸುತ್ತದೆ. ಅದೇನು? ಅದರ ಹಿಂದಿನ ಕಥೆಯೇನು? ಮುಂದಕ್ಕೆ ಏನಾಯಿತು? ಇವೆಲ್ಲವನ್ನೂ ನೋಡಲು ನೀವು ಚಿತ್ರಮಂದಿರಕ್ಕೇ ಹೋಗಬೇಕು.

ತಮ್ಮ ನಿರ್ದೇಶನದ 'ಶಾಪ' ಮತ್ತು 'ಜೋಕ್ ಪಾಲ್ಸ್' ಚಿತ್ರಗಳ ಮೂಲಕ ಭರವಸೆ ಹುಟ್ಟಿಸಿದ್ದ ನಿರ್ದೇಶಕ ಅಶೋಕ್ ಪಾಟೀಲ್ ಸದರಿ ಥ್ರಿಲ್ಲರ್ ಚಿತ್ರದ ಮೂಲಕ ಭರವಸೆಯನ್ನು ಹುಟ್ಟಿಸುತ್ತಾರಾದರೂ ಅದು ವೃತ್ತಿಪರ ಮಟ್ಟದಲ್ಲಿಲ್ಲ ಎಂಬುದು ವಿಷಾದದ ಸಂಗತಿ. ಹಿನ್ನೆಲೆ ಸಂಗೀತ ಸಮಾಧಾನಕರವಾಗಿದೆ. ಬಿ.ವಿ.ರಾಧಾರವರ ಅಭಿನಯ ಓ.ಕೆ. ಆದರೆ ಇದೇ ಮಾತನ್ನು ಕಥಾನಾಯಕಿ ನಿವೇದಿತಾ ಪಾತ್ರಧಾರಿ ಸ್ಮಿತಾ ಕುರಿತು ಹೇಳುವಂತಿಲ್ಲ.

ಒಟ್ಟಿನಲ್ಲಿ ಇದು ಮಿಶ್ರ-ಫಲಿತಾಂಶದ ಚಿತ್ರವೆನ್ನಬಹುದು.

Share this Story:

Follow Webdunia kannada