12 AM ಚಿತ್ರವಿಮರ್ಶೆ: ಹುಡುಗಿಯ ಸೇಡು, ಹುಡುಗರ ಪಾಡು
ಚಿತ್ರ: 12 AM ಮಧ್ಯರಾತ್ರಿತಾರಾಗಣ: ಕಾಶಿನಾಥ್, ಅಭಿಮನ್ಯು, ದಿವ್ಯಾ ಶ್ರೀಧರ್ನಿರ್ದೇಶನ: ಕಾರ್ತಿಕ್ಹಿನ್ನೆಲೆ ಸಂಗೀತ: ರಾಜೇಶ್ ರಾಮನಾಥನ್ ಹಿರಿಯ ನಿರ್ದೇಶಕ ಕಾಶಿನಾಥ್ ನಿರ್ದೇಶನದ ತರಬೇತಿ ನೀಡಿದ್ದಾರಂತೆ, ನಿರ್ಮಾಣದ ತರಬೇತಿ ನೀಡಿದ್ದಾರಂತೆ ಎಂಬುದನ್ನು ಕೇಳಿದಾಗಲೇ '12 AM ಮಧ್ಯರಾತ್ರಿ' ಚಿತ್ರದ ಬಗ್ಗೆ ಕುತೂಹಲ ಹುಟ್ಟಿಕೊಂಡಿತ್ತು. ಅವರೇ ಸಹಾಯಕ ನಿರ್ದೇಶಕರು ಬೇರೆ. ಅಂದ ಮೇಲೆ ನಿರೀಕ್ಷೆ ಜಾಸ್ತಿಯೇ ಇರುತ್ತದೆ.ಚಿತ್ರದ ಶೀರ್ಷಿಕೆಯಲ್ಲೇ ಇದು ಹಾರರ್ ಕಥೆ ಅನ್ನೋದು ಗೊತ್ತಾಗುತ್ತದೆ. ಚಿತ್ರತಂಡ ಅದನ್ನೇ ಪ್ರಚಾರ ಕೂಡ ಮಾಡಿತ್ತು. ಆದರೆ ಚಿತ್ರದಲ್ಲಿ ಹಾರರ್ ತುಂಬಾ ಕಡಿಮೆ. ಹಾಗೆಂದು ಕೆಟ್ಟ ಚಿತ್ರ ಎಂದು ಹೇಳಲು ಸಾಧ್ಯವಿಲ್ಲ. ಕಾಶಿನಾಥ್ ಅನುಭವದ ಮೂಸೆಯಲ್ಲಿ ಕಾರ್ತಿಕ್ ಎಂಬ ಯುವ ನಿರ್ದೇಶಕ ತುಂಬಾ ಚೆನ್ನಾಗಿ ಪಳಗಿದ್ದಾರೆ.ತುಂಬಾ ಸಿಂಪಲ್ ಕಥೆ. ರಾಜಕಾರಣಿಯೊಬ್ಬನ ಪುತ್ರ ಶರಣ್ ಮೆಡಿಕಲ್ ಕಾಲೇಜು ವಿದ್ಯಾರ್ಥಿನಿ ಶಾಲಿನಿಯನ್ನು (ದಿವ್ಯಾ ಶ್ರೀಧರ್) ಚುಡಾಯಿಸುತ್ತಾನೆ. ಶಾಲಿನಿಯೋ, ಕೆರದಿಂದಲೇ ಕಪಾಳಕ್ಕೆ ಬಾರಿಸುತ್ತಾಳೆ. ಪೊಗರಿನ ಹುಡುಗನ ಅವಮಾನ ಸೇಡಾಗಿ ಪರಿವರ್ತನೆಗೊಂಡು ಮಧ್ಯರಾತ್ರಿ ನಡು ರಸ್ತೆಯಲ್ಲಿ ಕೊಂದು ಹಾಕುತ್ತಾನೆ. ಶಾಲಿನಿ ಗೆಳತಿಯರು ಹೆದರಿ ಎಸ್ಕೇಪ್ ಆಗಿರುತ್ತಾರೆ.ನಂತರ ಆಕೆ ಪ್ರೇತವಾಗಿ ಹೇಗೆ ಸೇಡು ತೀರಿಸಿಕೊಳ್ಳುತ್ತಾಳೆ ಅನ್ನೋದು ಮುಂದಿನ ಕಥೆ. ಅಲ್ಲೊಂದು ವಿಶಿಷ್ಟವಾದ ಲವ್ ಆಂಗಲ್ ಕಥೆಯನ್ನು ಹೇಳಿದರೆ ಮಜಾ ಕಡಿಮೆ. ನೋಡಿಯೇ ಅನುಭವಿಸಿ.ಒಂದೊಳ್ಳೆ ಕಥೆಯನ್ನು ಆಯ್ಕೆ ಮಾಡಿಕೊಂಡಿರುವುದಕ್ಕೆ ನಿರ್ದೇಶಕ ಕಾರ್ತಿಕ್ ಬೆನ್ನು ತಟ್ಟಲೇಬೇಕು. ಅದರಲ್ಲೂ ಚಿತ್ರ ಆರಂಭವಾಗುತ್ತಿದ್ದಂತೆ ಚಪ್ಪಾಳೆ ತಟ್ಟಿ ಬಿಡೋಣ ಎನ್ನುವಷ್ಟು ಖುಷಿಯಾಗುತ್ತದೆ. ಅದೇ ಖುಷಿಯನ್ನು ಉಳಿಸಿಕೊಳ್ಳುವಷ್ಟು ಚುರುಕುತನ ಕಾರ್ತಿಕ್ ನಂತರವೂ ಮಾಡಿಲ್ಲ.ಈಗಿನ ಟ್ರೆಂಡ್‌ನಲ್ಲಿ ಹಾಡಿಲ್ಲದೆ ಸಿನಿಮಾ ಮಾಡವುದೆಂದರೆ ಸವಾಲೇ ಸರಿ. ಆ ಸವಾಲನ್ನು ನಿರ್ದೇಶಕರು ಮೆಟ್ಟಿ ನಿಂತಿದ್ದಾರೆ. ಆದರೆ ಆ ಹಾಡಿನ ಜಾಗಕ್ಕೆ ಬೋರ್ ಹೊಡೆಸುವ ದೃಶ್ಯಗಳನ್ನು ಪೋಣಿಸಿರುವುದು ಹಾಡೇ ವಾಸಿಯಿತ್ತು ಎಂಬ ಭಾವನೆ ಬರುವಂತೆ ಮಾಡುತ್ತದೆ. ಕಾಶಿನಾಥ್ ಆಗಾಗ ಮಾಡಿದ್ದನ್ನೇ ಮಾಡುವ ಬೋಧನೆ ತಲೆ ಚಿಟ್ಟು ಹಿಡಿಸುತ್ತದೆ. ಹೀಗೆ ಅಲ್ಲಲ್ಲಿ ಪ್ರೇಕ್ಷಕರ ತಾಳ್ಮೆ ಪರೀಕ್ಷೆಗೊಳಪಡುತ್ತದೆ.ಇಷ್ಟಾದರೂ, ಹಾರರ್ ಅಂಶಗಳು ಕಡಿಮೆಯಿದ್ದರೂ, ಸಸ್ಪೆನ್ಸ್ ಕಾಪಾಡಿಕೊಂಡಿರುವುದಕ್ಕೆ ಹ್ಯಾಟ್ಸಾಫ್. ನಿರ್ದೇಶಕರಾಗಿ ಕಾರ್ತಿಕ್ ಓಕೆ. ಅವರನ್ನು ಗೆಲ್ಲಿಸುವಲ್ಲಿ ಬೆನ್ನೆಲುಬಾಗಿ ನಿಂತಿರುವುದು ರಾಜೇಶ್ ರಾಮನಾಥನ್ ಹಿನ್ನೆಲೆ ಸಂಗೀತ ಮತ್ತು ಉಮಾಪತಿ ಕತ್ತಲಿನಲ್ಲಿ ಹಿಡಿದಿರುವ ಕ್ಯಾಮರಾ.ಕಾಶಿನಾಥ್‌ರನ್ನೇ ಅನುಕರಿಸಿರುವ ಅಭಿಮನ್ಯು ಆಲಿಯಾಸ್ ಅಲೋಕ್ ಮೋಸ ಮಾಡಿಲ್ಲ. ದಿವ್ಯಾ ಶ್ರೀಧರ್ ಪ್ರೇತವಾಗಿಯೇ ಉಳಿಯಲು ಬಯಸಿದಂತಿದೆ. ಇನ್ನು ಆಗಾಗ ತೆರೆಗೆ ಬರುವ ಕಾಶಿನಾಥ್ ಬೋರ್ ಹೊಡೆಸಿದರೂ, ಗಮನ ಸೆಳೆಯುತ್ತಾರೆ.ನೀವು ಸಸ್ಪೆನ್ಸ್ ಸಿನಿಮಾ ನೋಡುವ ಕ್ಯಾಟಗರಿಯವರಾಗಿದ್ದರೆ, ಕೆಲವೊಂದು ಪ್ರಮಾದಗಳನ್ನು ಸಹಿಸಿಕೊಂಡು ಒಮ್ಮೆ ನೋಡುವ ಮನಸ್ಸು ಮಾಡಬಹುದು.