Select Your Language

Notifications

webdunia
webdunia
webdunia
webdunia

ಹೊಸ ಕವರ್‌ನಲ್ಲಿ ಹಳೇ ಗಿಮಿಕ್‌

ವಂಶಿ ಪ್ರಕಾಶ್ ನಂದಾ ಲಕ್ಷ್ಮಿ ಪುನೀತ್ ನಿಖತಾ
, ಸೋಮವಾರ, 19 ಜನವರಿ 2009 (15:41 IST)
MOKSHA
ಈ ಹಿಂದೆ ತೆರೆಯ ಮೇಲೆ ಅನೇಕ ಸಲ ಬಂದ ಕಥೆಯನ್ನೇ ಪ್ರಕಾಶ್ ತಮ್ಮ ವಂಶಿಯಲ್ಲಿ ಆರಿಸಿಕೊಳ್ಳುವ ಮೂಲಕ ಎಡವಿದ್ದಾರೆ. ಚಿತ್ರ ಸಂಪೂರ್ಣ ಹೊಸತನದಿಂದ ಕೂಡಿದೆ. ಇಲ್ಲಿ ತಾಯಿ ಮಗನ ಸೆಂಟಿಮೆಂಟನ್ನು ವಿಭಿನ್ನವಾಗಿ ತೋರಿಸಲಾಗಿದೆ ಎಂದಿದ್ದರು. ಆದರೆ ಚಿತ್ರ ನೋಡಿದಾಗ ಇತರ ಚಿತ್ರಗಳಿಗಿಂತ ಹೆಚ್ಚಿನ ವ್ಯತ್ಯಾಸವೇನು ಇಲ್ಲಿ ಕಾಣಸಿಗುವುದಿಲ್ಲ.

ತಂದೆಯಂತೆ ಮಗ ರೌಡಿಯಾಗಬಾರದೆಂದು ಕಣ್ಣಿನಲ್ಲಿ ಕಣ್ಣಿಟ್ಟು ಮಗನನ್ನು ನೋಡಿಕೊಳ್ಳುವ ತಾಯಿ, ತಾಯಿಯ ಇಚ್ಚೆಯಂತೆ ಓದಿ ಗ್ರ್ಯಾಜ್ಯುವೆಶನ್ ಮುಗಿಸಿ ಪೊಲೀಸ್ ಅಧಿಕಾರಿಯಾಗಬೇಕೆಂಬ ಕನಸು ಹೊತ್ತಿರುವ ಮಗ.

ಇನ್ನೇನು ಎಸ್ಐ ಹುದ್ದೆ ಸಿಕ್ಕಿತ್ತೆನ್ನುವಷ್ಟರಲ್ಲಿ ರೌಡಿಯ ಮಗನೆಂದು ಕೆಲಸ ನಿರಾಕರಣೆ, ತಾನು ರೌಡಿಯ ಮಗನೆಂಬ ವಿಷಯ ತಿಳಿದ ಮಗನ ಸಂಕಟ. ಮಗನಿಗೆ ತಾನು ಈವರೆಗೆ ಮುಚ್ಚಿಟ್ಟ ವಿಷಯ ಗೊತ್ತಾಯಿತ್ತಲ್ಲ ಎಂದು ಗೋಳಾಡುವ ತಾಯಿ.. ಹೀಗೆ ವಂಶಿ ಒಂದೊಂದೇ ತಿರುವುಗಳನ್ನು ಪಡೆಯುತ್ತಾ ಸಾಗುತ್ತದೆ.

ಚಿತ್ರದಲ್ಲಿ ತಮಿಳಿನ ನಂದಾ ಚಿತ್ರದ ಛಾಯೆ ಸ್ವಲ್ಪ ಎದ್ದು ಕಾಣುತ್ತದೆ. ವಂಶಿಯಲ್ಲಿ ರೌಡಿಯ ಮಗ ಸಮಾಜದ ದೃಷ್ಟಿಯಲ್ಲಿ ಮರಿ ರೌಡಿಯಾಗಿಯೇ ಕಾಣುತ್ತಾನೆ. ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಬೇಕೆಂದು ಮಗ ಬಯಸಿದರೂ ಅನಿವಾರ್ಯ ಕಾರಣಗಳಿಂದಾಗಿ ಆತ ನಾಲ್ಕಾರು ಹೆಣಗಳನ್ನು ಉರುಳಿಸಬೇಕಾಗುತ್ತದೆ.

ವಂಶಿಯಲ್ಲಿ ರೌಡಿಯಾಗಲು ಹೊರಟ ಮಗನಿಗೆ ತಾಯಿ ವಿಷ ಹಾಕುತ್ತಾಳೆ. ಆದರೆ ಮಗ ಮಾತ್ರ ಬದುಕುತ್ತಾನೆ. ಆದರೆ ನಂದಾ ಚಿತ್ರದಲ್ಲಿ ತಾಯಿಯಿಂದ ವಿಷ ಉಂಡ ಮಗ ಸಾಯುತ್ತಾನೆ.

ಪ್ರಕಾಶ್ ಯಾಕೋ ಹಳೆಯ ಕಥೆಗೆ ಪಾಲಿಶ್ ಮಾಡಿದಂತಿದೆ. ಇಂತಹ ಅನೇಕ ಚಿತ್ರಗಳಲ್ಲಿ ಶಿವರಾಜ್ ಕುಮಾರ್ ಕೂಡಾ ನಟಿಸಿದ್ದಾರೆ. ಸಿದ್ಧಸೂತ್ರಗಳಾದ ಕಾಮಿಡಿ, ಫೈಟಿಂಗ್‌ಗಳಿಗೆ ಪ್ರಕಾಶ್ ಮೊರೆ ಹೋಗಿದ್ದಾರೆ. ಚಿತ್ರದಲ್ಲಿ ಪುನೀತ್ ಅವರನ್ನು ಪೂರ್ಣ ಪ್ರಮಾಣದ ಆಕ್ಷನ್ ಹೀರೋವನ್ನಾಗಿ ಮಾಡಿದ್ದಾರೆ.

ಮಾಸ್ ಪ್ರಿಯರಿಗೆ ಭರ್ಜರಿ ಫೈಟಿಂಗ್ ದೃಶ್ಯಗಳಿವೆ. ಲಕ್ಷ್ಮಿ ಹಾಗೂ ಪುನೀತ್ ಅಭಿನಯದ ಬಗ್ಗೆ ಮಾತನಾಡುವ ಹಾಗಿಲ್ಲ. ತಾಯಿ-ಮಗನಾಗಿ ಅವರಿಬ್ಬರ ನಟನೆ ಅದ್ಭುತವಾಗಿ ಮೂಡಿಬಂದಿದೆ. ನಾಯಕಿ ನಿಖತಾ ಇನ್ನೂ ಪಳಗಬೇಕು. ಛಾಯಾಗ್ರಾಹಣ ಫೈಟಿಂಗ್ ದೃಶ್ಯಗಳಲ್ಲಿ ಚೆನ್ನಾಗಿ ಮೂಡಿ ಬಂದಿವೆ. ಚಿತ್ರದ ಕೆಲವು ಹಾಡುಗಳನ್ನು ಕೇಳಬಹುದು.

Share this Story:

Follow Webdunia kannada