ಜಗ್ಗೇಶ್ ಮತ್ತೊಮ್ಮೆ ಮಿಂಚಿದ್ದಾರೆ. ಅವರ ಅಭಿನಯದ 'ಕೋಡಗನ ಕೋಳಿ ನುಂಗಿತ್ತಾ' ಚಿತ್ರ ಕುಟುಂಬ ಸಮೇತ ನೋಡುವ ಒಂದು ಹಾಸ್ಯ ಪ್ರಧಾನವಾದ ಚಿತ್ರ. ಇಲ್ಲಿ ಜಗ್ಗೇಶ್ ಜೊತೆ ನಗುವಿನ ಹೊನಲು ಹರಿಸಲು ಶರಣ್ ಕೂಡಾ ಜತೆಯಾಗಿದ್ದಾರೆ.
ಉತ್ತಮ ನಿರೂಪಣೆಯೊಂದಿಗೆ ನಿರ್ದೇಶಕರು ಚಿತ್ರಕಥೆಯ ಮೇಲೆ ಹಿಡಿತ ಸಾಧಿಸಿದ್ದಾರೆ. ಚಿತ್ರದ ಮೊದಲಾರ್ಧ ಲವಲವಿಕೆಯಿಂದ ಕೂಡಿದರೆ ಎರಡನೇ ಭಾಗದಲ್ಲಿ ಕೆಲವು ಅನಗತ್ಯ ದೃಶ್ಯ, ಸಂಭಾಷಣೆಗಳು ಬೋರ್ ಹೊಡೆಸುತ್ತವೆ. ಕೆಲವು ದೃಶ್ಯಗಳಿಗೆ ಕತ್ತರಿ ಹಾಕುತ್ತಿದ್ದರೆ ಚಿತ್ರ ಮತ್ತಷ್ಟು ಚೆನ್ನಾಗಿ ಮೂಡಿ ಬರುತ್ತಿತ್ತು.
ತನ್ನ ಕನಸಿನ ಕನ್ಯೆಗಾಗಿ ಹುಡುಕಿ ಹುಡುಕಿ ಬೇಸತ್ತಿರುವ ಬ್ಯಾಚುಲರ್ ಬಾಲು ಆಲಿಯಾಸ್ ಬಾಲುಗೆ (ಜಗ್ಗೇಶ್) ಕೊನೆಗೆ ಲಕ್ಷ್ಮೀ (ಪೂಜಾಗಾಂಧಿ) ಸಿಗುತ್ತಾಳೆ. ಅನೇಕ ಏರು ಪೇರುಗಳ ನಂತರ ಈಕೆ ಕೂಡಾ ಬಾಲುವನ್ನು ಇಷ್ಟಪಡುತ್ತಾಳೆ. ಆದರೆ ಇವರಿಬ್ಬರ ಪ್ರೇಮದ ಮಧ್ಯೆ ಅಡ್ಡ ಗೋಡೆಯಾಗಿ ಲಕ್ಷ್ಮೀಯ ಮಾವ ಮೇಲುಕೋಟೆ (ರಂಗಾಯಣ ರಘು) ಬರುತ್ತಾನೆ.
ಈತ ತನ್ನ ಮಗ ಕೆಂಪುಕೋಟೆಗೆ ಲಕ್ಷ್ಮಿಯನ್ನು ಮದುವೆ ಮಾಡಿಸಿ ಆಕೆಯ ಹೆಸರಿನಲ್ಲಿರುವ ಅಪಾರ ಪ್ರಮಾಣದ ಆಸ್ತಿಯನ್ನು ಕೊಳ್ಳೆ ಹೊಡೆಯಬೇಕು ಎಂದು ಯೋಚಿಸಿರುತ್ತಾನೆ.
ಈ ಮದುವೆ ಪ್ರಸ್ತಾವನೆಗೆ ಲಕ್ಷ್ಮೀಯ ಅಜ್ಜ ಕೂಡಾ ಒಪ್ಪಿಗೆ ನೀಡುವುದನ್ನು ಕಂಡಾಗ ಲಕ್ಷ್ಮಿ ಬಾಲುನೊಂದಿಗೆ ಪರಾರಿಯಾಗುತ್ತಾಳೆ. ಇಲ್ಲಿನ ದೃಶ್ಯ ಹೆಚ್ಚು ಕುತೂಹಲಕಾರಿಯಾಗಿ ಮೂಡಿಬಂದಿದೆ.
ಜಗ್ಗೇಶ್ ಅಭಿನಯದಲ್ಲಿ ಎರಡು ಮಾತಿಲ್ಲ. ಅವರ ಅದ್ಬುತ ಮ್ಯಾನರಿಸಂ ಅದೇ ಡಬ್ಬಲ್ ಮೀನಿಂಗ್ ಇರುವ ಡೈಲಾಗ್ ಶೈಲಿಯಿಂದ ಪ್ರೇಕ್ಷಕರನ್ನು ರಂಜಿಸುತ್ತಾರೆ. ಇದಕ್ಕೆ ಸಾಥ್ ನೀಡಲು ಶರಣ್ರ ಕಿಲಕಿಲ ನಗುವಿದೆ. ಪೂಜಾ ಗಾಂಧಿಯ ಅಭಿನಯ ಚೆನ್ನಾಗಿ ಮೂಡಿಬಂದಿದ್ದರೂ, ಇನ್ನು ಸುಧಾರಿಸಬೇಕು. ರಂಗಾಯಣ ರಘು ತಮ್ಮ ಎಂದಿನ ಅಭಿನಯ ನೀಡಿದ್ದಾರೆ. ದಾಸರ ಸೀನು ಅವರ ಛಾಯಾಗ್ರಹಣ ಓಕೆ. ಸಾಧುಕೋಕಿಲ ಸಂಗೀತ ಪರ್ವಾಗಿಲ್ಲ.