Select Your Language

Notifications

webdunia
webdunia
webdunia
webdunia

ಹತ್ತಾರು ಚಿತ್ರಗಳ ಕಲಸು ಮೇಲೋಗರ 'ಪ್ರಿನ್ಸ್'

ಹತ್ತಾರು ಚಿತ್ರಗಳ ಕಲಸು ಮೇಲೋಗರ 'ಪ್ರಿನ್ಸ್'
PR
PR
ಒಂದೇ ಚಿತ್ರದಲ್ಲಿ ಹತ್ತಾರು ಸಿನಿಮಾಗಳ ದೃಶ್ಯಗಳನ್ನು ಸೇರಿಸುವುದರಲ್ಲಿ ನಿಸ್ಸೀಮರೆನಿಸಿರುವ ಓಂಪ್ರಕಾಶ್ ರಾವ್ ಅವರು ದರ್ಶನ್ ಅಭಿನಯದ 'ಪ್ರಿನ್ಸ್' ಚಿತ್ರದಲ್ಲೂ ಅದನ್ನೇ ಮಾಡಿದ್ದಾರೆ. 'ಕಲಾಸಿಪಾಳ್ಯ', 'ಅಯ್ಯ', 'ಮಂಡ್ಯ' ಚಿತ್ರಗಳ ನಂತರ ಮತ್ತೊಮ್ಮೆ 'ಬೆರಕೆ ಸೊಪ್ಪಿನ ಸಾರು' ಉಣಬಡಿಸಿದ್ದಾರೆ.

ನಾಲ್ಕು ವರ್ಷಗಳ ಹಿಂದೆ ತೆಲುಗಿನಲ್ಲಿ ತೆರೆ ಕಂಡಿದ್ದ 'ಶಾಕ್' ಚಿತ್ರದ ನಕಲು ಪ್ರತಿಯೇ 'ಪ್ರಿನ್ಸ್'. ಅಷ್ಟೇ ಅಲ್ಲ ಇತರ ಹದಿನೈದು ಸಿನಿಮಾಗಳ ಸನ್ನಿವೇಶಗಳನ್ನು ಕ್ರೋಡೀಕರಿಸಿ ಒಂದು ಸಿನಿಮಾ ಮಾಡುವ ಫಾರ್ಮುಲಾವನ್ನು ಇಲ್ಲಿಯೂ ಓಂಪ್ರಕಾಶ್ ನಿಯತ್ತನಿಂದ ಪಾಲಿಸಿದ್ದಾರೆ. ಒಟ್ಟಿನಲ್ಲಿ ರಿಮೇಕ್ ಆಗಬೇಕಿದ್ದ ಚಿತ್ರವೊಂದು ರಿಮಿಕ್ಸ್ ಆಗಿದೆ.

ಭಯೋತ್ಪಾದಕನೆಂದು ಶಂಕಿಸಿ ಅಮಾಯಕನೊಬ್ಬನ ಮೇಲೆ ಪೊಲೀಸರು ಗುಂಡು ಹಾರಿಸಿ ಅದರಿಂದ ಪಾರಾಗಲು ಅವರು ಮತ್ತಷ್ಟು ತಪ್ಪುಗಳನ್ನು ಮಾಡುವ ಕಥೆಗೆ ಪ್ರೀತಿ, ಹೊಡೆದಾಟ ಸನ್ನಿವೇಶಗಳ ತೇಪೆ ಹಾಕಲಾಗಿದೆ. ಚಿತ್ರದ ಶೀರ್ಷಿಕೆಗೂ ಕಥೆಗೂ ಯಾವ ಸಂಬಂಧವೂ ಇಲ್ಲ.

ದರ್ಶನ್ ಇದ್ದಾರೆಂಬ ಕಾರಣಕ್ಕೆ ಹೊಡೆದಾಟಗಳನ್ನು ಬಲವಂತವಾಗಿ ತುರುಕಿದಂತಿದೆ. ನಿರ್ದೇಶಕರು ತಮ್ಮ ಪ್ರತಿಭೆಯನ್ನೇ ಸದುಪಯೋಗಪಡಿಸಿಕೊಳ್ಳುವಲ್ಲಿ ವಿಫಲರಾಗಿರುವುದು ಚಿತ್ರದಲ್ಲಿ ಎದ್ದು ಕಾಣುತ್ತದೆ. ನಾಯಕ ನಟ ದರ್ಶನ್ ಅವರ ಅಭಿನಯ ಮತ್ತು ಹೊಡೆದಾಟಗಳೇ ಚಿತ್ರವನ್ನು ಪೂರ್ತಿಯಾಗಿ ಆವರಿಸಿದ್ದು ಇದು ದರ್ಶನ್ ಅಭಿಮಾನಿಗಳಿಗಷ್ಟೇ ಹಿಡೀಸೀತು.

ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು ಅಭಿನಯ ಸಾಮರ್ಥ್ಯದ ಬದಲು ಮೈಮಾಟ ಪ್ರದರ್ಶನಕ್ಕೇ ಅವರು ಆದ್ಯತೆ ನೀಡಿದಂತಿದೆ. ಹಿನ್ನೆಲೆ ಸಂಗೀತದ ಬಗ್ಗೆ ಹೇಳದಿರುವುದೇ ಒಳಿತು. ವೀನಸ್ಮೂರ್ತಿ ಛಾಯಾಗ್ರಹಣ ಪರವಾಗಿಲ್ಲ. ಸಾಹಸ ದೃಶ್ಯಗಳಲ್ಲಿ ಪಳನಿರಾಜ್ ಮತ್ತು ರವಿ ವರ್ಮ ನಿರ್ದೇಶನ ಎದ್ದು ಕಾಣುತ್ತದೆ.

ತಾರಾಬಳಗದಲ್ಲಿ ಅವಿನಾಶ್, ಶೋಭರಾಜ್ , ಆದಿಲೋಕೇಶ್, ಸಿಹಿಕಹಿ ಚಂದ್ರು, ರಂಗಾಯಣ ರಘು, ಶೇಖರ ಕೋಟ್ಯಾನ್ ಮುಂತಾದವರಿದ್ದಾರಾದರೂ ಎಲ್ಲರೂ ಆಟಕ್ಕುಂಟು ಲೆಕ್ಕಕ್ಕಿಲ್ಲ. ತೆರೆಯ ತುಂಬ ನಾಯಕನ ದರ್ಶನವೇ ಅತಿಯಾಗಿದೆ.

Share this Story:

Follow Webdunia kannada