Select Your Language

Notifications

webdunia
webdunia
webdunia
webdunia

ಸೂತ್ರ ತಪ್ಪಿದ ಸರ್ಕಸ್

ಗಣೇಶ್
MOKSHENDRA
ಚಿತ್ರ: ಸರ್ಕಸ್
ನಿರ್ದೇಶನ: ದಯಾಳ್ ಪದ್ಮನಾಭ್
ತಾರಾಗಣ: ಗಣೇಶ್, ಅರ್ಚನಾ ಗುಪ್ತ, ಸಾಧುಕೋಕಿಲಾ, ರೇಖಾದಾಸ್

ಗಣೇಶ್ ಅಭಿನಯದ ಅದ್ದೂರಿ ಬಜೆಟ್ ಚಿತ್ರ 'ಸರ್ಕಸ್' ನೀರೀಕ್ಷಿತ ಮಟ್ಟದಲ್ಲಿ ಮೂಡಿ ಬಂದಿಲ್ಲ. ಕಥೆಯ ಆಯ್ಕೆಯಲ್ಲಿ ಗಣೇಶ್ ಹೊಸತನ ತೋರಿದ್ದಾರೆ ಎಂಬ ಅಂಶವೊಂದನ್ನು ಬಿಟ್ಟರೆ ಚಿತ್ರದಲ್ಲಿ ಹೇಳುವಂತಹ ಹೊಸ ತಿರುವು ಎದ್ದು ಕಾಣುವುದಿಲ್ಲ.

ನಿರ್ದೇಶಕ ದಯಾಳ್ ಮೊದಲ ಬಾರಿಗೆ ನಿರ್ದೇಶನ ಮಾಡಿದ್ದರಿಂದ ನಿರೂಪಣೆಯಲ್ಲಿ ಸ್ವಲ್ಪ ಎಡವಿದ್ದಾರೆ. ಒಂದು ಸಣ್ಣ ಎಳೆಯನ್ನು ಹಿಡಿದು ಎರಡೂವರೆ ಗಂಟೆ ಎಳೆದಿದ್ದಾರೆ.

ಧನುಶ್ (ಗಣೇಶ್) ಸ್ನೇಹಿತರು ರೈಲನ್ನು ಬ್ಲಾಸ್ಟ್ ಮಾಡುತ್ತೇವೆ ಎಂದು ರೈಲ್ವೆ ಇಲಾಖೆಗೆ ಹುಸಿ ಬಾಂಬ್ ಬೆದರಿಕೆ ಪತ್ರ ಬರೆಯುತ್ತಾರೆ. ಆದರೆ ಕಾಗದದ ಹಿಂದೆ ಧನುಶ್ ವಿಳಾಸ ಬರೆದಿರುತ್ತಾರೆ. ಇದು ಧನುಶ್ ಹಾಗೂ ಸಂಗಡಿಗರನ್ನು ಸಂಕಷ್ಟಕ್ಕೆ ಸಿಲುಕಿಸುತ್ತದೆ. ಅವರು ಆ ಪತ್ರವನ್ನು ಮತ್ತೆ ವಾಪಸ್ ಪಡೆಯಲು ಪ್ರಯತ್ನಿಸುತ್ತಾರೆ. ಈ ಸಂದರ್ಭದಲ್ಲಿ ನಿಜವಾಗಿಯೂ ರೈಲಿನಲ್ಲಿ ಉಗ್ರಗಾಮಿಗಳು ಬಾಂಬ್ ಇಟ್ಟಿರುವ ಅಂಶ ಧನುಶ್‌ಗೆ ಗೊತ್ತಾಗಿ ಅದನ್ನು ತಪ್ಪಿಸಲು ಪ್ರಯತ್ನಿಸುವ ಒಂದು ಸಿಂಪಲ್ ಸ್ಟೋರಿಯನ್ನು ಚಿತ್ರ ಒಳಗೊಂಡಿದೆ.

ಇದೊಂದು ಸಸ್ಪೆನ್ಸ್ ಚಿತ್ರ ಎಂದು ನಿರ್ದೇಶಕರು ಹೇಳಿದ್ದರೂ ಪ್ರೇಕ್ಷಕರಿಗೆ ಆ ರೀತಿ ಫೀಲ್ ಉಂಟಾಗಿಸುವಲ್ಲಿ ನಿರ್ದೇಶಕರು ವಿಫಲರಾಗಿದ್ದಾರೆ ಎಂದರೆ ಬೇಜಾರು ಮಾಡಿಕೊಳ್ಳಬಾರದು.

ಇಲ್ಲಿ ಗಣೇಶ್ ತಮ್ಮ ಹಿಂದಿನ ಶೈಲಿಯಿಂದ ಹೊರ ಬಂದಿದ್ದಾರೆ. ಅವರ ಡೈಲಾಗ್ ಕೇಳಲು ಬಂದವರಿಗೆ ಇಲ್ಲಿ ನಿರಾಸೆಯಾಗುತ್ತದೆ. ಪ್ರೀತಿಗಾಗಿ ಹುಡುಗಿಯ ಹಿಂದೆ ಬೀಳುತ್ತಿದ್ದ ಗಣೇಶ್, ಇಲ್ಲಿ ಮೆಚುರ್ಡ್ ಆಗಿದ್ದಾರೆ. 'ಪ್ರೀತಿ ಮಾಡೋ' ಎಂದು ಹುಡುಗಿ ಕಾಡಿದರೂ ಒಪ್ಪಿಕೊಳ್ಳುವುದಿಲ್ಲ. ಅನಾವಶ್ಯಕವಾಗಿ ಹೀರೋಯಿಸಂ ತೋರಿಸುವುದಿಲ್ಲ. ಗಣೇಶ್ ಇಲ್ಲಿ ರೈಲಿನಡಿ ರಿಸ್ಕಿ ಸಾಹಸ ಮಾಡಿದ್ದಾರೆ. ಅವರ ಅಭಿನಯಕ್ಕೆ ನೋ ಕಾಮೆಂಟ್. ಹಾಗಾಂತ ಚಿತ್ರ ಪಕ್ಕಾ ಎನ್ನುವಂತಿಲ್ಲ.

ಚಿತ್ರದಲ್ಲಿ ಯಾವುದೇ ಡೈಲಾಗ್, ಹಾಡು ಅಥವಾ ಸನ್ನಿವೇಶ ಮನಸ್ಸಿಗೆ ನಾಟುವುದಿಲ್ಲ. ಕೆಲವು ಅರ್ಥವಿಲ್ಲದ ದೃಶ್ಯಗಳನ್ನು ದಯಾಳ್ ಸೇರಿಸಿದ್ದಾರೆ. ಉದಾಹರಣೆಗೆ ಗಣೇಶ್ ಸ್ನೇಹಿತ ರೈಲಿನಡಿ ಬೀಳಲು ರೈಲಿನೆದುರು ನಡೆದುಕೊಂಡು ಹೋಗುತ್ತಾನೆ. ಅಲ್ಲೆಲ್ಲೂ ಗಣೇಶ್ ಇರುವುದಿಲ್ಲ. ಆದರೆ ಆತನನ್ನು ಗಣೇಶ್ ಹಳಿಯಿಂದ ಎಳೆದಿರುತ್ತಾರೆ. ಹೇಗೆ ಎಂಬುದು ನಿರ್ದೇಶಕರಿಗೆ ಹಾಗೂ ಗಣೇಶ್‌ಗೆ ಮಾತ್ರ ಗೊತ್ತು. ಸುಖಾಸುಮ್ಮನೆ ಗಣೇಶ್ ಕೈಲಿ ಫೈಟ್ ಮಾಡಿಸಿದ್ದಾರೆ. ನಾಯಕಿ ಅರ್ಚನಾ ಗುಪ್ತಾಗೆ ಇಲ್ಲಿ ಹೆಚ್ಚು ಕೆಲಸವಿಲ್ಲ.

ದಯಾಳ್ ತಮ್ಮ ಸ್ನೇಹಿತರಿಗಾಗಿ ಕೆಲವು ಪಾತ್ರ ಹಾಗೂ ದೃಶ್ಯಗಳನ್ನು ಅನಾವಶ್ಯಕವಾಗಿ ಸೃಷ್ಟಿ ಮಾಡಿ ಅವರ ಮುಖವನ್ನು ಪರದೆಯಲ್ಲಿ ಸರ್ಕಸ್ ಮಾಡಿಸಿದ್ದಾರೆ. ಎಮಿಲ್ ಸಂಗೀತ ವರ್ಕ್ಓಟ್ ಆಗಿಲ್ಲ. ಜೀವ ಹೂವಾಗಿದೆ... ಹಾಡೊಂದು ಮಾತ್ರ ಕೇಳುವಂತಿದೆ. ಶೇಖರ್ಚಂದ್ರ ಕ್ಯಾಮರಾ ಕುಸುರಿ ಚೆನ್ನಾಗಿ ಮೂಡಿಬಂದಿದೆ. ದಯಾಳ್ ನಿರ್ದೇಶನದಲ್ಲಿ ಇನ್ನಷ್ಟು ಪಳಗಬೇಕಿದೆ. ಈ ಚಿತ್ರ ಗಣೇಶ್‌ಗೆ ಮತ್ತೆ 'ಮುಂಗಾರು ಮಳೆ' ಪಟ್ಟ ತಂದು ಕೊಟ್ಟರೆ ಅದು ಅವರ ಅದೃಷ್ಟ. ಅಷ್ಟೆ


Share this Story:

Follow Webdunia kannada