ಸಂಸಾರದಲ್ಲಿ ಗೋಲ್‌ಮಾಲ್ ವಿಮರ್ಶೆ: ನಗದೆ ಸುಸ್ತಾಗುವ ಪ್ರೇಕ್ಷಕ
ಚಿತ್ರ: ಸಂಸಾರದಲ್ಲಿ ಗೋಲ್ಮಾಲ್ತಾರಾಗಣ: ಅನು ಪ್ರಭಾಕರ್, ಮೋಹನ್, ಉಮಾಶ್ರೀ, ಶೋಭರಾಜ್, ತಾರಾ, ಸಿಹಿಕಹಿ ಚಂದ್ರುನಿರ್ದೇಶನ: ಓಂ ಸಾಯಿಪ್ರಕಾಶ್ಸಂಗೀತ: ಸಾಧು ಕೋಕಿಲಾ'
ಸಂಸಾರದಲ್ಲಿ ಗೋಲ್‌ಮಾಲ್' ಹೆಸರೇ ಹೇಳುವಂತೆ ಸಂಸಾರದಲ್ಲಿ ನಡೆಯುವ ಘಟನೆಗಳನ್ನೇ ಮುಂದಿಟ್ಟುಕೊಂಡು ಹೆಣೆಯಲಾಗಿರುವ ಹಾಸ್ಯ ಚಿತ್ರ. ಇಂತಹ ಕೌಟುಂಬಿಕ ಕಥೆಗಳು ನಿರ್ದೇಶಕ ಓಂ ಸಾಯಿ ಪ್ರಕಾಶ್ ಅವರಿಗೆ ಹೊಸತೇನಲ್ಲ. ಆದರೆ ಅವರು ಇದುವರೆಗೆ ಮಾಡಿದ್ದು ಅಳಿಸುವ ಕೆಲಸ, ಈ ಬಾರಿ ಅದೇ ಕುಟುಂಬಗಳನ್ನಿಟ್ಟುಕೊಂಡು ನಗಿಸಲು ಯತ್ನಿಸಿದ್ದಾರೆ.ಕೃಷ್ಣಾ ಅಪಾರ್ಟ್‌ಮೆಂಟ್‌ನ ನಾಲ್ಕು ಕುಟುಂಬಗಳ ನಡುವಿನ ಕಥೆಯೇ ಸಂಸಾರದಲ್ಲಿ ಗೋಲ್‌ಮಾಲ್. ಮೋಹನ್-ಅನುಪ್ರಭಾಕರ್, ಸಿಹಿಕಹಿ ಚಂದ್ರು-ತಾರಾ, ಸಾಧು ಕೋಕಿಲಾ-ನಯನಾ ಕೃಷ್ಣ, ತಬಲಾ ನಾಣಿ-ಲಕ್ಷ್ಮಿ ಭಾಗವತರ್ ಎಂಬ ನಾಲ್ಕು ಜೋಡಿಗಳು ಇಲ್ಲಿರುತ್ತವೆ. ಉಮಾಶ್ರೀ ಈ ಅಪಾರ್ಟ್‌ಮೆಂಟ್‌ನ ಕೆಲಸದಾಳು.ಗಂಡಂದಿರಿಗೊಂದು ಕಾಲವಾದರೆ ಹೆಂಡತಿಯರಿಗೆ ಇನ್ನೊಂದು ಕಾಲ ಎನ್ನುವುದನ್ನು ನಿಜ ಮಾಡಲು ಸಹಕರಿಸುವವಳೇ ಚೆನ್ನಿ (ಉಮಾಶ್ರೀ). ಅಲ್ಲಿ ಪುರುಷ ದೌರ್ಜನ್ಯ ಅಂತ್ಯವಾಗುತ್ತದೆ. ಮಹಿಳೆಯರ ದಬ್ಬಾಳಿಕೆ ಶುರುವಾಗುತ್ತದೆ. ಇನ್ನು ಸಹಿಸುವುದು ಸಾಧ್ಯವೇ ಇಲ್ಲ ಎಂದಾಗ ಗಂಡಂದಿರು ವಿವಾಹ ವಿಚ್ಛೇದನ ಬೇಕೆಂದು ಕೋರ್ಟ್ ಮೊರೆ ಹೋಗುತ್ತಾರೆ.ಆದರೆ ಅಲ್ಲೂ ಆಘಾತ. ಕ್ರಿಮಿನಲ್ ಲಾಯರ್ ಸಾಯಿಕುಮಾರ್ ಉದ್ದುದ್ದ ಡೈಲಾಗ್ ಹೊಡೆಯುತ್ತಾರೆ. ಕುಟುಂಬಕ್ಕಾಗಿ ಮಹಿಳೆ ಎಷ್ಟು ತ್ಯಾಗ ಮಾಡುತ್ತಾಳೆ ಎಂಬುದನ್ನು ಮನದಟ್ಟು ಮಾಡುತ್ತಾರೆ. ಇದು ಚಿತ್ರದ ಒಟ್ಟು ಕಥೆ. ಹಾಸ್ಯ ಚಿತ್ರವೆಂದ ಮೇಲೆ ಅಲ್ಲಿ ಕಥೆ ಬೇಕಿಲ್ಲ, ಸನ್ನಿವೇಶಗಳು ಚಕಚಕ ಅಂತ ಮುಂದಕ್ಕೆ ಹೋಗುತ್ತಿರಬೇಕು. ಪ್ರೇಕ್ಷಕರು ನಕ್ಕು ನಲಿಯುತ್ತಿರಬೇಕು.ಆದರೆ ಇವಿಷ್ಟೂ ಸಾಯಿಪ್ರಕಾಶ್ ನಿರ್ದೇಶಿಸಿರುವ ಚಿತ್ರದಲ್ಲಿ ಕಾಣುತ್ತಿಲ್ಲ. ದಾಸರಿ ನಾರಾಯಣ ರಾವ್ ಅವರ 'ಆದಿವರಂ ಅಡವಲಕು ಸೆಲವು' ರಿಮೇಕ್ ಆದರೂ, ನಗಿಸುವ ಕಲೆ ಕಣ್ಣೀರ ಕಥೆಗಳ ಸರದಾರನಿಗೆ ಸಿದ್ಧಿಸಿಲ್ಲ. ಹಾಗಾಗಿ ಪ್ರೇಕ್ಷಕರು ಅಲ್ಲಲ್ಲಿ ಆಕಳಿಸುತ್ತಾರೆ. ಮೈ ನೆಟಿಗೆ ತೆಗೆಯುತ್ತಾರೆ.ಉಮಾಶ್ರೀ ಮತ್ತೆ ಮತ್ತೆ ಮಿಂಚಿದ್ದಾರೆ. ಅಪಾರ್ಟ್‌ಮೆಂಟ್ ಸಂಸಾರಿಗಳಾಗಿ ಕಾಣಿಸಿಕೊಂಡ ನಾಲ್ಕೂ ಜೋಡಿಯೂ ಪಾತ್ರಕ್ಕೆ ನ್ಯಾಯ ಸಲ್ಲಿಸಿವೆ. ಹೇಳಿ ಮಾಡಿಸಿದ ಪಾತ್ರದಲ್ಲಿ ಕಾಣಿಸಿಕೊಂಡು ಸಾಯಿಕುಮಾರ್ ಗಮನ ಸೆಳೆಯುತ್ತಾರೆ.ಸಂಗೀತ, ಛಾಯಾಗ್ರಹಣ ಗಮನ ಸೆಳೆಯುವುದಿಲ್ಲ. ಸಾಯಿಪ್ರಕಾಶ್ ಹಿಂದಿನ ಚಿತ್ರಗಳಂತೆ ಇದೂ ತಾಂತ್ರಿಕವಾಗಿ ತುಂಬಾ ಹಿಂದಿದೆ.