ಚಿತ್ರ: ಶಕ್ತಿ
ತಾರಾಗಣ: ಮಾಲಾಶ್ರೀ, ಅವಿನಾಶ್, ಕಿರಣ್, ರಾಧಿಕಾ ಗಾಂಧಿ, ಆಶಿಶ್ ವಿದ್ಯಾರ್ಥಿ, ಸಾಧು ಕೋಕಿಲಾ
ನಿರ್ದೇಶನ: ಅನಿಲ್ ಕುಮಾರ್
ಸಂಗೀತ: ವರ್ಧನ್
ಹಳೆಯ ನೆನಪುಗಳನ್ನು ಮರೆಸುವ ಯತ್ನದ ಸಾಲಿನಲ್ಲಿ ಬಂದಿರುವ ಮಾಲಾಶ್ರೀ ಇನ್ನೊಂದು ಚಿತ್ರ 'ಶಕ್ತಿ'. ಹೆಸರೇ ಹೇಳುವಂತೆ ಇಲ್ಲಿ ಶಕ್ತಿಯೇ ಮೇಲುಗೈ. ಚಿತ್ರದುದ್ದಕ್ಕೂ ಹೊಡೆ-ಬಡಿ-ಕಡಿಯೇ ತುಂಬಿಕೊಂಡಿದೆ. ಕನ್ನಡದಲ್ಲಿ ಇಂತಹದ್ದೊಂದು ಚಿತ್ರ ಈ ಹಿಂದೆ ಬಂದೇ ಇಲ್ಲ ಎಂದು ಹೇಳಬಹುದಾದಷ್ಟು ಪವರ್ ಮಾಲಾಶ್ರೀ ನರನಾಡಿಗಳಲ್ಲಿ ಹರಿದಂತಿದೆ. ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿಇಲ್ಲಿ ಮಾಲಾಶ್ರೀ ಹೆಸರು ಶಕ್ತಿ. ಅಂಜನಪ್ಪನ ಮನೆಗೆ ಕೆಲಸಕ್ಕೆಂದು ಬಂದಾಕೆ ನಿಜಕ್ಕೂ ಶಕ್ತಿಯಾಗುತ್ತಾಳೆ. ನೋಡನೋಡುತ್ತಿದ್ದಂತೆ ಉತ್ತುಂಗಕ್ಕೇರುತ್ತಾಳೆ. ಈ ನಡುವೆ ಅಂಜನಪ್ಪನ ಪುತ್ರಿ ಸ್ವಾತಿ (ರಾಧಿಕಾ ಗಾಂಧಿ) ಮತ್ತು ವಿಜಯ್ (ಕಿರಣ್) ಪ್ರೇಮ ಪ್ರಸಂಗ ತಾರಕಕ್ಕೇರುತ್ತದೆ. ಶಕ್ತಿ ಪ್ರೇಮಿಗಳ ಪರ ನಿಲ್ಲುತ್ತಾಳೆ.ದುಷ್ಟ ಶಿಕ್ಷಕಿಯಾಗುವ ಶಕ್ತಿ ಅಪಘಾತಕ್ಕೀಡಾಗಿ ಆಸ್ಪತ್ರೆ ಸೇರುತ್ತಾಳೆ. ಅಲ್ಲಿಂದ ಫ್ಲಾಶ್ ಬ್ಯಾಕ್. ಶಕ್ತಿ ಯಾರು ಅನ್ನೋದರ ಪರಿಚಯ ಶುರು. ಆಕೆ ಚಾಮುಂಡಿ - ಐಪಿಎಸ್ ಅಧಿಕಾರಿ. ಮಕ್ಕಳ ಸಾವಿಗೆ ಸಚಿವರನ್ನೇ ಕಂಬಿಗಳ ಹಿಂದೆ ನಿಲ್ಲಿಸಿದ ಧೀರೆ. ಅಂದ ಮೇಲೆ ಹೊಡೆದಾಟ ನಿರೀಕ್ಷಿತ. ಇಲ್ಲಿ ಚಾಮುಂಡಿಯ ತಲೆ ಕೆಡುವಷ್ಟು ಪೆಟ್ಟಾಗುತ್ತದೆ. ಹಳೆಯದನ್ನು ಮರೆಯುತ್ತಾಳೆ. ಆದರೂ ಶಕ್ತಿ ಹಾಗೆಯೇ ಇರುತ್ತದೆ. ಹಾಗಿದ್ದವಳು ಅಂಜನಪ್ಪನ ಮನೆ ಸೇರಿರುತ್ತಾಳೆ.ಮತ್ತೆ ಆಕ್ಷನ್ ಪಂಚಕಜ್ಜಾಯ. ಆಸ್ಪತ್ರೆಯಿಂದಲೇ ಹೊಡೆದಾಟ ಶುರು. ಈ ಹೊತ್ತಿಗೆ ಹಳೆಯ ನೆನಪು ಮರು ಕಳಿಸಿರುವುದರಿಂದ ಡಬ್ಬಲ್ ಧಮಾಕಾ. ಲೆಕ್ಕವಿಲ್ಲದಷ್ಟು ತಲೆಗಳು ಉರುಳುತ್ತವೆ. ರಕ್ತದ ಕೋಡಿಯೇ ಹರಿಯುತ್ತದೆ.ಮಾಲಾಶ್ರೀ ಚಿತ್ರಗಳೆಂದರೆ ಅಲ್ಲಿ ಸೇಡು ಪ್ರಮುಖ ಅನ್ನೋದು ಥಿಯೇಟರಿಗೆ ಹೋಗುವ ಪ್ರೇಕ್ಷಕರಿಗೆ ಗೊತ್ತೇ ಇರುತ್ತದೆ. ಆ ವೃತ್ತದಿಂದ ಮಾಲಾಶ್ರೀಯನ್ನು ಹೊರಗೆ ತರಲು ನಿರ್ದೇಶಕ ಅನಿಲ್ ಕುಮಾರ್ ಯತ್ನಿಸಿಲ್ಲ. ಆದರೂ ಚಿತ್ರ ಎಲ್ಲೂ ಬೋರ್ ಹೊಡೆಯುವುದಿಲ್ಲ. ಆ ಮಟ್ಟಿಗೆ ಅನಿಲ್ ಕುಮಾರ್ ಮೆಚ್ಚುಗೆಗೆ ಪಾತ್ರರಾಗುತ್ತಾರೆ.ದರ್ಶನ್ 'ಸಾರಥಿ'ಯ ಪಡಿಯಚ್ಚಿನಂತಿದೆಯಲ್ಲ ಅಂತ ಅಚ್ಚರಿಗೊಳ್ಳುವ ರೀತಿಯಲ್ಲಿದೆ ಕಥೆ. ಪ್ರತಿ ಹಂತದಲ್ಲೂ ಅದರ ಛಾಯೆ ಎದ್ದು ಕಾಣುತ್ತದೆ. ಈ ಹಿಂದೆ 'ಕಿರಣ್ ಬೇಡಿ'ಯಲ್ಲೂ ಹೀಗೆಯೇ ಆಗಿತ್ತು. 'ವೀರ ಮದಕರಿ'ಯ ಮಹಿಳಾವತಾರದ ದರ್ಶನ ಅದರಲ್ಲಿತ್ತು. ಈ ಬಾರಿಯೂ ಅದೇ ನಡೆದಿದೆಯೇ? ನಿರ್ದೇಶಕರು ಸಾರಥಿಯನ್ನೇ ಕಾಪಿ ಮಾಡಿದರೇ ಅಥವಾ ಕಾಕತಾಳೀಯವೇ ಅನ್ನೋದು ಅವರ ಬಾಯಿಯಿಂದಲೇ ಹೊರಗೆ ಬರಬೇಕು. ದುರ್ಗಿ, ಚಾಮುಂಡಿ, ಕಿರಣ್ ಬೇಡಿಯ ನಂತರ ಶಕ್ತಿಯಲ್ಲೂ ಮಾಲಾಶ್ರೀ ಸಹ್ಯ. ಯಾವುದೇ ಆಕ್ಷನ್ ಹೀರೋಗಳಿಗೆ ಕಡಿಮೆಯಿಲ್ಲದಂತೆ 'ಹೋರಾಡಿದ್ದಾರೆ'. ನಿರ್ಮಾಪಕ ರಾಮು ಆಶಯವೋ ಏನೋ, ರಕ್ತದ ಕೋಡಿಯೇ ತೆರೆಯಲ್ಲಿ ಹರಿಯುತ್ತದೆ. ಲಾಜಿಕ್ ಇಲ್ಲದ ಪ್ರೇಕ್ಷಕರಿಗೆ ಮತ್ತು ತಾಂತ್ರಿಕವಾಗಿ ಚಿತ್ರ ಸೂಪರ್. ಚಿತ್ರದುದ್ದಕ್ಕೂ ಕರ್ಕಶವೆನಿಸುವ ಸದ್ದು, ಎಲ್ಲಾ ಪಾತ್ರಗಳೂ ಕಿರುಚುವುದು ಅತಿರೇಕ. ಇವೆಲ್ಲದರ ಹೊರತಾಗಿಯೂ ಥಿಯೇಟರಿನಲ್ಲಿರುವ ಅಷ್ಟೂ ಹೊತ್ತು ಬೋರ್ ಹೊಡೆಸುವ ಸಿನಿಮಾ ಇದಲ್ಲ. ಮಾಲಾಶ್ರೀ ಬ್ರಾಂಡ್‌ನ ಶಕ್ತಿ ಸೂಪರ್ ಪವರಿನೊಂದಿಗೆ ಬಂದಿರುವುದರಿಂದ, ಚಿತ್ರಮಂದಿರದತ್ತ ವಾರಾಂತ್ಯಕ್ಕೆ ಹೋಗಲು ಯಾವುದೇ ಅಭ್ಯಂತರವಿಲ್ಲ.ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!