Select Your Language

Notifications

webdunia
webdunia
webdunia
webdunia

ವಿಷ್ಣುವರ್ಧನ ಚಿತ್ರವಿಮರ್ಶೆ; ಸಕಲಕಲಾವಲ್ಲಭ ಸುದೀಪ್

ಓನ್ಲಿ ವಿಷ್ಣುವರ್ಧನ ಚಿತ್ರವಿಮರ್ಶೆ
ಚಿತ್ರ: ಓನ್ಲಿ ವಿಷ್ಣುವರ್ಧನ
ತಾರಾಗಣ: ಸುದೀಪ್, ಭಾವನಾ, ಪ್ರಿಯಾಮಣಿ, ಸೋನು ಸೂದ್, ಅರುಣ್ ಕುಮಾರ್
ನಿರ್ದೇಶನ: ವಿ. ಕುಮಾರ್
ಸಂಗೀತ: ಹರಿಕೃಷ್ಣ
SUJENDRA

'ಆಪ್ತಮಿತ್ರ'ದ ನಂತರ ಇನ್ನೊಂದು ಚಿತ್ರ ನಿರ್ಮಾಣಕ್ಕೆ ಹಿಂದೆ ಮುಂದೆ ನೋಡುತ್ತಿದ್ದ ಕುಳ್ಳ ದ್ವಾರಕೀಶ್ ಮತ್ತೆ ನಗೆ ಬೀರಿದ್ದಾರೆ. ಈ ಬಾರಿ ಮತ್ತೆ ಅವರ ಜೇಬು ತುಂಬುವುದು ಖಚಿತ. ಅಂತಹದ್ದೊಂದು ಕಂಪ್ಲೀಟ್ ಮನರಂಜನೆಯ ಚಿತ್ರವನ್ನು ಕನ್ನಡ ಪ್ರೇಕ್ಷಕರಿಗೆ ಅರ್ಪಿಸಿದ್ದಾರೆ. ಹಾಗೆಂದು ಅದ್ಭುತ ಎಂದು ಹೇಳಲಾಗದು. ಮನರಂಜನೆಯನ್ನೇ ಗುರಿಯಾಗಿಟ್ಟುಕೊಂಡಿದ್ದಾರೆಯೇ ಹೊರತು ಬೇರೇನೂ ಇಲ್ಲಿ ಸಿಗೋದಿಲ್ಲ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಲಾಂಡ್ರಿ ಮಾಲಕ ಪುಟ್ಟಯ್ಯನ ಮಗ ವಿಷ್ಣು (ಸುದೀಪ್) ಏನೇನೋ ಆಗಬೇಕೆಂದು ಕನಸು ಕಂಡವನು. ಹೀಗಿದ್ದವನಿಗೆ ಡಾನ್ ಆದಿಶೇಷನ (ಸೋನು ಸೂದ್) ಕಳೆದು ಹೋದ ಮೊಬೈಲ್ ವಿಷ್ಣುವಿಗೆ ಸಿಗುತ್ತದೆ. ಅದೇ ಮೊಬೈಲಿನಿಂದ ಆದಿಶೇಷ ಡೀಲುಗಳನ್ನು ಕುದುರಿಸುತ್ತಿದ್ದ. ವಿಷ್ಣು ಪಾಲಿಗದು ಕಲ್ಪವೃಕ್ಷವಾಗುತ್ತದೆ. ಕೋಟಿ ಕೋಟಿ ಸಂಪಾದಿಸುತ್ತಾನೆ.

ಅತ್ತ ಮೊಬೈಲು ಕಳೆದುಕೊಂಡ ಆದಿಶೇಷನದ್ದು ಅಂಡು ಸುಟ್ಟ ಬೆಕ್ಕಿನ ಸ್ಥಿತಿ. ಕಾರಣ, ಅದರಲ್ಲಿದ್ದ ಸರಕುಗಳು. ಆದರೆ ವಿಷ್ಣುವನ್ನು ಪತ್ತೆ ಮಾಡಲೇಬೇಕು ಅಂತ ಆದಿಶೇಷ ಏನೇ ಮಾಡಿದರೂ ಪ್ರತಿಬಾರಿಯೂ ವಿಫಲನಾಗುತ್ತಿದ್ದ.

ಈ ನಡುವೆ ಭಾರತಿ (ಭಾವನಾ) ಮತ್ತು ವಿಷ್ಣು ನಡುವೆ ಪ್ರೇಮಾಂಕುರವಾಗುತ್ತದೆ. ಏನೇನೋ ಸುಳ್ಳುಗಳನ್ನು ಹೇಳಿ ಭಾರತಿಯನ್ನು 'ರೈಲು' ಹತ್ತಿಸುತ್ತಾನೆ. ಇಷ್ಟಾಗುತ್ತಿದ್ದಂತೆ ಮೀರಾ (ಪ್ರಿಯಾಮಣಿ) ಕಾಡಲಾರಂಭಿಸುತ್ತಾಳೆ. ಆದಿಶೇಷನನ್ನು ಒಂದೇ ದಿನದಲ್ಲಿ ಮುಗಿಸಬೇಕು ಅಂತ ಬ್ಲ್ಯಾಕ್‌ಮೇಲ್ ಮಾಡುತ್ತಾಳೆ. ಇದರ ಹಿಂದಿರುವುದು ನೋವಿನ ಕಥೆ. ಅದು ಎಸಿಪಿಯೊಬ್ಬನಿಂದ ಆದಿಶೇಷ ಮೀರಾಳನ್ನು ಅತ್ಯಾಚಾರ ಮಾಡಿಸಿರುವುದು.

ಹೀಗೆ 'ಓನ್ಲಿ ವಿಷ್ಣುವರ್ಧನ'ನ ಕಥೆ ಹಲವು ತಿರುವುಗಳನ್ನು ಪಡೆದುಕೊಂಡು ಮುಂದಕ್ಕೆ ಹೋಗುತ್ತದೆ. ಆದಿಶೇಷನ ಕಥೆ ಕೊನೆಗೆ ಏನಾಗುತ್ತದೆ ಅನ್ನೋದು ನಿರೀಕ್ಷೆ ಮಾಡಲಾಗದ ಸಂಗತಿಯೇನಲ್ಲ. ಹಾಗಿದ್ದರೂ ಚಿತ್ರಮಂದಿರದತ್ತ ಹೋದರೆ ನಷ್ಟವೇನಿಲ್ಲ. ಅಷ್ಟೊಂದು ಅಚ್ಚರಿಗಳನ್ನು ನಿರ್ದೇಶಕ ಪಿ. ಕುಮಾರ್ ಕಟ್ಟಿಕೊಟ್ಟಿದ್ದಾರೆ.

'ಓನ್ಲಿ ವಿಷ್ಣುವರ್ಧನ' ಒಂಥರಾ ಫ್ಯಾಮಿಲಿ ಪ್ಯಾಕೇಜ್. ಕುಟುಂಬ ಸಮೇತರಾಗಿ ಎಂಜಾಯ್ ಮಾಡಬಹುದಾದ ಎಲ್ಲಾ ಸರಕುಗಳೂ ಇಲ್ಲಿವೆ. ಅಲ್ಲಿಂದ ಇಲ್ಲಿಂದ ಎತ್ತಿಕೊಂಡಿರುವ ಕಥೆಯಾಗಿದ್ದರೂ, ಎಲ್ಲೂ ಬೋರ್ ಹೊಡೆಸುವುದಿಲ್ಲ. ಚೊಚ್ಚಲ ನಿರ್ದೇಶನದಲ್ಲೇ ಪಿ. ಕುಮಾರ್ ತನ್ನ ಚಾಕಚಕ್ಯತೆ ತೋರಿಸಿದ್ದಾರೆ.

ಸಕಲಕಲಾವಲ್ಲಭನಾಗಿ ಕಿಚ್ಚ ಸುದೀಪ್ ತನ್ನ ಪಾತ್ರದಲ್ಲಿ ಚಿಂದಿ ಉಡಾಯಿಸಿದ್ದಾರೆ. ಅಭಿಮಾನಿಗಳಿಗೆ ಹಬ್ಬವಾಗಿದ್ದಾರೆ. ಆದರೆ ಪ್ರಿಯಾಮಣಿಗೆ ಇರುವ ಇಮೇಜಿಗೆ ಇಲ್ಲಿರುವ ಪಾತ್ರ ಹೇಳಿ ಮಾಡಿಸಿದ್ದಲ್ಲ. ಭಾವನಾ ಓಕೆ. ಸುದೀಪ್ ಸ್ನೇಹಿತನಾಗಿ ಅರುಣ್ ಸಾಗರ್ ಗಮನ ಸೆಳೆಯುತ್ತಾರೆ. ಖಳನ ಪಾತ್ರಕ್ಕೆ ಸೋನು ಸೂದ್ ಅನಿವಾರ್ಯತೆಯಿರಲಿಲ್ಲ.

ಕನ್ನಡದ ನಂಬರ್ ವನ್ ಸಂಗೀತ ನಿರ್ದೇಶಕ ಕಸುವು ಕಳೆದುಕೊಂಡಿಲ್ಲ. ಸಂಕಲನ ವೀಕೋ ವೀಕು. ಕ್ಯಾಮರಾದ ಕಥೆಯೂ ಇಷ್ಟೇ. ಅಲ್ಲಲ್ಲಿ ಕೆಲವು ಅಸಂಬದ್ಧ ಪ್ರಸಂಗಗಳು, ಕಥೆಯಲ್ಲಿನ ತಾಂತ್ರಿಕ ಲೋಪಗಳನ್ನು ಬಿಟ್ಟರೆ 'ಓನ್ಲಿ ವಿಷ್ಣುವರ್ಧನ' ನೋಡೆಬಲ್!

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

Share this Story:

ವೆಬ್ದುನಿಯಾವನ್ನು ಓದಿ

ಸುದ್ದಿಗಳು ಸ್ಯಾಂಡಲ್ ವುಡ್ ಕ್ರಿಕೆಟ್‌ ಸುದ್ದಿ ಜ್ಯೋತಿಷ್ಯ ಜನಪ್ರಿಯ..

Follow Webdunia kannada