Select Your Language

Notifications

webdunia
webdunia
webdunia
webdunia

ಲಕ್ಕಿ ವಿಮರ್ಶೆ; ರಮ್ಯಾ ಲಕ್ಕಿ, ಯಶ್ ಲಕ್ಕಿ, ರಾಧಿಕಾ?

ಲಕ್ಕಿ ವಿಮರ್ಶೆ; ರಮ್ಯಾ ಲಕ್ಕಿ, ಯಶ್ ಲಕ್ಕಿ, ರಾಧಿಕಾ?
ಚಿತ್ರ: ಲಕ್ಕಿ
ತಾರಾಗಣ: ರಮ್ಯಾ, ಯಶ್, ಸಾಧು ಕೋಕಿಲಾ, ಶರಣ್
ನಿರ್ದೇಶನ: ಡಾ. ಸೂರಿ
ಸಂಗೀತ: ಅರ್ಜುನ್ ಜನ್ಯ
SUJENDRA

ಇಡೀ ಸಿನಿಮಾವನ್ನು ನೋಡಿದ ನಂತರ ಮೂಡುವ ಪ್ರಶ್ನೆ, ಈ ಕಥೆಯನ್ನು ನಿಜಕ್ಕೂ ಪ್ರೇಕ್ಷಕರಿಗಾಗಿ ಹೆಣೆಯಲಾಯಿತೋ ಅಥವಾ ನಾಯಕಿ ರಮ್ಯಾರನ್ನು ಮೆಚ್ಚಿಸಲು ಮಾಡಲಾಯಿತೋ? ಹಾಗೆ ಮಾಡಿದರೂ ಚಿತ್ರರಂಗದಲ್ಲಿ ಹಲವು ವರ್ಷಗಳನ್ನು ಸವೆಸಿರುವ ಅನುಭವಿ ರಾಧಿಕಾ ಕುಮಾರಸ್ವಾಮಿ ಈ ಚಿತ್ರವನ್ನು ನಿರ್ಮಿಸಬೇಕೆಂಬ ಒಲವು ಹೇಗೆ ಬೆಳೆಸಿಕೊಂಡರು?

ಯಾವ ದಿಕ್ಕಿನಿಂದ ನೋಡಿದರೂ 'ಲಕ್ಕಿ' ಪಥ್ಯವೆನಿಸುವುದಿಲ್ಲ. ಸ್ವಮೇಕ್ ಚಿತ್ರ ಎಂಬ ಕಾರಣಕ್ಕೆ ಮೆಚ್ಚಬೇಕು ಅಂತ ಚಿತ್ರಮಂದಿರಕ್ಕೆ ಹೋದರೆ, ಅಲ್ಲಿ ಕಾಣಲು ಸಿಗೋದು 'ರಬ್ ನೇ ಬನಾ ದಿ ಜೋಡಿ'ಯ ಛಾಯೆ. ಹೆಚ್ಚುವರಿಯಾಗಿ ರಮ್ಯಾರ ಹಚ್ ನಾಯಿ!

ಲಕ್ಕಿಯದ್ದು (ಯಶ್) ಹುಚ್ಚು ಪ್ರೀತಿ. ಗೌರಿ (ರಮ್ಯಾ) ಬೇಕೇ ಬೇಕು ಎಂದು ಬದುಕನ್ನೇ ಮುಡಿಪಾಗಿಡಲು ಸಿದ್ಧನಾದ ಬಡಪಾಯಿ. ಆಕೆಗೊಂದು ನಾಯಿ. ಆ ನಾಯಿಯನ್ನು ಪ್ರೀತಿಸಿದಷ್ಟು ಗೌರಿ ಯಾರನ್ನೂ ಪ್ರೀತಿಸಿರುವುದಿಲ್ಲ. ಹೀಗಿರುವಾಗ ಗೌರಿಯನ್ನು ಗೆಲ್ಲುವ ತನ್ನ ಯಾವುದೇ ಪ್ರಯತ್ನಗಳು ಫಲ ಕೊಡದೇ ಇದ್ದಾಗ ಲಕ್ಕಿ ಹೊಸ ದಾರಿ ಹುಡುಕಿಕೊಳ್ಳುತ್ತಾನೆ. ಅಲ್ಲೂ ಅಡೆ-ತಡೆಗಳು ಎದುರು ಬಂದಾಗ ಗೆಟಪ್ ಚೇಂಜ್ ಮಾಡಿಕೊಳ್ಳುತ್ತಾನೆ. ಹೆಸರನ್ನೂ ವಿಕ್ರಮ್ ಎಂದು ಬದಲಿಸಿಕೊಳ್ಳುತ್ತಾನೆ.

ಇದಕ್ಕೂ ಕಾರಣ ಗೌರಿ. ಹೊಸ ಹೆಸರಿನಲ್ಲಿ ಕೆಲಸಕ್ಕೆ ಸೇರುವ ಲಕ್ಕಿ, ಗೌರಿಯ ಅಡಿಯಲ್ಲೇ ಕೆಲಸ ಮಾಡುತ್ತಿರುತ್ತಾನೆ. ಹೇಗಾದರೂ ಮಾಡಿ ಗೌರಿಯನ್ನು ಒಲಿಸಿಕೊಳ್ಳಬೇಕು ಅನ್ನೋದಷ್ಟೇ ಅವನ ಗುರಿ. ಆದರೆ ತಾನು ವಿಕ್ರಮ್ ಆಗಿ ಬದಲಾದ ನಂತರ ಆಕೆ ಲಕ್ಕಿಯನ್ನು ಪ್ರೀತಿಸುತ್ತಿರುವ ಸಂಗತಿ ಆಘಾತ ತರುತ್ತದೆ. ವಿಕ್ರಮ್ ಮತ್ತೆ ಲಕ್ಕಿಯಾಗುತ್ತಾನೆ. ಆದರೆ ನಿಜಕ್ಕೂ ಆತ ಗೌರಿಯನ್ನು ಪಡೆಯುವ ಲಕ್ಕಿಯಾಗುತ್ತಾನಾ? ಇದು ಚಿತ್ರದ ಉಳಿದ ಭಾಗ.

ಮನುಷ್ಯರಿಗಿಂತ ನಾಯಿಯನ್ನೇ ಹೆಚ್ಚು ಪ್ರೀತಿಸುವ ಜಾತಿಗೆ ಸೇರಿದ ನಾಯಕಿ ಪಾತ್ರವನ್ನು ಸೃಷ್ಟಿಸಿದ ಖ್ಯಾತಿ ಕಥೆಗಾರ ಗೌಸ್ ಪೀರ್ ಅವರಿಗೆ ಸಲ್ಲುತ್ತದೆ. ಆದರೆ ಅವರದ್ದು ದುರ್ಬಲ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ. ಎಲ್ಲೂ ಕಿಕ್ ಕೊಡೋದೇ ಇಲ್ಲ. ತಿರುವುಗಳಂತೂ ನಿರೀಕ್ಷಿತವೆನಿಸಿ ಸುಮ್ಮನಾಗುತ್ತವೆ. ಮುಂದಿನ ಪುಟದಲ್ಲೇನಿದೆ ಅನ್ನೋದು ಹಿಂದಿನ ಪುಟದಲ್ಲೇ ತಿಳಿದು ಹೋಗುತ್ತದೆ.

ಇನ್ನು ಲಕ್ಕಿಯನ್ನು ನಾಯಿಯೂ ಗುರುತು ಹಿಡಿಯುವುದಿಲ್ಲ ಎಂಬ ಮೂರ್ಖತನವನ್ನೂ ನಂಬಿ ಪ್ಲೀಸ್ ಎಂದು ಹೇಳುತ್ತಾರೆ ನಿರ್ದೇಶಕರು. ಅವರ ಈ ಒತ್ತಾಯವೇ ಪ್ರೇಕ್ಷಕರಿಗೆ ಹಾಸ್ಯವೆನಿಸುತ್ತದೆ.

ಹಾಗೆಂದು ಲಕ್ಕಿ ಚಿತ್ರ ನೋಡಲೇಬಾರದ ಚಿತ್ರವೆಂದು ಏಕಾಏಕಿ ಹೇಳಲಾಗದು. ತುಂಬಾ ಲೈಟಾಗಿ ತೆಗೆದುಕೊಂಡು ಚಿತ್ರ ನೋಡುವುದಾದರೆ, ಲಾಜಿಕ್ ಮರೆಯುವುದಾದರೆ, ಅದಕ್ಕಿಂತಲೂ ಹೆಚ್ಚಾಗಿ ಕಥೆ ಬಗ್ಗೆ ತಲೆ ಕೆಡಿಸಿಕೊಳ್ಳದೆ ರಮ್ಯಾ ಮತ್ತು ಯಶ್ ಜೋಡಿಯ ಗಮ್ಮತ್ತನ್ನೇ ಅಷ್ಟೂ ಹೊತ್ತು ನೋಡಬೇಕೆಂದಿದ್ದರೆ ಖಂಡಿತಾ ಬೋರ್ ಹೊಡೆಸದು.

ರಮ್ಯಾ ಸ್ವತಃ ಡಬ್ಬಿಂಗ್ ಮಾಡಿರುವುದು ಪಾತ್ರದ ತೂಕ ಹೆಚ್ಚಿಸಿದೆ. ಅವರ ಅಭಿನಯವೂ ಬೊಂಬಾಟ್. ನಾಯಕಿಗಿಂತ ಯಶ್ ವಯಸ್ಸಿನಲ್ಲಿ ಚಿಕ್ಕವರಂತೆ ಕಂಡರೂ ನಟನೆಯಲ್ಲಿ ಚಿಕ್ಕವರೆನಿಸುವುದಿಲ್ಲ. ಅವರ ಸ್ಟೆಪ್ಸ್‌ಗಳಂತೂ ಆಕರ್ಷಕ. ಚಿತ್ರದಲ್ಲಿ ತಾಜಾತನ ಇರದೇ ಇದ್ದರೂ ರಮ್ಯಾ-ಯಶ್ ಮೋಡಿ ಮಾಡುವುದು ಹೀಗೆ.

ಅದಕ್ಕೆ ತಕ್ಕ ಸೈಡ್ ಡಿಶ್‌ಗಳಿವೆ. ಅರ್ಜುನ್ ಜನ್ಯ ಸಂಗೀತದಲ್ಲಿನ ಹಾಡುಗಳನ್ನು ಎಸ್. ಕೃಷ್ಣ ಕ್ಯಾಮರಾ ನೋಡುವಂತೆ ಮಾಡುತ್ತದೆ. ಶರಣ್ ಎಂದಿನಂತೆ ಬಂದು ಕಚಗುಳಿ ಇಡುತ್ತಾರೆ. ಆದರೆ ಸಾಧುಕೋಕಿಲಾ ಅವರದ್ದು ಅದೇ ಆಲಾಪನೆ. ನಾಯಿಯದ್ದು ನಿಜಕ್ಕೂ ನಾಯಿ ಪಾಡು.

ಚಿತ್ರದ ಹೆಸರು ಲಕ್ಕಿ ಹೌದು, ರಮ್ಯಾ ಕೂಡ ಲಕ್ಕಿ ಸ್ಟಾರ್ ಹೌದು, ಯಶ್ ಪಾತ್ರದ ಹೆಸರೂ ಲಕ್ಕಿ. ಆದರೆ ನಿರ್ಮಾಪಕಿ ರಾಧಿಕಾ ಕುಮಾರಸ್ವಾಮಿ ಲಕ್ಕಿಯಾಗೋದು ಕಷ್ಟ!

Share this Story:

ವೆಬ್ದುನಿಯಾವನ್ನು ಓದಿ

ಸುದ್ದಿಗಳು ಸ್ಯಾಂಡಲ್ ವುಡ್ ಕ್ರಿಕೆಟ್‌ ಸುದ್ದಿ ಜ್ಯೋತಿಷ್ಯ ಜನಪ್ರಿಯ..

Follow Webdunia kannada