'ರಣ' ಚಿತ್ರವಿಮರ್ಶೆ; ಕೆಟ್ಟದ್ದನ್ನು ನೋಡಬೇಡಿ!
ಚಿತ್ರ: ರಣತಾರಾಗಣ: ಪಂಕಜ್, ಅಂಬರೀಷ್, ಸುಪ್ರೀತಾ, ಸ್ಫೂರ್ತಿ, ಸೋನಿಯಾ ಗೌಡ, ಅರ್ಚನಾನಿರ್ದೇಶನ: ಶ್ರೀನಿವಾಸಮೂರ್ತಿಸಂಗೀತ: ವಿ. ಶ್ರೀಧರ್
ರೌಡಿಗಳಿಂದ, ಹಿಂಸೆಯಿಂದ ದೂರ ಉಳಿಯಬೇಕು -- ಇಡೀ ಸಿನಿಮಾ ನೋಡಿದ ಮೇಲೆ ನಿರ್ದೇಶಕರು ನೀಡಿರುವ ಸಂದೇಶ ಸರಿಯೆನಿಸುತ್ತದೆ. ಇದು ಪ್ರೇಕ್ಷಕರಿಗೂ ಹೇಳಿದ್ದಾರೇನೋ ಎಂಬಂತೆ ಭಾಸವಾಗುತ್ತದೆ. ತಲೆ ಬುಡವಿಲ್ಲದ ಸವಕಲು ಕಥೆಯನ್ನು ಗಂಟೆಗಟ್ಟಲೆ ಕಡಿದು, ಕೊಚ್ಚಿ ಕೊನೆಗೆ ಶೂಟ್ ಮಾಡಿ ಬಿಸಾಕಿ ಬಿಡುತ್ತಾರೆ.ಸೂರಿ (ಪಂಕಜ್), ಮಂಜ, ಮಾದ, ಸಿದ್ದ ಎಂಬ ನಾಲ್ವರು ಹಳ್ಳಿ ಹುಡುಗರು ಗೊತ್ತು ಗುರಿಯಿಲ್ಲದೆ ನಗರ ಸೇರಿಕೊಂಡವರು. ಹಾಗೆ ನಗರಕ್ಕೆ ಬಂದವರು ಅಡ್ಡದಾರಿಯಲ್ಲಿ ಸಾಗುತ್ತಾರೆ. ಬೇಕಾಬಿಟ್ಟಿ ಕೊಲೆಗಳು, ಅದರಲ್ಲಿ ಗೃಹಸಚಿವನಿಗೆ ಬೇಕಾದ ರೌಡಿಯನ್ನೇ ಹೊಡೆದುರುಳಿಸಿ ದೊಡ್ಡ ಹೆಸರು ಮಾಡುತ್ತಾರೆ. ಈ ನಾಲ್ವರು ಯಾರು ಎಂದು ಭೂಗತ ಜಗತ್ತು ಆಶ್ಚರ್ಯದಿಂದ ನೋಡುತ್ತದೆ.ಈ ನಡುವೆ ಸೂರಿ, ಮಂಜ, ಮಾದ, ಸಿದ್ದರಿಗೆ ನಾಲ್ವರು ಹುಡುಗಿಯರೂ ಸಿಗುತ್ತಾರೆ. ಅವರಿಗೋ ಒಂದಿಲ್ಲ ಒಂದು ಸಮಸ್ಯೆ. ಒಬ್ಬಾಕೆ (ಸುಪ್ರೀತಾ) ಸಾಮೂಹಿಕ ಅತ್ಯಾಚಾರಕ್ಕೂ ಒಳಗಾಗುತ್ತಾಳೆ.ನಾಲ್ವರು ರೌಡಿಗಳ ಆಟಾಟೋಪ ಮಿತಿಮೀರಿದಾಗ ಬರುವವನೇ ರಫ್ ಎಂಡ್ ಟಫ್ ಪೊಲೀಸ್ ಅಧಿಕಾರಿ ಅಮರನಾಥ್ (ಅಂಬರೀಷ್). ಆತನದ್ದೇನಿದ್ದರೂ ನಿಂತಲ್ಲೇ ನ್ಯಾಯ. ಬದುಕುಳಿಯುವವನು ಸೂರಿ ಮಾತ್ರ. ಇಷ್ಟು ಹೊತ್ತಿಗೆ ನಾಯಕ ಮಾತ್ರ ಮೆಂಟಲ್ ಆಗುವುದಲ್ಲ, ಪೂರ್ತಿ ನೋಡಿದ ಪ್ರೇಕ್ಷಕರೂ!ಪಂಕಜ್ ನಾಯಕನಾಗಿ ಕ್ಲಿಕ್ ಆಗುತ್ತಿಲ್ಲ ಎಂಬ ಏಕೈಕ ಕಾರಣಕ್ಕೆ ಈ ಸ್ಥಿತಿಗೆ ಇಳಿಯಬಾರದಿತ್ತು, ಇಳಿಯಲು ಎಸ್. ನಾರಾಯಣ್ ಕೂಡ ಬಿಡಬಾರದಿತ್ತು. ಆದರೂ ಅವರ ನಟನೆ ಓಕೆ ಎನ್ನಬಹುದು. ಉಳಿದ ಮೂವರು ಅಷ್ಟಕ್ಕಷ್ಟೇ. ನಾಲ್ವರೂ ಹೀರೋಯಿನ್ಗಳದ್ದು ಲೆಕ್ಕ ಭರ್ತಿ.ಅಂಬರೀಷ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಮಿಂಚುವುದಿಲ್ಲ. ಪಾತ್ರದುದ್ದಕ್ಕೂ ಹಿಂದಿಯಲ್ಲೇ ಮಾತನಾಡುತ್ತಾರೆ. ಶೋಭರಾಜ್ ಕೂಡ ಹೊಸದೆನಿಸುವುದಿಲ್ಲ. ಶ್ರೀಧರ್ ಸಂಗೀತದಲ್ಲಿ ನಾಯಕಿ ಸ್ಫೂರ್ತಿ ಇರುವ 'ಪುನಃ ಪುನಃ...' ಹಾಡೊಂದೇ ಕೇಳುವಂತಿದೆ.ಹೇಳಿ ಹೇಳಿ ಸವಕಲಾದ, ಮುಗಿದು ಹೋದ ಕಥೆಯನ್ನೇ ನಿರ್ದೇಶಕ ಶ್ರೀನಿವಾಸಮೂರ್ತಿ ಕೆರೆದಿದ್ದಾರೆ. ಒಂಚೂರಾದರೂ ಹೊಸತನವಿದ್ದಿದ್ದರೆ ಓಕೆ ಅನ್ನಬಹುದಿತ್ತು. ಹೊಸತನ ಬಿಡಿ, ಇಡೀ ಚಿತ್ರವನ್ನು ಸಹ್ಯವಾಗಿಸುತ್ತಿದ್ದರೆ ಸಾಕಿತ್ತು. ಅದೂ ಇಲ್ಲ.ಧಮ್ಮೇ ಇಲ್ಲದ 'ರಣ' ಎಲ್ಲಾ ರೀತಿಯಿಂದಲೂ ಭಯಾನಕ ಸಿನಿಮಾ. ಇದಕ್ಕೆ ಹಣ ಸುರಿದಿರುವ ನಿರ್ಮಾಪಕ ಶಿವಾನಂದ ಮಾದಶೆಟ್ಟಿಯವರ ಉದ್ದೇಶವೇ ಅರ್ಥವಾಗುತ್ತಿಲ್ಲ. ಇಂತಹ ಚಿತ್ರಕ್ಕೆ ಪ್ರಾದೇಶಿಕ ಸೆನ್ಸಾರ್ ಮಂಡಳಿ ಪ್ರಮಾಣ ಪತ್ರ ನಿರಾಕರಿಸದೆ ಇನ್ನೇನು ಮಾಡಲು ಸಾಧ್ಯ?