Select Your Language

Notifications

webdunia
webdunia
webdunia
webdunia

ಮುದ ನೀಡುವ 'ಕೆಂಪೇಗೌಡ'

ಮುದ ನೀಡುವ 'ಕೆಂಪೇಗೌಡ'
PR
ತಮಿಳಿನ 'ಸಿಂಗಂ' ಚಿತ್ರವನ್ನು 'ಕೆಂಪೇಗೌಡ' ಹೆಸರಿನಲ್ಲಿ ಕನ್ನಡಕ್ಕೆ ತಂದಿರುವ ನಿರ್ದೇಶಕ ಸುದೀಪ್ ಒಂದಿನಿತೂ ತಮಿಳಿನ ಛಾಯೆ ಕಾಣಿಸದಂತೆ ಸಣ್ಣಪುಟ್ಟ ಮಾರ್ಪಾಟುಗಳನ್ನು ಮಾಡಿಕೊಂಡು ಕನ್ನಡ ನಾಡಿನ ಸೊಗಡಿಗನುಗುಣವಾಗಿ ಚಿತ್ರೀಕರಿಸಿ ಪ್ರಬುದ್ಧತೆ ಮೆರೆದಿದ್ದಾರೆ.

ತನ್ನೂರಿನಲ್ಲೇ ಪೊಲೀಸ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕೆಂಪೇಗೌಡ (ಸುದೀಪ್) ಊರಿನ ಜನರ ಸಣ್ಣ ಪುಟ್ಟ ಸಮಸ್ಯೆಗಳಿಗೆ ಪರಿಹಾರ ತೋರಿಸುವಲ್ಲಿ ಪ್ರವೀಣನಾಗಿರುತ್ತಾನೆ. ರೌಡಿಗಳನ್ನು ಮಟ್ಟ ಹಾಕುವುದರಲ್ಲೂ ಆತ ಸಿದ್ಧ ಹಸ್ತ.

ಅದೇ ಊರಿಗೆ ಬರುವ ಯುವತಿ ಕಾವ್ಯ (ರಾಗಿಣಿ) ಕೆಂಪೇಗೌಡನ ಸದಾಚಾರ, ಸದ್ಗುಣಗಳಿಗೆ ಮಾರು ಹೋಗುತ್ತಾಳೆ. ಇದೇ ವೇಳೆ ಊರಿನ ಮುಗ್ಧ ಜನರನ್ನು ವಂಚಿಸಿ ಹಣವಸೂಲಿ ಮಾಡುವುದನ್ನೇ ದಂಧೆಯನ್ನಾಗಿಸಿಕೊಂಡ ಆರ್ಮುಗಂ (ರವಿಶಂಕರ್) ರೌಡಿ ತಂಡವನ್ನು ಕಟ್ಟಿಕೊಂಡು ಮೆರೆಯುತ್ತಿರುತ್ತಾನೆ.
ಆತನನ್ನು ಸದೆಬಡಿಯಲು ಹೊರಟ ಪೊಲೀಸ್ ಅಧಿಕಾರಿ ಕೆಂಪೇಗೌಡ ಹಲವಾರು ತೊಂದರೆಗಳನ್ನು ಎದುರಿಸಿ ಹೇಗೆ ಜಯಶಾಲಿಯಾಗುತ್ತಾನೆ ಎಂಬುದೇ ಚಿತ್ರದ ಕ್ಲೈಮ್ಯಾಕ್ಸ್.

ನಿರ್ದೇಶಕ ಸುದೀಪ್ ಚಿತ್ರಕಥೆಯಲ್ಲಿ ಸಣ್ಣ ಪುಟ್ಟ ವಿಚಾರಗಳಿಗೂ ಆದ್ಯತೆ ನೀಡುವ ಮೂಲಕ ಸರಳ ನಿರೂಪಣೆಯಲ್ಲಿ ಶ್ರಮ ವಹಿಸಿ ತಮಿಳಿನ 'ಸಿಂಗಂ'ನನ್ನು ಕನ್ನಡದ ಕೆಂಪೇಗೌಡನನ್ನಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಿರ್ದೇಶಕನ ಕಾರ್ಯ ನಿರ್ವಹಣೆ ಜತೆಗೆ ನಟನೆಯಲ್ಲಿಯೂ ಅವರು ಮಿಂಚಿದ್ದಾರೆ.

ಖಳನಟನ ಪಾತ್ರ ಮಾಡಿರುವ ರವಿಶಂಕರ್ ಕನ್ನಡ ಚಿತ್ರರಂಗದಲ್ಲಿನ ಖಳನಟರ ಕೊರತೆಯನ್ನು ನಿವಾರಿಸುವಷ್ಟರ ಮಟ್ಟಿನ ಅಭಿನಯವನ್ನು ಮೆರೆದಿದ್ದಾರೆ. ನಾಯಕನಿಗಿರುವಷ್ಟೇ ಪ್ರಾಮುಖ್ಯತೆ ರವಿಶಂಕರ್‌ಗೂ ಲಭಿಸಿದೆ.

ಸುದೀಪ್ ಮತ್ತು ರವಿಶಂಕರ್ ಒಬ್ಬರನ್ನೊಬ್ಬರು ಮೀರಿಸುವಂತೆ ಪಾತ್ರವನ್ನು ತಮ್ಮ ತೆಕ್ಕೆಗೆ ಆಹ್ವಾನಿಸಿಕೊಂಡು ಅಭಿನಯಿಸಿರುವುದು ಪ್ರೇಕ್ಷಕನ ಮನಸ್ಸಿನಲ್ಲಿ ಅಚ್ಚೊತ್ತುತ್ತದೆ. ನಟಿ ರಾಗಿಣಿ, ಹಿರಿಯ ಕಲಾವಿದದರಾದ ಗೀರೀಶ್ ಕಾರ್ನಾಡ್, ಅಶೋಕ್ ಅಚ್ಚುಕಟ್ಟಾದ ಅಭಿನಯದಿಂದ ಗಮನ ಸೆಳೆಯುತ್ತಾರೆ.

ನಗುವಿನ ಕಚಗುಳಿ ಇಡುವಲ್ಲೂ ಶರಣ್ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡಿದ್ದಾರೆ. ಅರ್ಜನ್ ಅವರ ಸಂಗೀತ, ಕೃಷ್ಣ ಅವರ ಛಾಯಾಗ್ರಹಣ ಸುದೀಪ್ ಆಶಯಕ್ಕನುಗುಣವಾಗಿಯೇ ಮೇಳೈಸಿದೆ.

Share this Story:

Follow Webdunia kannada