ದಶಮುಖ ಚಿತ್ರವಿಮರ್ಶೆ; ಪ್ರಯತ್ನ ಒಳ್ಳೆಯದೇ, ಆದರೆ...?
ಚಿತ್ರ: ದಶಮುಖತಾರಾಗಣ: ರವಿಚಂದ್ರನ್, ಅನಂತ್ ನಾಗ್, ದೇವರಾಜ್, ಚೇತನ್, ರವಿಕಾಳೆ, ಅವಿನಾಶ್, ಸರಿತಾ, ಮಾಳವಿಕಾ, ಆಕಾಂಕ್ಷಾ, ಅಚ್ಚುತಕುಮಾರ್, ದತ್ತಣ್ಣ, ಪ್ರವೀಣ್ನಿರ್ದೇಶನ: ರವಿ ಶ್ರೀವತ್ಸಸಂಗೀತ: ಶ್ರೀಧರ್ ಸಂಭ್ರಮ್ಮಸಾಲೆ ಚಿತ್ರಗಳ ನಿರ್ದೇಶಕ ರವಿ ಶ್ರೀವತ್ಸ, ನಾಯಕಿಯರನ್ನು ಹೇಗ್ಹೇಗೋ ತೋರಿಸುವ ರವಿಚಂದ್ರನ್ 'ದಶಮುಖ'ದಲ್ಲಿಲ್ಲ. ಇಲ್ಲಿರುವುದು ಬೇರೆಯದೇ ರವಿ ಶ್ರೀವತ್ಸ ಮತ್ತು ರವಿಚಂದ್ರನ್. ಆ ಮಟ್ಟಿಗೆ ಮೆಚ್ಚುವಂತಿದೆ 'ದಶಮುಖ'.ಅದೊಂದು ಕೊಲೆ ಕೇಸು. ತಂದೆಯನ್ನೇ ಮಗ ಅಗ್ನಿ (ಚೇತನ್) ಕೊಂದಿದ್ದಾನೆ, ಆತನನ್ನು ನೇಣಿಗೆ ಏರಿಸಲೇಬೇಕು ಎನ್ನುತ್ತಾರೆ ಎಲ್ಲರೂ. ಆದರೆ ಅಗ್ನಿ ಅಪರಾಧಿಯೋ ಅಥವಾ ನಿರಪರಾಧಿಯೋ ಎಂಬುದನ್ನು ತೀರ್ಮಾನಿಸಲು ನ್ಯಾಯಾಧೀಶರು (ರಮೇಶ್ ಭಟ್) ವಿಫಲರಾಗುತ್ತಾರೆ. ಗೊಂದಲ ನಿವಾರಣೆಗೆ ಅವರು ಹತ್ತು ಮಂದಿಯ ಸಮಿತಿಯೊಂದನ್ನು ರಚಿಸುತ್ತಾರೆ. ಈ ಪ್ರಕರಣದಲ್ಲಿ ಅಗ್ನಿಯ ಪಾತ್ರವೇನು ಎಂಬುದನ್ನು ನಿರ್ಧರಿಸುವಂತೆ ಸೂಚಿಸುತ್ತಾರೆ.ಸಮಿತಿಯಲ್ಲಿನ ಹತ್ತು ಮಂದಿ ಜ್ಯೂರಿಗಳು ಬೇರೆ ಬೇರೆ ಕ್ಷೇತ್ರಗಳಿಂದ ಬಂದವರು. ಅವರ ಯೋಚನಾ ಲಹರಿಗಳೇ ಬೇರೆ. ಅಗ್ನಿಯ ಬಗ್ಗೆ ಸಮಿತಿಯಲ್ಲಿ ಭಾರೀ ಚರ್ಚೆಗಳು, ವಾಗ್ವಾದಗಳು ನಡೆಯುತ್ತವೆ. ಆತನಿಗೆ ಮರಣ ದಂಡನೆಯೇ ಸೂಕ್ತ ಎಂಬ ನಿರ್ಧಾರಕ್ಕೆ ಬರುತ್ತಾರೆ ಜ್ಯೂರಿಗಳು. ಕಾರಣ, ಆತ ಸಮಾಜಕ್ಕೆ ಕಂಟಕ ಅನ್ನೋದು. ಅವನಿಗೆ ಮರಣ ದಂಡನೆ ವಿಧಿಸಿದರೆ, ಆಗ ಸಮಾಜಕ್ಕೆ ಸ್ಪಷ್ಟ ಸಂದೇಶವೊಂದು ರವಾನೆಯಾಗುತ್ತದೆ ಎನ್ನುವುದು ಅವರ ನಂಬಿಕೆ.ಇಂತಹ ನಿರ್ಧಾರಕ್ಕೆ ಬರುವುದು ಸಮಿತಿಯಲ್ಲಿನ ಒಂಬತ್ತು ಜ್ಯೂರಿಗಳು ಮಾತ್ರ. ಅವರಲ್ಲೊಬ್ಬ ಇಷ್ಟು ಜ್ಯೂರಿಗಳ ತೀರ್ಮಾನವನ್ನು ವಿರೋಧಿಸುತ್ತಾನೆ. ಆತನೇ ರವೀಂದ್ರನಾಥ್ (ರವಿಚಂದ್ರನ್). ಅಗ್ನಿ ನಿರಪರಾಧಿ, ಆತ ಯಾವ ತಪ್ಪೂ ಮಾಡಿಲ್ಲ ಎಂದೇ ರವೀಂದ್ರನಾಥ್ ವಾದಿಸುತ್ತಾನೆ. ಆರಂಭದಲ್ಲಿ ಒಪ್ಪಿಕೊಳ್ಳದ ಇತರ ಜ್ಯೂರಿಗಳು, ಬರಬರುತ್ತಾ ರವೀಂದ್ರನಾಥ್ ವಾದಕ್ಕೆ ತಲೆದೂಗುತ್ತಾರೆ. ಆತ ಹೇಳಿದ್ದೆಲ್ಲವೂ ಸರಿಯೆನಿಸುತ್ತದೆ. ಒಟ್ಟಾಗಿ ನ್ಯಾಯಾಧೀಶರಿಗೆ ವರದಿ ಸಲ್ಲಿಸುತ್ತಾರೆ. ಒಂಬತ್ತು ತಿಂಗಳ ಗ್ರಹಣದಿಂದ ಅಗ್ನಿ ಬಿಡುಗಡೆಯಾಗುತ್ತಾನೆ.ನಿಜಕ್ಕೂ ರವಿ ಶ್ರೀವತ್ಸ ಪ್ರಯತ್ನವನ್ನು ಮೆಚ್ಚಲೇ ಬೇಕು ಎನ್ನುವಂತಿದೆ. ಸೆಕ್ಸ್, ಗುಂಡು, ಲಾಂಗು ಚಿತ್ರಗಳನ್ನೇ ಮಾಡುತ್ತಿದ್ದ ನಿರ್ದೇಶಕನೊಬ್ಬ ಇಂತಹ ಚಿತ್ರವೊಂದನ್ನು ಕೈಗೆತ್ತಿಕೊಳ್ಳುವುದೆಂದರೆ ಸುಲಭವಲ್ಲ. ಆದರೆ ಅದಕ್ಕೆ ಬೇಕಾದ ತಯಾರಿ ಮಾತ್ರ ನಿರ್ದೇಶಕ ಮಾಡಿದಂತಿಲ್ಲ. ಇಡೀ ಸಿನಿಮಾಕ್ಕೆ ನೋಡಿಸಿಕೊಂಡು ಹೋಗುವ ಗುಣವೇ ಇಲ್ಲ.ಒಟ್ಟಾರೆ ಸಿನಿಮಾದಲ್ಲಿ ದೊಡ್ಡ ವಿಲನ್ ಸಂಭಾಷಣೆ. ಇಂತಹ ಚಿತ್ರಕ್ಕೆ ಟಿ.ಎನ್. ಸೀತಾರಾಮ್‌ರ 'ಮುಕ್ತ' ಧಾರಾವಾಹಿಗೆ ಇರುವಂತಹ ಸಂಭಾಷಣೆಯ ಅಗತ್ಯವಿತ್ತು. ಚಿತ್ರಕಥೆಯಲ್ಲಿ ಬಿಗಿತನ ಬೇಕಿತ್ತು. ಆದರೆ ಅವೆಲ್ಲವೂ ಇಲ್ಲಿ ಮಿಸ್ ಆಗಿದೆ. ಸಿನಿಮಾ ಮಾಡಲೆಂದೇ ಕಥೆಯನ್ನು ಎಳೆದಾಡಿದಂತಿದೆ.ಸಂಭಾಷಣೆ ಎಷ್ಟು ಬಾಲಿಶವಾಗಿದೆಯೆಂದರೆ, ಜ್ಯೂರಿಗಳ ನಡುವಿನ ವಾಗ್ವಾದ-ಚರ್ಚೆ ಪ್ರಾಥಮಿಕ ಶಾಲಾ ಮಕ್ಕಳು ಚಾಕಲೇಟಿಗಾಗಿ ಗಲಾಟೆ ಮಾಡುವಂತಿದೆ. ಉತ್ತಮ ಕಥೆಯಿದ್ದರೂ, ಉತ್ತಮ ಚಿತ್ರವನ್ನಾಗಿಸುವಲ್ಲಿ, ಚಿತ್ರವನ್ನು ಸಹ್ಯವಾಗಿಸುವಲ್ಲಿ ಶ್ರೀವತ್ಸ ಸೋತಿದ್ದಾರೆ.ಇನ್ನು ಮೊದಲೇ ಹೇಳಿದಂತೆ ಇದು ರವಿಚಂದ್ರನ್ ಸಿನಿಮಾ ಅಲ್ಲ. ಇಲ್ಲಿ ಸೆಕ್ಸೀ ಹುಡುಗಿಯರಿಲ್ಲ, ರೊಮ್ಯಾಂಟಿಕ್ ಹಾಡುಗಳಿಲ್ಲ. ಅವರ ಮೇಲೆ ಸೇಬು ಓಡಾಡುವುದಿಲ್ಲ. ಅದ್ಬುತವೆನಿಸುವ ಸೆಟ್‌ಗಳಿಲ್ಲ. ಬಹುತೇಕ ಕಥೆ ನಾಲ್ಕು ಗೋಡೆಗಳ ನಡುವೆ ಮುಗಿದು ಹೋಗುತ್ತದೆ. ರವಿಚಂದ್ರನ್ ಎಲ್ಲೋ ಕಳೆದು ಹೋಗುತ್ತಾರೆ. ಪಾತ್ರಕ್ಕೆ ಅವರು ನ್ಯಾಯ ಸಲ್ಲಿಸಿದ್ದಾರೆ ಎಂಬ ಭಾವನೆ ಬರುವುದೇ ಇಲ್ಲ.ಆದರೆ ಅನಂತ್ ನಾಗ್, ಅವಿನಾಶ್, ದೇವರಾಜ್ ಮಿಂಚುತ್ತಾರೆ. ಬಹುಕಾಲದ ನಂತರ ಮರಳಿರುವ ಸರಿತಾ ಗಮನ ಸೆಳೆಯುತ್ತಾರೆ. ಎಲ್ಲೋ ಮಾಯವಾಗಿದ್ದ ಚೇತನ್ ಹಳೆಯ ಆ ದಿನಗಳನ್ನು ನೆನಪಿಸುತ್ತಾರೆ. ಉಳಿದವರೂ ತಮಗೆ ಒಪ್ಪಿಸಿದ ಕೆಲಸವನ್ನು ನೀಟಾಗಿ ಮಾಡಿದ್ದಾರೆ. ಹಾಲಿವುಡ್‌ನ '12 ಆಂಗ್ರಿಮೆನ್' ಸ್ಫೂರ್ತಿ ಪಡೆದಿರುವ ನಿರ್ಮಾಪಕ ಸೂರಪ್ಪ ಬಾಬು ತುಂಬಾ ಹಣ ಉಳಿಸಿದ್ದಾರೆ, ನೀವೂ ಯೋಚನೆ ಮಾಡಿ.