Select Your Language

Notifications

webdunia
webdunia
webdunia
webdunia

ಚಿತ್ರ ವಿಮರ್ಶೆ: ಭರವಸೆ ಮೂಡಿಸುವ 'ಉಯ್ಯಾಲೆ'

ಚಿತ್ರ ವಿಮರ್ಶೆ: ಭರವಸೆ ಮೂಡಿಸುವ 'ಉಯ್ಯಾಲೆ'
PR
ಹಳೇ ಪೇಪರ್, ಖಾಲಿ ಬಾಟಲಿ ಮಾರುವ ತಂದೆ ತನ್ನ ಮಗನನ್ನು ವಿದ್ಯಾವಂತನನ್ನಾಗಿ ಮಾಡಲು ಜೀವನದುದ್ದಕ್ಕೂ ಬೆವರು ಹರಿಸುವ ಕಥೆಯನ್ನು ಕೈಗೆತ್ತಿಕೊಡು ನಿರ್ದೇಶಕ ಎಸ್. ದಿನೇಶ್ 'ಉಯ್ಯಾಲೆ' ತಯಾರಿಸಿದ್ದಾರೆ.

ತಂದೆಯ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿರುವ ರಮೇಶ್ ಭಟ್ ಇಡೀ ಚಿತ್ರವನ್ನು ಆವರಿಸಿದ್ದಾರೆ. ಚಿತ್ರ ಒಂದಿಷ್ಟು ನೋಡಿಸಿಕೊಂಡು ಹೋಗುವುದಿದ್ದರೆ ರಮೇಶ್ ಭಟ್ ಅವರಿಂದಲೇ. ಹಲವು ವರ್ಷಗಳ ನಂತರ ಈ ಹಿರಿಯ ಕಲಾವಿದನಿಗೆ ಒಳ್ಳೆಯ ಪಾತ್ರ ದೊರಕಿದೆ. ಅವರ ಹದವರಿತ ನಟನೆ ಖುಷಿ ನೀಡುತ್ತದೆ.

ನಾಯಕಿ ನಟಿ ಶಿಲ್ಪಾ, ನಾಯಕಿಯಾಗುವ ಎಲ್ಲಾ ಸಾಮರ್ಥ್ಯ ತನಗಿದೆ ಎಂಬ ಮುನ್ಸೂಚನೆ ನೀಡಿದ್ದಾರೆ. ಆದರೆ ಹ್ಯಾಪ್ ಮೋರೆಯ ನಾಯಕ ಪ್ರಭು ಚಿತ್ರದ ಮೈನಸ್ ಪಾಯಿಂಟ್. ಪ್ರಭು ಮುಖದಲ್ಲಿ ಭಾವಾಭಿನಯದ ಗುರುತೇ ಕಾಣಿಸುವುದಿಲ್ಲ.

ಕಥೆ, ಚಿತ್ರಕಥೆ ಚೆನ್ನಾಗಿರುವುದರ ಜತೆ ಅದಕ್ಕೆ ಸರಿ ಹೊಂದುವ ಪಾತ್ರ ವರ್ಗ ದೊರೆತರಷ್ಟೇ ಅಂದುಕೊಂಡದ್ದನ್ನು ತೆರೆಯ ಮೇಲೆ ತರಲು ಸಾಧ್ಯ. ಇಲ್ಲದಿದ್ದರೆ ನಿರ್ದೇಶಕನ ಶ್ರಮ ವ್ಯರ್ಥ. ಉಯ್ಯಾಲೆಯಲ್ಲಿ ಆಗಿರುವುದು ಅದೇ.

ನಿರ್ದೇಶಕ ದಿನೇಶ್ ಒಳ್ಳೆಯ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದಾರಾದರೂ ಅದನ್ನು ಅಷ್ಟೇ ಪರಿಣಾಮಕಾರಿಯಾಗಿ ತೆರೆಗೆ ತರುವುದು ಅವರಿಂದ ಸಾಧ್ಯವಾಗಿಲ್ಲ. ಕೆಲವು ಕಡೆ ಚಿತ್ರ ಜಾಳು ಜಾಳಾಗಿದ್ದು ಯಾವುದೋ ಧಾವಂತಕ್ಕೆ ಚಿತ್ರ ತಯಾರಿಸಿದಂತಿದೆ.

ಸಣ್ಣ ಪಾತ್ರವೇ ಆದರೂ ದೊಡ್ಡಣ್ಣ ತಮ್ಮ ಹಿಂದೆಂದಿನ ಲವಲವಿಕೆಯನ್ನು ಮುಂದುವರಿಸಿದ್ದಾರೆ. ನಾಯಕನ ತಾಯಿಯ ಪಾತ್ರದಲ್ಲಿ ಪದ್ಮಜಾ ರಾವ್ ಮತ್ತು ತಂಗಿಯ ಪಾತ್ರದಲ್ಲಿ ರೂಪಿಕಾ ನೆನಪಿನಲ್ಲಿ ಉಳಿಯುತ್ತಾರೆ.

ಚಿತ್ರದ ನಿಜವಾದ ನಾಯಕ ಸಂಗೀತ ಸಂಯೋಜಕ ರಿಕ್ಕಿ ಅಂತಲೇ ಹೇಳಬೇಕು. ಹಿನ್ನೆಲೆ ಸಂಗೀತ ಚಿತ್ರದ ಎಷ್ಟೋ ಸನ್ನಿವೇಶಗಳ ಪರಿಣಾಮವನ್ನು ಹೆಚ್ಚಿಸಿದೆ.

ಕಥೆಗಳನ್ನು ದಾಟಿಸುವ ಕೆಲವು ಹಾಡುಗಳು ಚಿತ್ರದಲ್ಲಿದ್ದು ಅವು ತೆರೆಯ ಮೇಲೆ ಅರ್ಥಪೂರ್ಣವಾಗಿ ಮೂಡಬೇಕೆಂಬ ಕಾಳಜಿಯನ್ನು ದಿನೇಶ್ ತೋರಿದ್ದಾರೆ. ಚಿತ್ರದ ಅಂತ್ಯದಲ್ಲಿ ನಾಟಕೀಯ ಪ್ರಸಂಗವಿದ್ದರೂ ಅದನ್ನು ಉತ್ಪ್ತ್ರೇಕ್ಷೆ ಮಾಡಿ ತೋರಿಸಿಲ್ಲ. ಎಂ.ಆರ್. ಸೀನು ಅವರ ಛಾಯಾಗ್ರಹಣ ಚೆನ್ನಾಗಿದೆ. ನಿರ್ದೇಶಕ ಎಸ್. ದಿನೇಶ್ ಬಗ್ಗೆ ಮುಂದಿನ ಚಿತ್ರಗಳಲ್ಲಿ ಭರವಸೆ ಇಟ್ಟುಕೊಳ್ಳಬಹುದೆಂಬುದನ್ನು ಅವರು ಸಾಬೀತು ಪಡಿಸಿದ್ದಾರೆಂದಷ್ಟೇ ಹೇಳಬಹುದು.

Share this Story:

Follow Webdunia kannada