ಗೊತ್ತು ಗುರಿ ಇಲ್ಲದ ಕಳಪೆ ಚಿತ್ರ 'ನಮಿತಾ...'
ಚಿತ್ರವೊಂದು ಎಷ್ಟೊಂದು ಕಳಪೆಯಾಗಿರಲು ಸಾಧ್ಯ ಎಂದು ತಿಳಿಯುವ ಹುಚ್ಚು ಕುತೂಹಲ ಇದ್ದರೆ 'ನಮಿತಾ ಐ ಲವ್ ಯೂ' ನೋಡಬಹುದು. ಅಸಂಬದ್ಧ ಸನ್ನಿವೇಶಗಳ ಚಿತ್ರಣ, ಬಾಲಿಶ ಸಂಭಾಷಣೆ, ಕೀಳು ಮಟ್ಟದ ಅಭಿರುಚಿಯನ್ನು ಮುಲಾಜಿಲ್ಲದೆ ದಯಪಾಲಿಸುವ 'ನಮಿತಾ ಐ ಲವ್ ಯೂ' ಖಂಡಿತವಾಗಿಯೂ ಕನ್ನಡ ಚಿತ್ರರಂಗಕ್ಕೆ ಬಗೆದ ಅಪಚಾರ. ಅದ್ಭುತ ಸೌಂದರ್ಯದ ನಟಿ ನಮಿತಾ ಅವರ ಮಾದಕ ದೇಹಸಿರಿಯನ್ನು ಕಾಮುಕನಂತೆ ವಿವಿಧ ಕೋನಗಳಿಂದ ಚಿತ್ರೀಕರಿಸಿರುವುದು ನಿರ್ದೇಶಕನ ಕೀಳು ಅಭಿರುಚಿಯನ್ನು ಎತ್ತಿತೋರಿಸುತ್ತದೆ. ಕನ್ನಡ ಚಿತ್ರರಂಗಕ್ಕೆ ಶಾಪವೆನಿಸುವಂತೆ ಆಮದು ಸರಕಿನ ರೂಪದಲ್ಲಿ ಬಂದಿರುವ ಈ ಚಿತ್ರದ ಜಾಳು ಜಾಳು ನಿರೂಪಣೆಯಲ್ಲಿ ಪ್ರೇಕ್ಷಕ ಸುಸ್ತೋ ಸುಸ್ತು! ನಾಯಕಿಯಾಗಿರುವ ನಮಿತಾ ಇಲ್ಲಿ ನೆಪ ಮಾತ್ರ. ಆಕೆಗೆ ಇಲ್ಲೇನೂ ಸ್ಕೋಪ್ ಇಲ್ಲ. ಆಕೆ ಬಂದಾಗ ಆಕೆಯ ಮೈ ಮೇಲೆ ಹರಿದಾಡುವ ಕ್ಯಾಮರಾ ಏನನ್ನೋ ಬಿಂಬಿಸಲು ಪ್ರಯತ್ನಿಸಿ ಪ್ರೇಕ್ಷಕನಿಗೆ ಮುದ ನೀಡುವ ಬದಲು ನಿರ್ದೇಶಕನ ಕೀಳು ಅಭಿರುಚಿಯನ್ನು ಎತ್ತಿತೋರಿಸುತ್ತದೆ. ಗೊತ್ತು ಗುರಿ ಇಲ್ಲದ ಲಾಜಿಕ್ಕೂ, ಮ್ಯಾಜಿಕ್ಕೂ ಇಲ್ಲದ ಈ ಚಿತ್ರದಲ್ಲಿ ಏನೋ ಮಾಡೋ ನೆಪದಲ್ಲಿ ಇನ್ನೇನೋ ಆಗಿದೆ. ಈ ಚಿತ್ರದಲ್ಲಿ ಒಂದು ಗಟ್ಟಿ ಕಥೆಯೇ ಇಲ್ಲ. ಚಿತ್ರಕಥೆಯ ಕೇಂದ್ರಬಿಂದು ನಮಿತಾ ಎಂದು ಭಾವಿಸಿ ಹೋದವರಿಗೆ ನಿರಾಸೆ ಗ್ಯಾರಂಟಿ. ಇಲ್ಲಿ ಆಕೆ ಯೋಗ ಟೀಚರ್. ಒಂದೆರಡು ದೃಶ್ಯಗಳಲ್ಲಿ ಕೈ ಕಾಲು ಎತ್ತಿ ಯೋಗ ಮಾಡಿ ಹೋಗುವ ನಮಿತಾ ಮತ್ತೆ ಬರುವುದು ಫೈಟಿಂಗ್‌ನಲ್ಲಿ. ನಮಿತಾ ಹೊಡೆದಾಡಿದ್ದಾರೆ. ಆದರೆ ಅದನ್ನು ನೋಡುವುದೇ ಕಷ್ಟ. ಚಿತ್ರಕ್ಕೆ ನಿರ್ದೇಶಕರೇ ಸಂಗೀತ ನೀಡಿದ್ದಾರೆ. ನೀಡಿದ್ದಾರೆ ಅಂದರೆ ಹಿಂದಿಯ ಟ್ಯೂನ್‌ಗಳನ್ನು ಯಥಾವತ್ತಾಗಿ ಕದ್ದಿದ್ದಾರೆ. ಬ್ಯಾಂಕ್ ಜನಾರ್ದನ್, ಟೆನ್ನಿಸ್ ಕೃಷ್ಣ ಕೆಲವೇ ದೃಶ್ಯಗಳಲ್ಲಿ ಬಂದು ಹೋಗುತ್ತಾರೆ. ಉಳಿದಂತೆ ಯಾರೊಬ್ಬರಿಗೂ ಅಭಿನಯದ ಗಂಧ ಗಾಳಿಯೇ ಇಲ್ಲ. ಚಿತ್ರದ ಛಾಯಾಗ್ರಹಣ ಹಾಗೂ ತಾಂತ್ರಿಕ ಗುಣ ಮಟ್ಟದ ಬಗ್ಗೆ ಮಾತನಾಡದಿರುವುದೇ ಲೇಸು. ಕನ್ನಡದಲ್ಲಿ ಮಾತನಾಡಲು ಸಾಧ್ಯವಿಲ್ಲದ ನಿರ್ದೇಶಕರೊಬ್ಬರು ಸಂಭಾಷಣೆಯನ್ನು ತಾವೇ ಬರೆದು ಕನ್ನಡ ಭಾಷೆಯ ಸಿನಿಮಾ ನಿರ್ದೇಶಿಸಿದ್ದಾರೆಂಬುದೇ ಕನ್ನಡ ಚಿತ್ರರಂಗಕ್ಕೆ ಬಗೆದ ದೊಡ್ಡ ಅಣಕ!