Select Your Language

Notifications

webdunia
webdunia
webdunia
webdunia

'ಓಹೋ' ಎನ್ನಲಾಗದಿದ್ದರೂ 'ಓ.ಕೆ' ಎನ್ನಬಹುದಾದ ಚಿತ್ರ

'ಓಹೋ' ಎನ್ನಲಾಗದಿದ್ದರೂ 'ಓ.ಕೆ' ಎನ್ನಬಹುದಾದ ಚಿತ್ರ
EVENT
ಅದೇಕೋ ಏನೋ ಗೊತ್ತಿಲ್ಲ. ಈಗಾಗಲೇ ಒಂದು ಭಾಷೆಯಲ್ಲಿ ಯಶಸ್ಸು ಕಂಡು ಕನ್ನಡಕ್ಕೆ ರಿಮೇಕ್ ಆಗಿರುವ ಚಿತ್ರಗಳನ್ನು ವಿಮರ್ಶಿಸುವಾಗ ಬೇಡ ಬೇಡವೆಂದರೂ ಮೂಲಚಿತ್ರದ ಉಲ್ಲೇಖ ಬಂದುಬಿಡುತ್ತದೆ. ಪ್ರಜ್ವಲ್ ದೇವರಾಜ್ ಅಭಿನಯದ 'ಭದ್ರ' ಚಿತ್ರದ ಸಂದರ್ಭದಲ್ಲೂ ಈ ಛಾಯೆ ಮಾಡುತ್ತದೆ. 2006ರಲ್ಲಿ ಬಿಡುಗಡೆಯಾಗಿದ್ದ 'ರಣಂ' ಎಂಬ ತೆಲುಗು ಚಿತ್ರದ ರಿಮೇಕ್ ಇದು. ಮೂಲಚಿತ್ರದಲ್ಲಿ ಗೋಪಿಚಂದ್ ಹಾಗೂ ಕಾಮನಾ ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದರು. ಕನ್ನಡದಲ್ಲಿ ಪ್ರಜ್ವಲ್‌ಗೆ ನಾಯಕಿಯಾಗಿರುವವರು ಡೈಸಿ ಷಾ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಉನ್ನತ ವ್ಯಾಸಂಗಕ್ಕಾಗಿ ಹಳ್ಳಿಯಿಂದ ನಗರಕ್ಕೆ ಬರುವ ಭದ್ರ (ಪ್ರಜ್ವಲ್) ಓರ್ವ ಶಕ್ತಿಶಾಲಿ ಯುವಕ. ಆತ ಅಕಸ್ಮಾತ್ತಾಗಿ ಒಂದಷ್ಟು ಜನ ವಿಲನ್‌ಗಳನ್ನು ಎದುರುಹಾಕಿಕೊಳ್ಳಬೇಕಾಗಿ ಬರುತ್ತದೆ ಮತ್ತು ನಾಗ (ಸಂಪತ್) ಎಂಬಾತ ಅವರ ಲೀಡರ್ ಆಗಿರುತ್ತಾನೆ. ಕಥಾನಾಯಕನಿಗೆ ಕಾವ್ಯ (ಡೈಸಿ ಷಾ) ಎಂಬ ಹುಡುಗಿಯ ಮೇಲೆ ಪ್ರೀತಿ ಹುಟ್ಟುತ್ತದೆ ಮತ್ತು ಎಂದಿನಂತೆ ಆಕೆ ಖಳನಾಯಕ ನಾಗನ ಸೋದರಿಯೇ ಆಗಿರುತ್ತಾಳೆ...!!

ಇದು ನಾಗನ ಗಮನಕ್ಕೆ ಬಂದಾಗ, ಹಳ್ಳಿಗೆ ಹಿಂದಿರುಗುವಂತೆ ಆತ ಭದ್ರನನ್ನು ಎಚ್ಚರಿಸುತ್ತಾನೆ. ಆದರೆ ನಗರದಲ್ಲೇ ಉಳಿದು ನಾಗನಿಗೆ ಸೂಕ್ತ ಉತ್ತರವನ್ನು ಹೇಳಲು ಭದ್ರ ನಿರ್ಧರಿಸುತ್ತಾನೆ. ಚಿತ್ರದ ಅರ್ಧಭಾಗ ಮುಗಿದ ನಂತರ ನಾಗನಿಗೆ ತನ್ನ ಶಕ್ತಿಯನ್ನು ತೋರಿಸುವ ಭದ್ರ ಅವನಿಗೆ ಸವಾಲು ಹಾಕುತ್ತಾನೆ. ತಿಕ್ಕಾಟಗಳು ಬೆಳೆಯುತ್ತಾ ಹೋಗುತ್ತವೆ. ಅಂತಿಮವಾಗಿ, ದ್ವೇಷವನ್ನು ಇಟ್ಟುಕೊಳ್ಳುವುದರಿಂದ ಹಾಗೂ ಭಯದ ವಾತಾವರಣವನ್ನು ಸೃಷ್ಟಿಸುವುದರಿಂದ ಜೀವನದಲ್ಲಿ ಏನನ್ನೂ ಸಾಧಿಸಲಾಗುವುದಿಲ್ಲ, ಅದಷ್ಟೇ ಜೀವನವಲ್ಲ ಎಂದು ಹೇಳುವ ಭದ್ರ ಕಾವ್ಯಳ ಜೊತೆಗೆ ಹೊರಟುಹೋಗುತ್ತಾನೆ.

ಕನ್ನಡದ ವಾತಾವರಣಕ್ಕೆ ತಕ್ಕಂತೆ ನಿರ್ದೇಶಕ ಮಹೇಶ್‌ ರಾವ್ ಒಂದಷ್ಟು ಬದಲಾವಣೆಗಳನ್ನು ಮಾಡಿಕೊಂಡಿರುವುದು ಗೋಚರಿಸುತ್ತದೆ. ಆದರೆ ಪ್ರೇಕ್ಷಕರು ಊಹಿಸುವ ರೀತಿಯಲ್ಲೇ ಘಟನಾವಳಿಗಳು ಜರುಗುವುದರಿಂದ ಮಜಾ ಸಿಗುವುದಿಲ್ಲ. ಆದರೆ ಹಾಸ್ಯ ಮತ್ತು ಭಾವುಕತೆಯ ದೃಶ್ಯಗಳು ಚಿತ್ರದಲ್ಲಿ ಮೇಲುಗೈ ಸಾಧಿಸಿವೆ. ಈ ನಿಟ್ಟಿನಲ್ಲಿ ಹಾಸ್ಯನಟ ಬುಲೆಟ್ ಪ್ರಕಾಶ್ ಅಭಿನಂದನಾರ್ಹರು.

ಗಡಸು ಪಾತ್ರಕ್ಕೆ ತಕ್ಕಂತೆ ಪ್ರಜ್ವಲ್ ದೇವರಾಜ್ ಮತ್ತಷ್ಟು ಬದಲಾವಣೆಗಳನ್ನು ಮಾಡಿಕೊಂಡಿದ್ದರೆ ಚೆನ್ನಿತ್ತು. ನೃತ್ಯದಲ್ಲಿ, ಸೌಂದರ್ಯದಲ್ಲಿ ಅಂಕಗಳನ್ನು ಪಡೆಯುವ ಡೈಸಿ ಷಾ, ಪ್ರಜ್ವಲ್‌ಗಿಂತ ದೊಡ್ಡವರಾಗಿ ಕಾಣುವುದು ವಿಪರ್ಯಾಸ. ತಂತ್ರಜ್ಞರ ಕುಶಲ ಕೆಲಸ ಚಿತ್ರದಲ್ಲಿ ಎದ್ದುಕಾಣುತ್ತದೆ. ಅದರಲ್ಲೂ ವಿಶೇಷವಾಗಿ ಛಾಯಾಗ್ರಾಹಕರು ಪ್ರೇಕ್ಷಕರ ಮೆಚ್ಚುಗೆಯನ್ನು ಸಂಪಾದಿಸುತ್ತಾರೆ. ನೃತ್ಯವೂ ಇಷ್ಟವಾಗುತ್ತದೆ.

ಒಟ್ಟಿನಲ್ಲಿ ಸಾಹಸ, ಹಾಸ್ಯ, ಸೆಂಟಿಮೆಂಟ್ ದೃಶ್ಯಗಳಿಂದ ತುಂಬಿಕೊಂಡಿರುವ 'ಭದ್ರ'ನನ್ನು 'ಓಹೋ' ಎನ್ನಲಾಗದಿದ್ದರೂ 'ಓ.ಕೆ' ಎನ್ನಲಡ್ಡಿಯಿಲ್ಲ.

ವೆಬ್‌ದುನಿಯಾ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

Share this Story:

Follow Webdunia kannada