Select Your Language

Notifications

webdunia
webdunia
webdunia
webdunia

ಓಬೀರಾಯನ ಕಾಲದ ಕಥೆಗೆ ರೌಡಿಸಂ ಲೇಪನದ ವ್ಯರ್ಥ ಪ್ರಯತ್ನ

ಓಬೀರಾಯನ ಕಾಲದ ಕಥೆಗೆ ರೌಡಿಸಂ ಲೇಪನದ ವ್ಯರ್ಥ ಪ್ರಯತ್ನ
EVENT
ಲಾಂಗು-ಮಚ್ಚು-ರೌಡಿಸಂ-ಹೊಡೆದಾಟಗಳು ಸಿನಿಮಾದಲ್ಲಿ ವಿಜೃಂಭಿಸಿಬಿಟ್ಟರೆ ಮೊದಲ ಎರಡು ವಾರಗಳು ಕಲೆಕ್ಷನ್‌ ಭರ್ತಿಯಾಗುತ್ತದೆ. ವಾಹಿನಿಗಳಿಗೆ ಮಾರಾಟವಾಗುವುದರಿಂದ ಒಂದಷ್ಟು ದುಡ್ಡು ಬರುತ್ತದೆ. ನಂತರ ಬಿ ಮತ್ತು ಸಿ ಸೆಂಟರ್‌ಗಳಲ್ಲಿ ಚಿತ್ರ ಒಂದಷ್ಟು ದಿನ ಓಡಿಯೇ ಓಡುತ್ತದೆ ಎಂಬ ತಪ್ಪು ಕಲ್ಪನೆಯು ನಮ್ಮ ನಮ್ಮ ಚಲನಚಿತ್ರ ಪ್ರಭೃತಿಗಳಲ್ಲಿದೆ. ಆದರೆ ರೌಡಿಸಂ ಕುರಿತಾದ ಯಾವುದೋ ಒಂದು ಚಿತ್ರ ದಾಖಲೆಯ ಗಳಿಕೆ ಮಾಡಿತೆಂದ ಮಾತ್ರಕ್ಕೆ ಎಲ್ಲ ಚಿತ್ರಗಳೂ ಹಾಗಾಗಲು ಸಾಧ್ಯವೇ?

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

'ಹರೇ ರಾಮ ಹರೇ ಕೃಷ್ಣ' ಚಿತ್ರದ ವಿಮರ್ಶೆಯ ಸಂದರ್ಭದಲ್ಲಿ ಈ ಮಾತನ್ನು ಅನಿವಾರ್ಯವಾಗಿ ಹೇಳಬೇಕಿದೆ. ಕೆಳ ಮಧ್ಯಮವರ್ಗಕ್ಕೆ ಸೇರಿರುವ ಆನಂದ್‌ (ಶ್ರೀಮುರಳಿ) ಕೆ.ಎ.ಎಸ್‌. ಪರೀಕ್ಷೆಯಲ್ಲಿ ಉತ್ತೀರ್ಣನಾಗಿರುತ್ತಾನೆ. ಆದರೆ ಕೆ.ಎ.ಎಸ್‌. ಅಧಿಕಾರಿಯ ಸ್ಥಾನವನ್ನು ಪಡೆಯಲು ಲಂಚವನ್ನು ನೀಡಬೇಕಾದ ಅನಿವಾರ್ಯತೆ ಅವನಿಗೆ ಎದುರಾಗುತ್ತದೆ. ಕೆಟ್ಟವರ ಸಂಗದಲ್ಲಿದ್ದ ಆನಂದ್‌ನ ತಂದೆ ಒಂದಷ್ಟು ಹಣವನ್ನು ಸಂಗ್ರಹಿಸುತ್ತಾನಾದರೂ ಅದು ಸೇರಬಾರದ ಕೈಗಳಿಗೆ ಸೇರುತ್ತದೆ. ತನ್ನ ಹಣವನ್ನು ಮರಳಿಸುವಂತೆ ಕೇಳಲು ಹೋದ ಆನಂದ್‌ ಮೇಲೆ ಅಪರಾಧ ಜಗತ್ತಿನ ಕಳಂಕ ತಗುಲಿಕೊಳ್ಳುತ್ತದೆ.

ಆದರೆ ತನ್ನ ತಪ್ಪಿಲ್ಲದಿದ್ದಾಗಲೂ ಆರಕ್ಷಕ ಠಾಣೆಗೆ ಪದೇ ಪದೇ ಭೇಟಿನೀಡಬೇಕಾಗಿ ಬಂದಾಗ ಆನಂದ್‌ ವ್ಯಗ್ರನಾಗಿ ಭೂಗತ ಜಗತ್ತಿನೆಡೆಗೆ ಒಲವು ತೋರುತ್ತಾನೆ. ಅವನ ಕೈಗೆ ರಕ್ತದ ಕಲೆಗಳು ಅಂಟಿಕೊಳ್ಳುತ್ತವೆ ಹಾಗೂ ಕ್ರಮೇಣವಾಗಿ ಅವನಿಗೆ ಅಲ್ಲೊಂದು ಸ್ಥಾನ ದಕ್ಕುತ್ತದೆ. ವಾಡಿಕೆಯಂತೆ 'ಹಫ್ತಾ ವಸೂಲಿ'ಯ ಪಾಲು-ಪಾರೀಕತ್ತಿಗೆ ಸಂಬಂಧಿಸಿ ಎದುರಾಳಿಯೊಂದಿಗೆ ಸೆಣಸಾಡಬೇಕಾಗಿ ಬಂದಾಗ ಅವನ ಮಗ ಸಾಯುತ್ತಾನೆ.

ಇದು ಎದುರಾಳಿಯ ರೋಷಕ್ಕೆ ಕಾರಣವಾಗಿ ಪರಸ್ಪರ ಸರಣಿ ಹೊಡೆದಾಟಗಳು, ಕೊಲೆಗಳಲ್ಲಿ ಪರ್ಯಾವಸಾನವಾಗುತ್ತದೆ. ಹೀಗೆ ಯಾವ ಸಾಮಾಜಿಕ ಹೊಣೆಗಾರಿಕೆಯ ಹೊಳಹುಗಳೂ ಇಲ್ಲದ ಚಿತ್ರದಲ್ಲಿ ಮುರಳಿಯವರ ಅಭಿನಯವಾಗಲೀ ಪೂಜಾ ಗಾಂಧಿಯವರ ಚಮಕ್‌ ಆಗಲೀ ಗಮನ ಸೆಳೆಯುವುದಿಲ್ಲ.

ಇದ್ದುದರಲ್ಲಿ ರೂಪಶ್ರೀಯೇ ಪರವಾಗಿಲ್ಲ. ಮುರಳಿಯವರು ಇನ್ನಾದರೂ ತಮ್ಮ ಪಾತ್ರಗಳ ಕುರಿತು ಗಮನ ಹರಿಸುವುದು ಒಳ್ಳೆಯದು. ಚಿತ್ರದ ಪ್ರಥಮಾರ್ಧ ಬೋರಿಂಗ್‌, ದ್ವಿತೀಯಾರ್ಧ ಹಿಂಸೆಯ ಪರಮಾವಧಿ. ನಿರ್ದೇಶನ ಹಳ್ಳ ಹತ್ತಿದೆ. ಇಳಯರಾಜರಂಥ 'ಸಂಗೀತ ಸಿಂಧು', ಹಂಸಲೇಖಾರಂಥ 'ಸಾಹಿತ್ಯ-ಸಂಗೀತ ಬ್ರಹ್ಮ'ರಿಂದ ಅಂಥ ಜಾದೂ ಕಂಡುಬಂದಿಲ್ಲ ಎಂಬುದೇ ವಿಷಾದನೀಯ. ಯೇಸುದಾಸ್‌ ಹಾಡಿರುವ ವಿಷಾದ ಗೀತೆಯೊಂದೇ ಇದ್ದುದರಲ್ಲಿ ಸಹ್ಯ.

ಕನ್ನಡ ಚಿತ್ರಗಳು ಏಕೆ ಭರವಸೆ ಹುಟ್ಟಿಸುವುದಿಲ್ಲ ಎಂಬುದಕ್ಕೆ 'ಹರೇ ರಾಮ ಹರೇ ಕೃಷ್ಣ' ಒಂದು ಜ್ವಲಂತ ಸಾಕ್ಷಿ.

ವೆಬ್‌ದುನಿಯಾ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

Share this Story:

Follow Webdunia kannada