ತೆಲಂಗಾಣ: ಸಂಧ್ಯಾ ಥಿಯೇಟರ್ ಬಳಿ ಕಾಲ್ತುಳಿತದಿಂದಾಗಿ ಮಹಿಳೆ ಸಾವಿನ ಪ್ರಕರಣದಲ್ಲಿ ಬಂಧನವಾಗಿದ್ದ ನಟ ಅಲ್ಲು ಅರ್ಜುನ್ ಇಂದು ಮನೆಗೆ ಮರಳಿದ್ದಾರೆ. ಮಧ್ಯಂತರ ಜಾಮೀನು ಪಡೆದು ಮನೆಗೆ ಹಿಂದಿರುಗಿದ ನಟ ಅಲ್ಲು ಅರ್ಜುನ್ ಅವರನ್ನು ಭೇಟಿಯಾಗಲು ಸಂಬಂಧಿಕರು, ಚಿತ್ರರಂಗದ ಗಣ್ಯರು ಬರುತಿದ್ದಾರೆ.
ಇದೀಗ ನಟ ವಿಜಯ್ ದೇವರಕೊಂಡ ಮತ್ತು ನಾಗ ಚೈತನ್ಯ ಅವರಂತಹ ಸೆಲೆಬ್ರಿಟಿಗಳು ಅಲ್ಲು ಅರ್ಜುನ್ ಅವರನ್ನು ಭೇಟಿಯಾಗಿ ಬೆಚ್ಚಗಿನ ಅಪ್ಪುಗೆಯೊಂದಿಗೆ ನಿಮ್ಮೊಂದಿಗೆ ನಾವಿದ್ದೇವೆ ಎಂಬ ಧೈರ್ಯ ತುಂಬಿದ್ದಾರೆ.
ಸದ್ಯ ನಟನ ಮನೆಗೆ ಬಂದ ವಿಜಯ್ ದೇವರಕೊಂಡ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಶನಿವಾರ ಅಲ್ಲು ಅರ್ಜುನ್ ನಿವಾಸದಲ್ಲಿ ಪುಷ್ಪ 2 ನಿರ್ದೇಶಕ ಸುಕುಮಾರ್ ಕೂಡ ಕಾಣಿಸಿಕೊಂಡಿದ್ದಾರೆ. ಹೊರಾಂಗಣದಲ್ಲಿ ಅಲ್ಲು ಅರ್ಜುನ್ ಅವರನ್ನು ತಬ್ಬಿ, ಸಮಾಧಾನ ಹೇಳಿರುವುದನ್ನು ಕಾಣಬಹುದು.
ನಟ ಚಿರಂಜೀವಿ ಅವರ ಪತ್ನಿ ಸುರೇಖಾ ಕೊನಿದಾಳ ಅವರು ಶನಿವಾರ ಬೆಳಗ್ಗೆ ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನಲ್ಲಿರುವ ಅವರ ನಿವಾಸದಲ್ಲಿ ಅಲ್ಲು ಅರ್ಜುನ್ ಅವರನ್ನು ಭೇಟಿ ಮಾಡಿದರು.
ಶನಿವಾರ ಬೆಳಗ್ಗೆ ಜೈಲಿನಿಂದ ಬಿಡುಗಡೆಗೊಂಡು ಮನೆಗೆ ತಲುಪಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅಲ್ಲು ಅರ್ಜುನ್, ಅಭಿಮಾನಿಗಳು ಮತ್ತು ಪ್ರೀತಿಪಾತ್ರರಿಗೆ ಬೆಂಬಲ ನೀಡಿದ್ದಕ್ಕಾಗಿ ಧನ್ಯವಾದ ಹೇಳಿದ್ದಾರೆ. ''ಪ್ರೀತಿ ಮತ್ತು ಬೆಂಬಲಕ್ಕಾಗಿ ನಾನು ಎಲ್ಲರಿಗೂ ಧನ್ಯವಾದ ಹೇಳುತ್ತೇನೆ. ನನ್ನ ಎಲ್ಲಾ ಅಭಿಮಾನಿಗಳಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಚಿಂತೆ ಮಾಡಲು ಏನೂ ಇಲ್ಲ. ನಾನು ಚೆನ್ನಾಗಿದ್ದೇನೆ. ನಾನು ಕಾನೂನು ಪಾಲಿಸುವ ನಾಗರಿಕನಾಗಿದ್ದು, ಸಹಕರಿಸುತ್ತೇನೆ. ನಾನು ಮತ್ತೊಮ್ಮೆ ಕುಟುಂಬಕ್ಕೆ ನನ್ನ ಸಂತಾಪವನ್ನು ವ್ಯಕ್ತಪಡಿಸಲು ಬಯಸುತ್ತೇನೆ. ಅದೊಂದು ದುರದೃಷ್ಟಕರ ಘಟನೆ. ಆಗಿದ್ದಕ್ಕೆ ವಿಷಾದಿಸುತ್ತೇವೆ,'' ಎಂದರು.
ಅಲ್ಲು ಅರ್ಜುನ್ ಬಂಧನಕ್ಕೆ ಕಾರಣವೇನು?
ಡಿಸೆಂಬರ್ 4 ರಂದು, ಅಲ್ಲು ಅರ್ಜುನ್ ಅವರ ಇತ್ತೀಚಿನ ಚಿತ್ರ ಪುಷ್ಪ 2: ದಿ ರೂಲ್ ನ ಮಧ್ಯರಾತ್ರಿಯ ಪ್ರೀಮಿಯರ್ ಸಮಯದಲ್ಲಿ, ಕಾಲ್ತುಳಿತದಂತಹ ಪರಿಸ್ಥಿತಿ ಸಂಭವಿಸಿದ ನಂತರ ಒಬ್ಬ ಮಹಿಳೆ ಸಾವನ್ನಪ್ಪಿದರು. ಈ ಘಟನೆಯು ರೇವತಿ ಎಂಬ ಮಹಿಳೆಯ ಜೀವವನ್ನು ತೆಗೆದುಕೊಂಡಿತು ಮತ್ತು ಹಲವರು ಗಾಯಗೊಂಡರು. ಅಲ್ಲು ಅರ್ಜುನ್ ವಿರುದ್ಧ ಬಿಎನ್‌ಎಸ್‌ನ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.